ಅಡಿಕೆ ಫಸಲು ನಷ್ಟದ ನಡುವೆ ಕೈ ಹಿಡಿಯದ ಬೆಳೆ ವಿಮೆ | ಕಾನೂನು ಮೊರೆಗೆ ಅಡಿಕೆ ಕೃಷಿಕರ ನಿರ್ಧಾರ

Picture of Savistara

Savistara

Bureau Report

ಸಾವಿರಾರು ಕುಟುಂಬಗಳ ಬದುಕಿಗೆ ಆಧಾರವಾಗಿರುವ ಅಡಿಕೆ ಬೆಳೆ, ಕಳೆದ ಐದಾರು ವರ್ಷಗಳಿಂದ ರೈತರ ಪಾಲಿಗೆ ನರಕಸದೃಶ ಅನುಭವ ನೀಡುತ್ತಿದೆ. ರೋಗಬಾಧೆ, ಹವಾಮಾನ ವೈಪರೀತ್ಯಗಳ ಜೊತೆಗೆ, ಈಗ ಬಹು ನಿರೀಕ್ಷಿತ ‘ಹವಾಮಾನ ಆಧಾರಿತ ಬೆಳೆ ವಿಮೆ’ ಕೂಡ ಕೈಕೊಟ್ಟಿದ್ದು, ಬೆಳೆಗಾರರು ಸರ್ಕಾರದ ಹಾಗೂ ವಿಮಾ ಕಂಪನಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಮಂಗಳೂರು: ಕರಾವಳಿ ಕರ್ನಾಟಕದ ಹಸಿರು ಸಿರಿಯ ಅಡಿಕೆ ತೋಟಗಳು ಇಂದು ಕಣ್ಣೀರ ಕಥೆ ಹೇಳುತ್ತಿವೆ.ಸಾವಿರಾರು ಕುಟುಂಬಗಳ ಬದುಕಿಗೆ ಆಧಾರವಾಗಿರುವ ಅಡಿಕೆ ಬೆಳೆ, ಕಳೆದ ಐದಾರು ವರ್ಷಗಳಿಂದ ರೈತರ ಪಾಲಿಗೆ ನರಕಸದೃಶ ಅನುಭವ ನೀಡುತ್ತಿದೆ.ರೋಗಬಾಧೆ, ಹವಾಮಾನ ವೈಪರೀತ್ಯಗಳ ಜೊತೆಗೆ, ಈಗ ಬಹು ನಿರೀಕ್ಷಿತ ‘ಹವಾಮಾನ ಆಧಾರಿತ ಬೆಳೆ ವಿಮೆ’ ಕೂಡ ಕೈಕೊಟ್ಟಿದ್ದು, ಬೆಳೆಗಾರರು ಸರ್ಕಾರದ ಹಾಗೂ ವಿಮಾ ಕಂಪನಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.ಇನ್ನೂ ರೈತ ಪರ ಸಂಘಟನೆಗಳು ಇದರ ವಿರುದ್ಧ ಪ್ರತಿಭಟನೆ ಹೋರಾಟ ನಡೆಸಲು ಚಿಂತನೆ ನಡೆಸುತ್ತಿದ್ದಾರೆ. ಇನ್ನು ರೈತರು ಹಾಗೂ ಸಹಕಾರಿ ಸಂಘಗಳು ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ಮನೆ ಮಾಡಿದೆ.

