ಸಚಿವ ಸಂಪುಟ ಸಭೆ: ಮಂಡನೆಯಾಗದ ಸುಳ್ಳುಸುದ್ದಿ ತಡೆ ಮಸೂದೆ

Picture of Savistara

Savistara

Bureau Report

ಒಟ್ಟು 18 ಮಸೂದೆಗಳಿಗೆ ಅನುಮೋದನೆ ನೀಡಿದ ಸಂಪುಟ ಸಭೆ

ಬೆಂಗಳೂರು: ದ್ವೇಷಭಾಷಣಕ್ಕೆ ಕಡಿವಾಣ ಹಾಕುವುದು, ಸುಳ್ಳುಸುದ್ದಿಗಳನ್ನು ನಿಯಂತ್ರಿಸುವುದು, ಸಾಮಾಜಿಕ ಬಹಿಷ್ಕಾರ ತಡೆಯುವುದಕ್ಕೆ ಸಂಬಂಧಿಸಿ ಕಠಿನ ಕಾನೂನುಗಳನ್ನು ತರುವುದಾಗಿ ಸರಕಾರ ಹೇಳುತ್ತಲೇ ಬಂದಿದ್ದು, ಗುರುವಾರದ ಸಚಿವ ಸಂಪುಟ ಸಭೆಯ ಮುಂದೆ ಇದಕ್ಕೆ ಸಂಬಂಧಿಸಿದ ಮಸೂದೆಗಳು ಮಂಡನೆ ಆಗುವ ನಿರೀಕ್ಷೆಗಳಿದ್ದವು. ಆದರೆ ಸಭೆಯಲ್ಲಿ ಈ ವಿಷಯಗಳು ಚರ್ಚೆಗೆ ಬರಲೇ ಇಲ್ಲ.ಧರ್ಮಸ್ಥಳದ ಪ್ರಕರಣದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಅದರ ವಿರುದ್ದ ಕ್ರಮ ತೆಗೆದುಕೊಳ್ಳುವ ಸಲು ವಾಗಿಯೇ ಮಸೂದೆಯನ್ನು ತರಲಾಗುತ್ತದೆಯೇ ಎಂಬ ಪ್ರಶ್ನೆಗೆ ವಿಧಾನಸೌಧದ ಬಳಿ ಉತ್ತರಿಸಿದ್ದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದಷ್ಟೇ ಹೇಳಿದ್ದರು. ಆದರೆ ಸಭೆಯಲ್ಲಿ ಚರ್ಚೆಯೇ ಆಗಿಲ್ಲ.ಇನ್ನು ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲುಗಳಿದ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕ ಜನದಟ್ಟಣೆ ನಿಯಂತ್ರಣ (ಸಮೂಹ ಸಮಾವೇಶ ಸ್ಥಳಗಳಲ್ಲಿ ಜನರ ನಿರ್ವಹಣೆ) ಮಸೂದೆ-2025 ಕೂಡ ಸಂಪುಟ ಸಭೆಯ ಮುಂದೆ ಬರಲಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿ ನ್ಯಾ | ಜಾನ್ ಮೈಕಲ್ ಡಿ’ ಕುನ್ನ ಕೂಡ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಅದರ ಆಧಾರದಲ್ಲಿ ಸಿಐಡಿ ತನಿಖೆ ಕೂಡ ನಡೆಯುತ್ತಿದೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿದ್ದ 14 ನಿವೇಶನಕ್ಕೆ ಸಂಬಂಧಿಸಿ ನ್ಯಾ । ಪಿ.ಎನ್. ದೇಸಾಯಿ ವಿಚಾರಣ ಆಯೋಗವೂ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಈ ವರದಿಯೂ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಂಡನೆ ಆಗಲೇ ಇಲ್ಲ. ಒಟ್ಟಾರೆ ಮುಂಗಾರು ಅಧಿವೇಶನಕ್ಕೂ ಮುನ್ನ ನಡೆದ ಸಚಿವ ಸಂಪುಟ ಸಭೆಯ ಸಾಕಷ್ಟು ವಿಷಯಗಳಲ್ಲಿ ಗಹನವಾದ ಚರ್ಚೆಗೆ ತೆರೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಹುಚರ್ಚಿತ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧನ ಮತ್ತು ನಿಯಂತ್ರಣ), ಸುಳ್ಳು ಸುದ್ದಿ ನಿಯಂತ್ರಣ ಮಸೂದೆ, ಸಾಮಾಜಿಕ ಬಹಿಷ್ಕಾರ (ನಿಯಂತ್ರಣ) ಮಸೂದೆಗಳು ಚರ್ಚೆಗೆ ಬರಲೇ ಇಲ್ಲ.

