ಇಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ 75ನೇ ಜನ್ಮದಿನ ; ಸಂಘದಲ್ಲಿ ಅವರ ಆರಂಭಿಕ ವರ್ಷಗಳು ಕರಾಳದ ಅವಧಿ
ಇಂದು ಸೆಪ್ಟೆಂಬರ್ 11. ಈ ದಿನ ನನಗೆ ಎರಡು ವ್ಯತಿರಿಕ್ತ ನೆನಪುಗಳು ಮರುಕಳಿಸುತ್ತವೆ.ಮೊದಲನೆಯದು, 1893 ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಚಿಕಾಗೋ ಭಾಷಣ ಮಾಡಿದ್ದು. “ಅಮೆರಿಕದ ಸಹೋದರಿ ಮತ್ತು ಸಹೋದರರೇ’ ಎಂಬ ಕೆಲವೇ ಪದಗಳೊಂದಿಗೆ ಅವರು ಸಭಾಂಗಣದಲ್ಲಿದ್ದ ಸಾವಿರಾರು ಜನರ ಹೃದಯಗಳನ್ನು ಗೆದ್ದರು. ಅವರು ಭಾರತದ ಅನಾದಿ ಆಧ್ಯಾತ್ಮಿಕ ಪರಂಪರೆ ಮತ್ತು ಜಾಗತಿಕ ಭ್ರಾತೃತ್ವದ ಮಹತ್ವವನ್ನು ವಿಶ್ವ ವೇದಿಕೆಗೆ ಪರಿಚಯಿಸಿದರು. ಎರಡನೆಯ ನೆನಪು ಭಯಾನಕ 9/11 ದಾಳಿಯದ್ದು, ಭಯೋತ್ಪಾದನೆ ಮತ್ತು ಮೂಲಭೂತವಾದದ ಬೆದರಿಕೆಯಿಂದಾಗಿ ವಿವೇಕಾನಂದರ ತತ್ತ್ವವು ದಾಳಿಗೆ ಒಳಗಾಯಿತು.ಈ ದಿನದ ಬಗ್ಗೆ ಇನ್ನೂ ಒಂದು ಗಮನಾರ್ಹ ವಿಷಯವಿದೆ. ವಸುಧೈವ ಕುಟುಂಬಕಂ ತತ್ತ್ವದಿಂದ ಪ್ರೇರಿತರಾಗಿ, ತಮ್ಮ ಇಡೀ ಜೀವನವನ್ನು ಸಾಮಾಜಿಕ ಪರಿವರ್ತನೆ ಮತ್ತು ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವವನ್ನು ಬಲಪಡಿಸಲು ಮುಡಿಪಾಗಿಟ್ಟ ವ್ಯಕ್ತಿತ್ವದ ಜನ್ಮದಿನ ಇಂದು.
ಆರೋಗ್ಯಕರ ಜೀವನಕ್ಕೆ ಪ್ರಾರ್ಥನೆ
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರು ಅವರನ್ನು ಗೌರವದಿಂದ ಪೂಜನೀಯ ಸರಸಂಘಚಾಲಕ್ ಎಂದು ಕರೆಯುತ್ತಾರೆ. ಹೌದು, ನಾನು ಶ್ರೀ ಮೋಹನ್ ಭಾಗವತ್ ಜೀ ಅವರ ಬಗ್ಗೆ ಮಾತನಾಡುತ್ತಿದ್ದೇನೆ, ಅವರ 75ನೇ ಹುಟ್ಟುಹಬ್ಬವುಕಾಕತಾಳೀಯವಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಇದೇ ವರ್ಷದಲ್ಲಿ ಬರುತ್ತದೆ. ನಾನು ಅವರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ ಮತ್ತು ಅವರ ಸುದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ.