ಸಂಕಷ್ಟಗಳ ಸುರಿಮಳೆ:ಹಳದಿ ರೋಗ, ಎಲೆ ಚುಕ್ಕೆ ರೋಗ, ಕೊಳೆ ರೋಗಗಳು ಅಡಿಕೆ ತೋಟಗಳನ್ನು ಆವರಿಸಿವೆ. ಇದರ ಜೊತೆಗೆ, ಕಳೆದ ಎರಡು ವರ್ಷಗಳಿಂದ ಹೆಚ್ಚುತ್ತಿರುವ ತಾಪಮಾನ ಅಡಿಕೆ ಮರಗಳನ್ನು ಬೋಳಾಗಿಸಿವೆ. ನಳ್ಳಿಗಳು ಅಡಿಕೆ ಹಣ್ಣಾಗುವ ಮೊದಲೇ ನೆಲಕ್ಕೆ ಬೀಳುತ್ತಿದೆ. ಫಸಲು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕಿಳಿದಿದ್ದು, ಅಡಿಕೆ ಬೆಳೆಗಾರನ ಬದುಕು ಮೂರಾಬಟ್ಟೆಯಾಗಿದೆ.2024-25ನೇ ಸಾಲಿನಲ್ಲಿ ಅಡಿಕೆ ನಳ್ಳಿಗಳು ಹಣ್ಣಾಗುವ ಮೊದಲೇ ಉದುರಿ, ಬಹುತೇಕ ರೈತರಿಗೆ ಒಂದು ಕೊಯಿಲಿನ ಅಡಿಕೆಯಷ್ಟೇ ಸಿಕ್ಕಿದೆ. ಇದಲ್ಲದೆ, ಜುಲೈನಿಂದ ಆಗಸ್ಟ್ ನಡುವೆ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ಎಲ್ಲ ತೋಟಗಳಲ್ಲಿಯೂ ಕೊಳೆ ರೋಗ ಕಾಣಿಸಿಕೊಂಡು ಭಾರೀ ನಷ್ಟಕ್ಕೆ ಕಾರಣವಾಗಿತ್ತು. ಈ ಎರಡು ಕಾರಣಗಳಿಂದ ಶೇಕಡಾ 75ಕ್ಕೂ ಅಧಿಕ ಬೆಳೆ ಹಾನಿ ಸಂಭವಿಸಿದ್ದರೂ, ರೈತರ ನಿರೀಕ್ಷೆಯಷ್ಟು ಬಿಡಿ, ಕಳೆದ ಬಾರಿಗಿಂತಲೂ ಕಡಿಮೆ ವಿಮಾ ಪರಿಹಾರ ಖಾತೆಗೆ ಬಿದ್ದಿದೆ ಎಂಬುದು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ದಶಕಗಳ ಹಿಂದೆ ರೈತರ ಪಾಲಿನ ಲಾಟ್ರಿ ಎಂದೇ ಜನಜನಿತವಾಗಿದ್ದ ‘ಹವಾಮಾನ ಆಧಾರಿತ ಬೆಳೆ ವಿಮೆ’ ಈ ಬಾರಿ ರೈತರ ಕೈ ಹಿಡಿಯಲಿಲ್ಲ. ಸುಳ್ಯ ಭಾಗದ ಕೆಲವು ಗ್ರಾಮಗಳಲ್ಲಿ 9 ಪಟ್ಟು ಪರಿಹಾರ ಬಂದಿದ್ದರೆ, ಪುತ್ತೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ 5 ಪಟ್ಟು ಮಾತ್ರ ಬಂದಿದೆ. ಇದು ರೈತರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಮಾ ಕಂಪನಿಗೆ ಕಟ್ಟಿದ ಒಟ್ಟು ಪ್ರೀಮಿಯಂ ಹಣಕ್ಕಿಂತಲೂ ಕಡಿಮೆ ಎಂಬ ಆರೋಪ ಕೇಳಿ ಬಂದಿದೆ.ಲೆಕ್ಕಾಚಾರ ಹೀಗಿದೆ:ಒಂದು ಎಕರೆಗೆ ರೈತ 2590 ರೂಪಾಯಿ ಪ್ರೀಮಿಯಂ ಪಾವತಿಸಿದರೆ, ಕೇಂದ್ರ 5180 ರೂಪಾಯಿ, ರಾಜ್ಯ 10360 ರೂಪಾಯಿ ಪಾವತಿಸುತ್ತದೆ. ಹೀಗೆ ವಿಮಾ ಕಂಪನಿಗೆ ಪಾವತಿಯಾದ ಒಟ್ಟು ಪ್ರೀಮಿಯಂ ಮೊತ್ತ 18130 ರೂಪಾಯಿಗಳು. ಆದರೆ, ಹಲವು ರೈತರಿಗೆ ಈ ಪ್ರೀಮಿಯಂ ಮೊತ್ತಕ್ಕಿಂತಲೂ ಕಡಿಮೆ, ಕೆಲವರಿಗೆ ಅರ್ಧದಷ್ಟು ಅಥವಾ ಅದಕ್ಕಿಂತಲೂ ಕಡಿಮೆ ಹಣ ಬಂದಿದೆ. ಇದರಿಂದ, ಬೆಳೆ ವಿಮೆಯಿಂದ ನಿಜವಾಗಿ ಲಾಭಪಡೆದವರು ವಿಮಾ ಕಂಪನಿಗಳು ಎಂಬುದು ಸ್ಪಷ್ಟವಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ರೈತ ಪಾವತಿಸಿದ ಪ್ರೀಮಿಯಂ ಮೊತ್ತಕ್ಕಿಂತಲೂ ಕಡಿಮೆ ಹಣ ಬಂದಿರುವುದು ರೈತರನ್ನು ಕಂಗಾಲಾಗಿಸಿದೆ.

