ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಸೆಕ್ಷನ್ 64 ಪ್ರಕಾರ, ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಡ ಪರವಾನಿಗೆ ವಿತರಿಸುವ ಅಧಿಕಾರ ಗ್ರಾಮ ಪಂಚಾಯತಿಗಿದೆ.
ಆದರೆ, ಸಬ್-ಸೆಕ್ಷನ್ 5-A ಪ್ರಕಾರ ಲೇಔಟ್ ಅನುಮೋದನೆ ಮತ್ತು ಕಟ್ಟಡ ಪರವಾನಿಗೆ ವಿತರಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961 ಅನ್ನು ಪಾಲಿಸಬೇಕಾದ ಕಾರಣ, ಗ್ರಾಮ ಪಂಚಾಯತಿಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರ ಇಲ್ಲದಂತಾಗಿದೆ.ಈ ಹಿನ್ನೆಲೆಯಲ್ಲಿ, ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಅವರು ಕೆಳಗಿನ ಮುಖ್ಯ ಬೇಡಿಕೆಗಳನ್ನು ಮುಂದಿಟ್ಟರು : ಸೆಕ್ಷನ್ 64 ಗೆ ತಿದ್ದುಪಡಿ ತಂದು, ಲೇಔಟ್ ಅನುಮೋದನೆ ಮತ್ತು ಕಟ್ಟಡ ನಕ್ಷೆಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸುವುದು.ಗ್ರಾಮಾಂತರ ಯೋಜನಾ ಅಧಿನಿಯಮವನ್ನು ರೂಪಿಸಿ, ಗ್ರಾಮೀಣ ವಿನ್ಯಾಸಕಾರರನ್ನು ನೇಮಿಸುವುದು.ಸ್ವತ್ತು ತಂತ್ರಾಂಶದಲ್ಲಿ 11-B ಪ್ರಾವಧಾನವನ್ನು ಸೃಜಿಸುವುದು.ವಸತಿ ಯೋಜನೆಯಡಿ ಮನೆ ನಿರ್ಮಿಸಿದವರಿಗೆ ಕದನಂಬ್ರ (Khata Number) ನೀಡುವ ವ್ಯವಸ್ಥೆ ಮಾಡುವುದು.
ಈಗಾಗಲೇ 94-C ಮತ್ತು 94-CC ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ನೇರವಾಗಿ ಗ್ರಾಮ ಪಂಚಾಯತಿಗಳ ಮೂಲಕ ನಮೂನೆ 9 ಮತ್ತು 11-A ನೀಡುವ ಅವಕಾಶ ಕಲ್ಪಿಸುವುದು.ಶಾಸಕರು ಈ ತಿದ್ದುಪಡಿಗಳು ಗ್ರಾಮೀಣ ಪ್ರದೇಶದ ಜನರಿಗೆ ಸುಗಮ ಆಡಳಿತ ಮತ್ತು ತ್ವರಿತ ಸೇವೆಗಳನ್ನು ಒದಗಿಸುವಲ್ಲಿ ಮಹತ್ತರ ಪಾತ್ರವಹಿಸಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.














