ಗುಜರಾತ್‌ನಲ್ಲಿ ಆರೆಸ್ಸೆಸ್ ಬಲವರ್ಧನೆ
ಮೋಹನ್ ಜೀ ಅವರ ಕುಟುಂಬದೊಂದಿಗೆ ನನಗೆ ಗಾಢವಾದ ಬಾಂಧವ್ಯವಿದೆ. ಮೋಹನ್ ಜೀ ಅವರ ತಂದೆ ದಿವಂಗತ ಮಧುಕರ್‌ರಾವ್ ಭಾಗವತ್ ಜೀ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ದೊರಕಿತು. ನನ್ನ “ಜ್ಯೋತಿಪುಂಜ್’ ಪುಸ್ತಕದಲ್ಲಿ ಅವರ ಬಗ್ಗೆ ವಿವರವಾಗಿ ಬರೆದಿದ್ದೇನೆ.ಗುಜರಾತಿನಾದ್ಯಂತ ಆರ್‌ಎಸ್‌ಎಸ್ ಅನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ರಾಷ್ಟ್ರ ನಿರ್ಮಾಣದ ಬಗ್ಗೆ ಮಧುಕರ್‌ರಾವ್ ಜೀ ಅವರ ಉತ್ಸಾಹ ಎಷ್ಟು ಇತ್ತೆಂದರೆ ಅವರ ಮಗ ಮೋಹನ್ ಜೀ ಅವರನ್ನು ಭಾರತದ ಪುನರುತ್ಥಾನಕ್ಕಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿತು. ಇದು ಪರಸಮಣಿ ಮಧು-ಕರ್‌ರಾವ್ ಅವರು ಮೋಹನ್ ರಾವ್ ಅವರಲ್ಲಿ ಮತ್ತೂಂದು ಪರಸಮಣಿಯನ್ನು ಸೃಷ್ಟಿಸಿದಂತಿದೆ.
“ಭಾರತ ಮೊದಲು’ ಎಂಬ ಧೈಯ
ಮೋಹನ್ ಜೀ 1970ರ ದಶಕದ ಮಧ್ಯಭಾಗದಲ್ಲಿ ಪ್ರಚಾರಕರಾದರು. “ಪ್ರಚಾರಕ’ ಎಂಬ ಪದವನ್ನು ಕೇಳಿದ ತತ್‌ಕ್ಷಣ, ಅದು ಕೇವಲ ಪ್ರಚಾರ ಮಾಡುವ ಅಥವಾ ವಿಚಾರಗಳನ್ನು ಪ್ರಚುರಪಡಿಸುವ ವ್ಯಕ್ತಿ ಎಂದು ತಪ್ಪು ತಿಳಿಯಬಹುದು. ಆದರೆ ಆರ್‌ಎಸ್‌ಎಸ್ ಕಾರ್ಯವೈಖರಿಯ ಬಗ್ಗೆ ತಿಳಿದಿರುವವರಿಗೆ ಪ್ರಚಾರಕ ಪರಂಪರೆಯು ಸಂಘಟನೆ ಕೆಲಸದ ಮೂಲವಾಗಿದೆ ಎಂದು ತಿಳಿದಿದೆ. ಕಳೆದ 100 ವರ್ಷಗಳಲ್ಲಿ, ದೇಶಭಕ್ತಿಯ ಉತ್ಸಾಹದಿಂದ ಪ್ರೇರಿತರಾಗಿ, ಸಾವಿರಾರು ಯುವಜನರು ತಮ್ಮ ಮನೆ ಮತ್ತು ಕುಟುಂಬಗಳನ್ನು ತೊರೆದು “ಭಾರತ ಮೊದಲು ಎಂಬ ಧೈಯವನ್ನು ನನಸಾಗಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