ರೋಹಿತ್ ವೇಮುಲಾ ಮಸೂದೆಗೂ ಸಿಗಲಿಲ್ಲ ಮುಕ್ತಿ

ಕರ್ನಾಟಕ ರೋಹಿತ್ ವೇಮುಲಾ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ ಬಗ್ಗೆ ಪ್ರತಿ ಸಂಪುಟ ಸಭೆಯಲ್ಲೂ ಮಂಡನೆ ಮಾಡಿ ಮುಂದೂಡಲಾಗುತ್ತಿದೆ. ಅದೇ ರೀತಿ ಈ ಬಾರಿ ಕೂಡ ಚರ್ಚೆ ನಡೆಸದೆ ಮುಂದೂಡಲಾಯಿತು. ಅಂತೆಯೇ ಜಿಎಸ್‌ಟಿ ಮಸೂದೆ ವಿಷಯದಲ್ಲೂ ಸಾಕಷ್ಟು ಗೊಂದಲಗಳಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿ ವಿಷಯವನ್ನೇ ಮುಂದೂಡಿತು. ಮುಂಗಾರು ಅಧಿವೇಶನದ ವೇಳೆ ಈ ಮಸೂದೆಗಳನ್ನು ಮಂಡಿಸಲು ಪರಿಶೀಲನಾ ಸಮಿತಿ ಅನುಮೋದನೆ ನೀಡಿತ್ತಾದರೂ ಸಚಿವ ಸಂಪುಟದ ಮುಂದೆ ಬಾರದಿರುವುದು ನಿರೀಕ್ಷೆ ಹುಸಿಗೊಳಿಸಿದೆ. ಇವೆಲ್ಲವೂ ಅಧಿವೇಶನ ಮುಕ್ತಾಯಗೊಳ್ಳುವುದರ ಒಳಗಾಗಿಯಾದರೂ ಮಂಡನೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಹಕಾರ ಸಂಘಗಳ ಅಧ್ಯಕ್ಷರ ಆಯ್ಕೆಗೂ ಮೀಸಲಾತಿ

ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರ ಸಂಘಗಳ ಅಧ್ಯಕ್ಷರ ಆಯ್ಕೆಯಲ್ಲೂ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದ್ದು, ಇದಕ್ಕಾಗಿ ಎರಡು ಪ್ರತ್ಯೇಕ ತಿದ್ದುಪಡಿ ಮಸೂದೆಗಳನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.ಈ ಹಿಂದೆ ಸಹಕಾರ ಹಾಗೂ ಸೌಹಾರ್ದ ಸಹಕಾರ ಸಂಘಗಳ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಕೊಡುವ ಬಗ್ಗೆ ಸರಕಾರ ಪ್ರಸ್ತಾವಿಸಿತ್ತು. ಇದಕ್ಕಾಗಿ ತಿದ್ದುಪಡಿ ಮಸೂದೆಗಳಿಗೆ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ನೀಡಿ ರಾಜ್ಯಪಾಲರಿಗೂ ರವಾನಿಸಿತ್ತು. ಆದರೆ ಇದಕ್ಕೆ ರಾಜ್ಯಪಾಲರ ಅಂಕಿತ ದೊರೆತಿರಲಿಲ್ಲ.ಹೀಗಾಗಿ ಸಹಕಾರ ಸಂಘಗಳ ಅಧ್ಯಕ್ಷರ ಆಯ್ಕೆ ವೇಳೆ ಮೀಸಲಾತಿ ಅನುಸರಿಸಲು ಮುಂದಾಗಿದ್ದು, ಪ್ರತ್ಯೇಕ ತಿದ್ದುಪಡಿಗೆ ಕೈಹಾಕಿದೆ. ಪಂಚಾಯತ್‌ಗಳ ಅಧ್ಯಕ್ಷ ಆಯ್ಕೆ ವೇಳೆ ಅನುಸರಿಸುವ ರೋಸ್ಟರ್ (ಆವರ್ತನ) ಪದ್ಧತಿಯನ್ನೇ ಇಲ್ಲಿಯೂ ಜಾರಿಗೊಳಿಸಲು ಯೋಜಿಸಿದೆ.ಕರ್ನಾಟಕ ಸಹಕಾರ ಸಂಘಗಳು (ತಿದ್ದುಪಡಿ) ಮಸೂದೆ-2025 ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ-2025ಕ್ಕೆ ಗುರುವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಆ.11ರಿಂದ ನಡೆಯುವ ಅಧಿವೇಶನದ ಮುಂದೆಯೂ ಬರಲಿದೆ.

