ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವಾಗ ಘಟನೆ ನಡೆದಿದೆ.
ರಾಮನಗರ: ಕಾಡಾನೆಯನ್ನು ಹಿಮ್ಮೆಟ್ಟಿಸುವಾಗ ಆನೆ ಕಾರ್ಯಪಡೆಯ ನೌಕರ ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಇಂದು ನಡೆದಿದೆ.ಶ್ರೇಯಸ್(20) ಸಾವಿಗೀಡಾದವರು. ಚನ್ನಪಟ್ಟಣ ಮೂಲದವರಾದ ಇವರು ಸಾತನೂರು ಆನೆ ಕಾರ್ಯಪಡೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು.ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವಾಗ ಘಟನೆ ನಡೆದಿದೆ. ತೀವ್ರ ಗಾಯಗೊಂಡಿದ್ದ ಇವರನ್ನು ಹಾರೋಹಳ್ಳಿ ಸಮೀಪದ ದಯಾನಂದ ಸಾಗರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾನವ-ವನ್ಯಜೀವಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಭೌಗೋಳಿಕವಾಗಿ ಅರಣ್ಯ ಪ್ರದೇಶ ಕಡಿಮೆ ಆಗುತ್ತಿರುವುದರಿಂದ ಆನೆಗಳು ನಾಡಿಗೆ ಲಗ್ಗೆ ಇಡುತ್ತಿವೆ. ಮಾನವ ಮತ್ತು ಆನೆ ಸಂಘರ್ಷ ಹೆಚ್ಚಿರುವ ರಾಜ್ಯದ 10 ಜಿಲ್ಲೆಗಳಲ್ಲಿ 2022ರಿಂದ ಈವರೆಗೂ 129 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಪರಿಹಾರವನ್ನು 15 ರಿಂದ 20 ಲಕ್ಷ ರೂಪಾಯಿಗೆ ಏರಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.ಇದೇ ವೇಳೆ, ರಾಜ್ಯದಲ್ಲಿ 6,395 ಆನೆಗಳಿವೆ. ದೇಶದಲ್ಲಿ ಹೆಚ್ಚು ಆನೆಗಳಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕಾಲಕ್ರಮೇಣ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು, ಪ್ರತಿ ವರ್ಷ ಸರಾಸರಿ 50 ಮಂದಿ ಸಾವನ್ನಪ್ಪುತ್ತಿರುವುದು ಕಳವಳಕಾರಿ. ಬಿಗಡಾಯಿಸುತ್ತಿರುವ ಮಾನವ-ಆನೆ ಸಂಘರ್ಷ ತಪ್ಪಿಸಲು 116 ಕೀ.ಮೀಟರ್ ರೈಲ್ವೇ ಬ್ಯಾರಿಕೇಡ್ ಹಾಕಲಾಗಿದೆ. 200 ಕೀ.ಮೀಟರ್ ಬ್ಯಾರಿಕೇಡ್ ಹಾಕಲು ಸಿಎಂ ಒಪ್ಪಿಗೆ ನೀಡಿದ್ದಾರೆ. ಇನ್ನೂ 300 ಕಿ.ಮೀ ಆನೆ ಕಂದಕ ನಿರ್ಮಿಸಲು ಬೇಡಿಕೆ ಇದೆ ಎಂದು ಸಚಿವರು ಹೇಳಿದ್ದಾರೆ.














