ವಿಮಾ ಮೊತ್ತ ಕಡಿಮೆ ಬರಲು ಕಾರಣವೇನು?ನಿಯಮಾವಳಿಗಳ ತಿದ್ದುಪಡಿ: 2023ರಲ್ಲಿ ಹೊಸ ಸರ್ಕಾರ ಬಂದ ನಂತರ, ವಿಮಾ ಕಂಪನಿಗಳು ಪ್ರೀಮಿಯಂ ಸ್ವೀಕಾರಕ್ಕೆ ಹಿಂದೇಟು ಹಾಕಿದ್ದವು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಟರ್ಮ್ ಶೀಟ್ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ, ಕಳೆದ 10 ವರ್ಷಗಳ ಹವಾಮಾನ ಬದಲಾವಣೆ ಗಮನದಲ್ಲಿಟ್ಟುಕೊಂಡು ಪರಿಹಾರ ನೀಡುವುದಾಗಿ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿತ್ತು.30ಪ್ರೀಮಿಯಂ ಪಾವತಿ ವಿಳಂಬ: 2024-25ನೇ ಸಾಲಿನ ವಿಮೆ ಪ್ರೀಮಿಯಂ ಪಾವತಿ 3 ತಿಂಗಳು ವಿಳಂಬವಾಗಿತ್ತು. ಇದು ವಿಮಾ ಮೊತ್ತ ಕಡಿಮೆ ಬರಲು ಒಂದು ಕಾರಣ ಎನ್ನಲಾಗುತ್ತಿದೆ.ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ತೀವ್ರ ಮಳೆ ಮತ್ತು ಮಾರ್ಚ್-ಏಪ್ರಿಲ್ನಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ಮೇನಲ್ಲಿ ಪ್ರಾರಂಭವಾದ ಮಳೆ ಸುಮಾರು ಮೂರು ತಿಂಗಳ ಕಾಲ ಎಡೆಬಿಡದೆ ಸುರಿದಿದೆ. ಇದರಿಂದ ಕೃಷಿಗೆ ಶೇಕಡಾ 75ಕ್ಕೂ ಅಧಿಕ ಹಾನಿಯಾಗಿದ್ದರೂ, ಪರಿಹಾರ ಮೊತ್ತ ಕಡಿಮೆಯಾಗಿ ಬರಲು ಕಾರಣವೇನೆಂಬ ಪ್ರಶ್ನೆಗೆ ಉತ್ತರವಿಲ್ಲದಾಗಿದೆ.