ಅಲ್ಪಸಂಖ್ಯಾಕರ ಶಿಕ್ಷಣ ಸಂಸ್ಥೆಗಳಿಗೆ ಸೌಲಭ್ಯ

ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾಕರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ಮೂಲಕ ಮುಸ್ಲಿಮೇàತರ ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಸಂಖ್ಯೆ ಶೇ.50ರಷ್ಟು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ತೆಗೆದುಹಾಕಲು ಸಚಿವ ಸಂಪುಟ ನಿರ್ಣಯಿಸಿದೆ. ಆಯಾ ಅಲ್ಪಸಂಖ್ಯಾಕ ವರ್ಗದ ವಿದ್ಯಾರ್ಥಿಗಳು ಶೇ.50ರಷ್ಟು ಇಲ್ಲದಿದ್ದರೂ ಆ ಶಿಕ್ಷಣ ಸಂಸ್ಥೆಗೆ ಮಾನ್ಯತೆ ಸಿಗಲಿದೆ.

ಅಂತರ್ಜಲ ಬಳಕೆಗೆ ನಿರಾಕ್ಷೇಪಣ ಪತ್ರ ಕಡ್ಡಾಯ ಖಾಸಗಿ ಬೋರ್‌ವೆಲ್‌ಗಳ ನಿಯಂತ್ರಣಕ್ಕೆ ಕ್ರಮ ಸಂಪುಟ ಸಭೆಯಲ್ಲಿ ನಿರ್ಧಾರ

ಖಾಸಗಿ ಟ್ಯಾಂಕರ್‌ಗಳು ಸಹಿತ ವಿವಿಧ ಚಟುವಟಿಕೆಗಳಿಗೆ ಅಂತರ್ಜಲ ಬಳಕೆ(ಕೊಳವೆಬಾವಿ ಕೊರೆಯುವಿಕೆ)ಗೆ ಸಂಬಂಧಿಸಿ ಕೇಂದ್ರ ಅಂತರ್ಜಲ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯದಲ್ಲೂ ಅನುಷ್ಠಾನಕ್ಕೆ ತರುವ ಸಲುವಾಗಿ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ಮತ್ತು ನಿಯಂತ್ರಣ) (ತಿದ್ದುಪಡಿ) ಮಸೂದೆಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ.

