ʻನೆಹರುರನ್ನು ಟೀಕೆ ಮಾಡಿದ್ದು ಸಾಕು, ನಿರುದ್ಯೋಗ-ಬೆಲೆ ಏರಿಕೆ ಬಗ್ಗೆ ಮಾತಾಡಿʼ: ಕೇಂದ್ರಕ್ಕೆ ಪ್ರಿಯಾಂಕಾ ಚಾಟಿ

Picture of Savistara

Savistara

Bureau Report

ಹೊಸದಿಲ್ಲಿ: ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜವಾಹರಲಾಲ್ ನೆಹರು ಅವರ ಮೇಲೆ ಎಷ್ಟು ಟೀಕೆ ಮಾಡಬೇಕೋ ಅದನ್ನೆಲ್ಲ ಪಟ್ಟಿ ಮಾಡಿ ಒಮ್ಮೆ ಚರ್ಚೆ ಮಾಡಿ ಮುಗಿಸಿ, ನಂತರ ನಿರುದ್ಯೋಗ, ಸಮಸ್ಯೆಗಳ ಬಗ್ಗೆ ಚರ್ಚಿಸಿ. ನೆಹರು ಅವರು ದೇಶಕ್ಕಾಗಿ ದುಡಿದ್ದಾರೆ ಎಂದು ತಿರುಗೇಟು ಕೊಟ್ಟರು.

ʻಪ್ರಧಾನಿ ಮೋದಿಯವರು ಕಳೆದ 12 ವರ್ಷಗಳಿಂದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಜವಾಹರಲಾಲ್ ನೆಹರು ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಸರಿಸುಮಾರು ಇದೇ ಅವಧಿಯನ್ನು ಅಂದರೆ ಸುಮಾರು 9 ವರ್ಷ ಅಥವಾ 3,200 ದಿನಗಳು ಜೈಲಿನಲ್ಲಿ ಕಳೆದಿದ್ದರು. ಸ್ವಾತಂತ್ರ್ಯದ ನಂತರ ಅವರು 17 ವರ್ಷಗಳ ಕಾಲ ಪ್ರಧಾನಿಯಾಗಿ ದೇಶ ಸೇವೆ ಸಲ್ಲಿಸಿದರು. ಪಂಡಿತ್ ನೆಹರು ದೇಶಕ್ಕಾಗಿ ಬದುಕಿದರು ಮತ್ತು ದೇಶದ ಸೇವೆ ಮಾಡುತ್ತಲೇ ಕೊನೆಯುಸಿರೆಳೆದರುʼ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಇಸ್ರೋ, ಐಐಟಿಗೆ ನೆಹರು ಕಾರಣ

ನೀವು ನೆಹರು ಅವರನ್ನು ಟೀಕಿಸುತ್ತಲೇ ಇರುತ್ತೀರಿ ಆದರೆ, ಅವರು ಇಸ್ರೋ ಆರಂಭಿಸದೆ ಇದ್ದಿದ್ದರೆ ಮಂಗಳಯಾನ ಮಾಡೋಕೆ ಆಗುತ್ತಿರಲಿಲ್ಲ. ಅವರು ಡಿಆರ್‌ಡಿಒ ಸ್ಥಾಪಿಸದೆ ಹೋಗದಿದ್ದರೆ, ತೇಜಸ್ ಯುದ್ಧವಿಮಾನ ಇರುತ್ತಿರಲಿಲ್ಲ. ಅವರು ಐಐಟಿ ಮತ್ತು ಐಐಎಂಗಳನ್ನು ಪ್ರಾರಂಭಿಸದಿದ್ದರೆ, ನಾವು ಐಟಿ ಕ್ಷೇತ್ರದಲ್ಲಿ ಮುಂದೆ ಬರುತ್ತಿರಲಿಲ್ಲ. ಅವರು ಏಮ್ಸ್ಅನ್ನು ಪ್ರಾರಂಭಿಸದಿದ್ದರೆ, ನಾವು ಕೋವಿಡ್‌ನಂತಹ ಸವಾಲನ್ನು ಎದುರಿಸಲು ಸಾಧ್ಯವಾಗುತ್ತಿತ್ತೇ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಅವರು ಪ್ರಶ್ನಿಸಿದರು.

ಟೀಕೆ ಪಟ್ಟಿ ಮಾಡಿ ಚರ್ಚೆ ಮಾಡಿ ಮುಗಿಸಿ

ಪ್ರಧಾನಿಯವರೇ ಒಂದು ಕೆಲಸ ಮಾಡಿ ನೆಹರು ಅವರಿಗೆ ನೀವು ಮಾಡಬೇಕಾದ ಅವಮಾನಗಳನ್ನು ಪಟ್ಟಿಮಾಡಿಕೊಂಡು ಬಿಡಿ. ಅದು 999 ಆಗಿರಲಿ ಅಥವಾ 9,999 ಎಷ್ಟೇ ಇರಲಿ. ಒಂದು ಪಟ್ಟಿ ಮಾಡಿ. ವಂದೇ ಮಾತರಂ ಬಗ್ಗೆ 10 ಗಂಟೆ ಚರ್ಚೆ ನಡೆಸಿದಂತೆ, ಇದಕ್ಕೂ ಒಂದು ಸಮಯ ನಿಗದಿಪಡಿಸೋಣ. ನಿಮಗೆ ಎಷ್ಟು ಸಮಯ ಬೇಕೋ ಅಷ್ಟು ಚರ್ಚೆಗೆ ನಾವು ಸಿದ್ಧ. ಆದರೆ, ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವ ಕೆಲಸಕ್ಕಾಗಿ ಸಂಸತ್ತಿನ ಅಮೂಲ್ಯ ಸಮಯವನ್ನು ಬಳಸೋಣ.ಒಮ್ಮೆ ಈ ವಿಷಯದ ಬಗ್ಗೆ ಮಾತನಾಡಿ ಮುಗಿಸಿಬಿಡೋಣ ಎಂದು ಪ್ರಿಯಾಂಕಾ ಗಾಂಧಿ ಸಲಹೆ ನೀಡಿದರು.

ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತನಾಡೋಣ

ಇಂದಿರಾ ಜೀ, ರಾಜೀವ್ ಜೀ ಏನು ಮಾಡಿದರು? ಕುಟುಂಬ ರಾಜಕಾರಣ ಎಂದರೇನು? ನೆಹರು ಅವರ ತಪ್ಪುಗಳೇನು? ಎಂಬ ದೂರುಗಳನ್ನು ದೇಶ ಕೇಳಲಿದೆ. ಇವೆಲ್ಲವನ್ನೂ ಮಾತನಾಡಿ ಅಲ್ಲಿಗೆ ಮುಗಿಸೋಣ. ನಂತರ ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಮಾತನಾಡೋಣ ಎಂದು ಅವರು ಹೇಳಿದರು.ವಂದೇ ಮಾತರಂ ಕುರಿತ ಚರ್ಚೆಯನ್ನು ಆಯೋಜಿಸಿರುವುದು ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು. ಪ್ರಸ್ತುತದ ನೈಜ ಸಮಸ್ಯೆಗಳನ್ನು ಮರೆಮಾಚಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಈ ಚರ್ಚೆಯನ್ನು ಆಯೋಜಿಸಿದೆ ಎಂದು ಅವರು ಟೀಕಿಸಿದರು.

[t4b-ticker]
error: Content is protected !!