ಆರ್‌ಎಸ್‌ಎಸ್‌ನಲ್ಲಿ ಅವರ ಆರಂಭಿಕ ವರ್ಷಗಳು ಭಾರತೀಯ ಇತಿಹಾಸದಲ್ಲಿನ ಅತ್ಯಂತ ಕರಾಳ ಅವಧಿ-ಯಾಗಿದ್ದವು. ಆಗಿನ ಕಾಂಗ್ರೆಸ್ ಸರಕಾರವು ಕಠಿನ ತುರ್ತು ಪರಿಸ್ಥಿತಿ ಹೇರಿದ್ದ ಸಮಯ ಅದು.ಪ್ರಜಾಪ್ರಭುತ್ವ ತತ್ತÌಗಳನ್ನು ಗೌರವಿಸುವ ಮತ್ತು ಭಾರತವು ಅಭಿವೃದ್ಧಿ ಹೊಂದಬೇಕೆಂದು ಬಯಸುವ ಯಾರಾದರೂ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಗೆ ಸೇರುವುದು ಸಹಜ. ಮೋಹನ್ ಜೀ ಮತ್ತು ಅಸಂ ಖ್ಯಾತ ಆರ್‌ಎಸ್‌ಎಸ್ ಸ್ವಯಂಸೇವಕರು ಅದನ್ನೇ ಮಾಡಿದರು. ಇದು ಬಡವರು ಮತ್ತು ದೀನದಲಿತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವರ ತಿಳಿವಳಿಕೆಯನ್ನು ರೂಪಿಸಿತು.ಹಲವು ವರ್ಷಗಳಲ್ಲಿ, ಭಾಗವತ್ ಜೀ ಆರ್‌ಎಸ್‌ಎಸ್‌ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು.1990ರ ದಶಕದಲ್ಲಿ ಅಖಿಲ ಭಾರತೀಯ ಶಾರೀರಿಕ್ ಪ್ರಮುಖ್ ಆಗಿ ಮೋಹನ್ ಜೀ ಅವರ ಅಧಿಕಾರಾವಧಿಯನ್ನು ಇನ್ನೂ ಅನೇಕ ಸ್ವಯಂಸೇವಕರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ, ಅವರು ಬಿಹಾರದ ಹಳ್ಳಿಗಳಲ್ಲಿ ಕೆಲಸ ಮಾಡುವುದರಲ್ಲಿ ಸಾಕಷ್ಟು ಸಮಯವನ್ನು ಕಳೆದರು. 2000ರಲ್ಲಿ, ಅವರು ಸರಕಾರ್ಯವಾಹ ಆದರು ಮತ್ತು ಇಲ್ಲಿಯೂ ಸಹ ಅವರು ತಮ್ಮ ವಿಶಿಷ್ಟ ಕಾರ್ಯ ಶೈಲಿಯನ್ನು ತೋರಿಸಿದರು. 2009 ರಲ್ಲಿ, ಅವರು ಸರಸಂಘಚಾಲಕ್ ಆದರು ಮತ್ತು ಇನ್ನೂ ಹೆಚ್ಚಿನ ಚೈತನ್ಯದಿಂದ ಕೆಲಸ ಮಾಡುತ್ತಿದ್ದಾರೆ.
ಸ್ಥಿರತೆ ಮತ್ತು ಹೊಂದಾಣಿಕೆ
ಮೋಹನ್ ಜೀ ಅವರು ತಮ್ಮ ಹೃದಯಕ್ಕೆ ಹತ್ತಿರವಾದ ಮತ್ತು ತಮ್ಮ ಕಾರ್ಯಶೈಲಿಯಲ್ಲಿ ಅಳವಡಿಸಿಕೊಂಡಿರುವ ಎರಡು ವಿಶಿಷ್ಟತೆಗಳ ಬಗ್ಗೆ ನಾನು ನೆನಪಿಸಿಕೊಳ್ಳಬಹುದಾದರೆ, ಅವು ಸ್ಥಿರತೆ ಮತ್ತು ಹೊಂದಾಣಿಕೆ. ಅವರು ಅತ್ಯಂತ ಸಂಕೀರ್ಣ ಸಂದರ್ಭಗಳಲ್ಲಿಯೂ ಸಹ ಸಂಘಟನೆಯನ್ನು ಮುನ್ನಡೆಸಿದ್ದಾರೆ. ಅವರು ಯಾವಾಗಲೂ ಹೆಚ್ಚು ಹೆಚ್ಚು ಯುವಜನರನ್ನು ಸಂಘ ಪರಿವಾರಕ್ಕೆ ತರುವತ್ತ ಗಮನಹರಿಸಿದ್ದಾರೆ. ವಿಶಾಲವಾಗಿ ಹೇಳುವುದಾದರೆ, ಭಾಗವತ್ ಜೀ ಅವರ ಅಧಿಕಾರಾವಧಿಯನ್ನು ಆರ್‌ಎಸ್ ಎಸ್‌ನ 100 ವರ್ಷಗಳ ಪಯಣದಲ್ಲಿ ಅತ್ಯಂತ ಪರಿವರ್ತನಾಶೀಲ ಅವಧಿ ಎಂದು ಪರಿಗಣಿಸಲಾಗುತ್ತದೆ.