ಬೋರ್‌ವೆಲ್‌ ಕೊರೆಯಲು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ, ಅಂತರ್ಜಲ ನಿದೇಶಕರು, ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಯ ಮುಖ್ಯ ಅಭಿಯಂತರ ಅವರನ್ನೊಳಗೊಂಡ ಸಕ್ಷಮ ಪ್ರಾಧಿಕಾರದಿಂದ ನಿರಾಕ್ಷೇಪಣ ಪತ್ರ(ಎನ್‌ಸಿ)ವನ್ನು ಪಡೆದುಕೊಳ್ಳಬೇಕು.ಇದರಡಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮನೆಬಳಕೆ ಮತ್ತು ಕುಡಿಯುವ ನೀರಿಗಾಗಿ ವೈಯಕ್ತಿಕ ಬೋರ್‌ವೆಲ್ ಕೊರೆದರೆ, ಕುಡಿಯುವ ನೀರು ಯೋಜನೆಗಾಗಿ, ಸಶಸ್ತ್ರಪಡೆ, ಕೇಂದ್ರೀಯ ಸಶಸ್ತ್ರ ಪಡೆ, ಕೃಷಿ ಚಟುವಟಿಕೆಗೆ ಅಂತರ್ಜಲ ಪಡೆಯುವವರು ನಿರಾಕ್ಷೇಪಣ ಪತ್ರ ಪಡೆಯುವ ಅಗತ್ಯವಿಲ್ಲ. ಜತೆಗೆ ಕೈಗಾರಿಕೆ, ಗಣಿ ಘಟಕಗಳು ಹಾಗೂ ಮೂಲಸೌಕರ್ಯ ಯೋಜನೆಗಳ ಅನುಷ್ಠಾನದ ವೇಳೆ ದಿನಬಳಕೆ ಅಥವಾ ಕುಡಿಯುವ ನೀರಿಗಾಗಿ 5 ಕ್ಯುಬಿಕ್ ಮೀಟರ್‌ವರೆಗೆ ಅಂತರ್ಜಲ ಬಳಕೆಗೆ ಎನ್‌ಒಸಿ ಬೇಕಿಲ್ಲ.ಆದರೆ ಖಾಸಗಿ ಟ್ಯಾಂಕರ್‌ಗಳು ಅಂತರ್ಜಲ ಬಳಕೆ ಮಾಡಲು ನಿರಾಕ್ಷೇಪಣ ಪತ್ರ ಪಡೆದುಕೊಳ್ಳಬೇಕು. ಕೈಗಾರಿಕೆ, ಗಣಿ ಘಟಕಗಳು ಹಾಗೂ ಮೂಲಸೌಕರ್ಯ ಯೋಜನೆಗಳ ಅನುಷ್ಠಾನದ ವೇಳೆ ದಿನಬಳಕೆ ಅಥವಾ ಕುಡಿಯುವ ನೀರಿಗಾಗಿ 5 ಕ್ಯುಬಿಕ್ ಮೀಟರ್‌ಗಿಂತ ಹೆಚ್ಚು ಪ್ರಮಾಣದ ಅಂತರ್ಜಲ ಬಳಸುವುದಿದ್ದರೆ ಎನ್‌ಒಸಿ ಪಡೆದುಕೊಳ್ಳಲೇಬೇಕು.ಒಂದು ವೇಳೆ ಈ ಕಾನೂನನ್ನು ಉಲ್ಲಂ ಸಿದರೆ 5 ಸಾವಿರ ರೂ. ಇದ್ದ ಸಾಧಾರಣ ದಂಡದ ಮೊತ್ತವನ್ನು 25 ಸಾ.ರೂ.ವರೆಗೆ ವಿಸ್ತರಸಲು ಅವಕಾಶ ಇದೆ. ಅಲ್ಲದೆ, 50 ಸಾವಿರ ರೂ.ವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ಹಾಗೂ ಹೆಚ್ಚುವರಿ ಅಪರಾಧಕ್ಕೆ ಒಂದು ದಿನಕ್ಕೆ 1 ಸಾವಿರ ರೂ.ವರೆಗೆ ದಂಡವನ್ನು ಸಂಗ್ರಹಿಸಲು ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

ವಿವಿಧ ನೀರಾವರಿ ಯೋಜನೆಗಳಿಗೆ ಅನುಮೋದನೆ

| ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವರದಾ ನದಿಯಿಂದ ನೆರೆಗಲ್ ಹಾಗೂ ಕುಸನೂರ ಏತ ನೀರಾವರಿ ಮುಖಾಂತರ 111 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 220 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

| ಬಾಗಲಕೋಟೆಯ ಸೊಕನಾದಗಿ, ಛಬ್ಬಿ, ತುಳಸಿಗೇರಿ, ದೇವನಾಳ ಮತ್ತು ಸುತ್ತಮುತ್ತಲಿನ 588 ಹೆಕ್ಟೇ‌ರ್ ಕ್ಷೇತ್ರಕ್ಕೆ ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು 17 ಕೋಟಿ ರೂ.

| ಬೆಳಗಾವಿ ಜಿಲ್ಲೆಯ ನವಿಲುತೀರ್ಥ ಆಣೆಕಟ್ಟಿನಿಂದ ಮಲಪ್ರಭಾ ನದಿಯ ನೀರು ಎತ್ತುವ ಮೂಲಕ ರಾಮದುರ್ಗ ತಾಲೂಕಿನ ಚಂದರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ 8 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.

ನಾಲೆಗಳ ಆಧುನೀಕರಣಕ್ಕೆ ಸಂಪುಟ ಸಮ್ಮತಿ

| ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಆಣೆಕಟ್ಟು ನಾಲೆ ಮತ್ತು ವಡಕೆಕಟ್ಟೆ ಹೈಲೆವೆಲ್ ನಾಲೆಗಳ ಆಧುನೀಕರಣ ಕಾಮಗಾರಿ, ಅಡ್ಡಮೋರಿಗಳ ಅಭಿವೃದ್ಧಿ ಕಾಮಗಾರಿಗಳಿಗೆ 49.85 ಕೋಟಿ ರೂ.

| ಹಾರಂಗಿ ಬಲದಂಡೆ ನಾಲೆಯಡಿ ಬರುವ ಮರೂರು ಶಾಖಾ ನಾಲಾ ಹಾಗೂ ವಿತರಣ ನಾಲೆಗಳ ಆಧುನೀಕರಣ ಕಾಮಗಾರಿಗೆ 90 ಕೋ ರೂ

[t4b-ticker]
error: Content is protected !!