ದೃಢಸಂಕಲ್ಪ ಎಂದಿಗೂ ಅಲುಗಾಡಲಿಲ್ಲ
ಮನುಕುಲವು ಶತಮಾನದ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದ್ದ ಕೋವಿಡ್ ಅವಧಿಯಲ್ಲಿ ಮೋಹನ್ ಜೀ ಅವರ ಪ್ರಯತ್ನಗಳನ್ನು ನಾನು ವಿಶೇಷವಾಗಿ ನೆನಪಿಸಿಕೊಳ್ಳುತ್ತೇನೆ. ಆ ಸಮಯದಲ್ಲಿ, ಆರ್‌ಎಸ್‌ಎಸ್‌ನ ಸಾಂಪ್ರದಾಯಿಕ ಚಟುವಟಿಕೆಗಳನ್ನು ಮುಂದುವರಿಸುವುದು ಸವಾಲಿನ ಸಂಗತಿಯಾಗಿತ್ತು. ಅನೇಕ ಸ್ಥಳಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿತ್ತು. ನಾವು ನಮ್ಮ ಅನೇಕ ಶ್ರಮಶೀಲ ಸ್ವಯಂಸೇವಕರನ್ನು ಕಳೆದುಕೊಂಡೆವು, ಆದರೆ ಮೋಹನ್ ಜೀ ಅವರ ಸ್ಫೂರ್ತಿ ಅವರ ದೃಢಸಂಕಲ್ಪ ಎಂದಿಗೂ ಅಲುಗಾಡಲಿಲ್ಲ.
ಈ ವರ್ಷದ ಆರಂಭದಲ್ಲಿ, ನಾಗಪುರದಲ್ಲಿ ಮಾಧವ ನೇತ್ರ ಚಿಕಿತಾŐಲಯದ ಉದ್ಘಾಟನ ಸಮಾರಂಭದಲ್ಲಿ, ಆರ್‌ಎಸ್‌ಎಸ್ ಕಲ್ಪವೃಕ್ಷ ಇದ್ದಂತೆ, ನಮ್ಮ ರಾಷ್ಟ್ರದ ರಾಷ್ಟ್ರೀಯ ಸಂಸ್ಕೃತಿ ಮತ್ತು ಸಾಮೂಹಿಕ ಪ್ರಜ್ಞೆಯನ್ನು ಚೈತನ್ಯಗೊಳಿಸುವ ಶಾಶ್ವತ ಆಲದ ಮರ ಎಂದು ನಾನು ಹೇಳಿದ್ದೆ. ಈ ಕಲ್ಪವೃಕ್ಷ ಬೇರುಗಳು ಆಳವಾದವು ಮತ್ತು ಬಲವಾದವು. ಏಕೆಂದರೆ ಅವು ಮೌಲ್ಯಗಳಲ್ಲಿ ಬೇರೂರಿವೆ. ಮೋಹನ್ ಭಾಗವತ್ ಜೀ ಈ ಮೌಲ್ಯ-ಗಳನ್ನು ಪೋಷಿಸಲು ಮತ್ತು ಮುನ್ನಡೆಸಲು ತಮ್ಮನ್ನು ಸಮರ್ಪಿಸಿಕೊಂಡಿರುವುದು ಸ್ಫೂರ್ತಿದಾಯಕವಾಗಿದೆ.ಮೋಹನ್ ಜೀ ಅವರ ವ್ಯಕ್ತಿತ್ವದ ಮತ್ತೊಂದು ಪ್ರಶಂಸನೀಯ ಗುಣವೆಂದರೆ ಅವರ ಮೃದು-ಮಾತಿನ ಸ್ವಭಾವ. ಅವರು ಅಸಾಧಾರಣವಾದ ಆಲಿಸುವ ಸಾಮರ್ಥಯವನ್ನು ಹೊಂದಿದ್ದಾರೆ. ಈ ಗುಣವು ಆಳವಾದ ದೃಷ್ಟಿಕೋನವನ್ನು ಖಾತ್ರಿಗೊಳಿಸಿದೆ ಮತ್ತು ಅವರ ವ್ಯಕ್ತಿತ್ವ ಮತ್ತು ನಾಯಕತ್ವಕ್ಕೆ ಸೂಕ್ಷ್ಮತೆ ಮತ್ತು ಘನತೆಯನ್ನು ತಂದಿದೆ.ಭಾಗವತ್ ಜೀ ಯಾವಾಗಲೂ “ಏಕ್ ಭಾರತ್ ಶ್ರೇಷ್ಠ ಭಾರತ್’ನ ಪ್ರಬಲ ಪ್ರತಿಪಾದಕರಾಗಿದ್ದಾರೆ. ಅವರು ಭಾರತದ ವೈವಿಧ್ಯತೆ ಮತ್ತು ನಮ್ಮ ನೆಲದ ಭಾಗವಾಗಿರುವ ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಯಲ್ಲಿ ದೃಢ ನಂಬಿಕೆಯು-ಳ್ಳವರಾಗಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ, ಮೋಹನ್ ಜೀ ಯಾವಾಗಲೂ ಸಂಗೀತ ಮತ್ತು ಹಾಡುಗಾರಿಕೆಯಂತಹ ಹವ್ಯಾಸಗಳಿಗೆ ಸಮಯ ಮೀಸಲಿಟ್ಟಿದ್ದಾರೆ. ಅವರು ವಿವಿಧ ಭಾರತೀಯ ಸಂಗೀತ ವಾದ್ಯಗಳಲ್ಲಿ ಪರಿಣತರು ಎಂದು ಹಲವರಿಗೆ ತಿಳಿದಿಲ್ಲ.
ಈ ವರ್ಷ, ಇನ್ನು ಕೆಲವೇ ದಿನಗಳಲ್ಲಿ, ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸಲಿದೆ. ಈ ವರ್ಷ ವಿಜಯದಶಮಿ, ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಮತ್ತು ಆರ್‌ಎಸ್‌ಎಸ್ ಶತಾಬಿ ಆಚರಣೆಗಳು ಒಂದೇ ದಿನ ಬರುತ್ತಿರುವುದು ಸಂತೋಷದ ವಿಷಯವಾಗಿದೆ.ಭಾರತ ಮತ್ತು ಪ್ರಪಂಚದಾದ್ಯಂತ ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರಿಗೆ ಇದೊಂದು ಐತಿಹಾಸಿಕ ಮೈಲಿಗಲ್ಲಾಗಲಿದೆ ಮತ್ತು ಈ ಸಂದರ್ಭದಲ್ಲಿ ಸಂಘಟನೆಯನ್ನು ಮುನ್ನಡೆಸುತ್ತಿರುವ ಮೋಹನ್ ಜೀ ಅವರಲ್ಲಿ ಅತ್ಯಂತ ತಿಳಿವಳಿಕೆ ಮತ್ತು ಕಠಿನ ಪರಿಶ್ರಮಿ ಸರಸಂಘಚಾಲಕ್ ಇದ್ದಾರೆ.
ನಾವು ಎಲ್ಲೆಗಳನ್ನು ಮೀರಿ ಎಲ್ಲರನ್ನೂ ನಮ್ಮವರೆಂದು ಪರಿಗಣಿಸಿದಾಗ, ಅದು ಸಮಾಜದಲ್ಲಿ ನಂಬಿಕೆ, ಸಹೋದರತ್ವ ಮತ್ತು ಸಮಾನತೆಯನ್ನು ಬಲಪಡಿಸುತ್ತದೆ. ಇಂತಹ ವಸುಧೈವ ಕುಟುಂಬಕಂನ ಜ್ವಲಂತ ಉದಾಹರಣೆ ಮೋಹನ್ ಜೀ ಅವರು ಎಂದು ಹೇಳುವ ಮೂಲಕ ನಾನು ಈ ಬರೆಹವನ್ನು ಮುಕ್ತಾಯಗೊಳಿಸುತ್ತೇನೆ. ಭಾರತ ಮಾತೆಯ ಸೇವೆಯಲ್ಲಿ ಮೋಹನ್ ಜೀ ಅವರಿಗೆ ಸುದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಾನು ಮತ್ತೂಮ್ಮೆ ಹಾರೈಸುತ್ತೇನೆ.
-ನರೇಂದ್ರ ಮೋದಿ, ಪ್ರಧಾನಮಂತ್ರಿ











