ಅನ್ಯಾಯ ಪ್ರಶ್ನಿಸಲು ಕೃಷಿಕರ ಸಿದ್ಧತೆ:ವಿಮಾ ಪರಿಹಾರ ವಿತರಣೆಯಲ್ಲಿ ಕೃಷಿಕರಿಗೆ ಆಗಿರುವ ಅನ್ಯಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಯಾವ ಮಾನದಂಡವನ್ನಿಟ್ಟುಕೊಂಡು ಪರಿಹಾರ ವಿತರಣೆ ಮಾಡಲಾಗಿದೆ ಎಂಬ ಪ್ರಶ್ನೆಯನ್ನು ರೈತರು ವಿವಿಧ ಇಲಾಖೆಗಳಿಂದ ಪಡೆಯುವ ಜತೆಗೆ, ವಿಮಾ ಸಂಸ್ಥೆಯನ್ನು ಪ್ರಶ್ನಿಸಲು ಚಿಂತನೆ ನಡೆಸುತ್ತಿದ್ದಾರೆ. ಮಳೆ ಪ್ರಮಾಣದ ಲೆಕ್ಕಾಚಾರವನ್ನು ಆ‌ರ್.ಟಿ.ಐ. ಮೂಲಕ ಪಡೆಯಲು ಕೆದಂಬಾಡಿ ಕೆಯ್ಯರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಅವರು ಪತ್ರ ಬರೆದಿದ್ದಾರೆ.ಮೂರು ವರ್ಷದ ಪರಿಹಾರದ ಲೆಕ್ಕಾಚಾರ:ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಗಣಪತಿ ಭಟ್ ಅವರು ಕಳೆದ ಮೂರು ವರ್ಷ ಅಡಿಕೆಗೆ ಕಟ್ಟಿದ ವಿಮೆ ಮತ್ತು ಪಡೆದ ಪರಿಹಾರದ ಲೆಕ್ಕಾಚಾರವನ್ನು ಹಂಚಿಕೊಂಡಿದ್ದಾರೆ:2022-23: 5 ಸಾವಿರ ರೂ. ಕಟ್ಟಿದ್ದು, 60 ಸಾವಿರ ರೂ. ಪರಿಹಾರ ಲಭಿಸಿತ್ತು. (ಕೇಂದ್ರ 35 ಸಾವಿರ, ರಾಜ್ಯ 60 ಸಾವಿರ ಪಾವತಿಸಿತ್ತು).2023-24: 10 ಸಾವಿರ ರೂ. ಪಾವತಿಸಿದ್ದು, 80 ಸಾವಿರ ರೂ. ಪರಿಹಾರ ಲಭಿಸಿತ್ತು. (ಕೇಂದ್ರ 70 ಸಾವಿರ, ರಾಜ್ಯ 1.20 ಲಕ್ಷ ಪಾವತಿಸಿತ್ತು).2024-25: 20 ಸಾವಿರ ರೂ. ಪ್ರೀಮಿಯಂ ಕಟ್ಟಿದ್ದು, ಕೇವಲ 10 ಸಾವಿರ ರೂ. ಪರಿಹಾರ ಲಭಿಸಿದೆ. (ಕೇಂದ್ರ 1.40 ಲಕ್ಷ, ರಾಜ್ಯ 2.40 ಲಕ್ಷ ಪಾವತಿಸಿತ್ತು).

ರೈತರ ಆಕ್ರೋಶ:

30ವಿಟ್ಲ ಕಸಬಾದ ಕೃಷಿಕ ಶ್ಯಾಮ್ ಮರಡಿತ್ತಾಯ ಅವರು 2.74 ಎಕರೆಗೆ ಕರಿಮೆಣಸಿಗೆ 951 ರೂ. ಹಾಗೂ ಅಡಿಕೆಗೆ 7122 ರೂ. ವಿಮಾ ಮೊತ್ತ ಪಾವತಿಸಿದ್ದು, ಸದ್ಯ ಪರಿಹಾರ 3995 ರೂ. ಮಾತ್ರ ಬಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೊಳೆರೋಗದಿಂದ ತತ್ತರಿಸಿದ ರೈತನ ಜೀವನದ ಮೇಲೆ ವಿಮಾ ಪರಿಹಾರವು ಗಾಯದ ಮೇಲೆ ಬರೆ ಹಾಕಿದಂತೆ ಆಗಿದೆ,” ಎಂದು ಅವರು ನೋವು ತೋಡಿಕೊಂಡಿದ್ದಾರೆ.ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ದರ್ಶನ್ ಎಚ್‌. ವಿ. ಅವರು, “ಎರಡು ವರ್ಷದ ಮಳೆಯ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸಗಳಿಲ್ಲ. ಈಗಿನ ಮಾಹಿತಿಗಳ ಪ್ರಕಾರ ಕಳೆದ ಸಾಲಿನಲ್ಲಿ ಪಾವತಿಯಾದ ಪರಿಹಾರದ ಮೊತ್ತದಷ್ಟೇ ಈ ಬಾರಿ ಪರಿಹಾರ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು,” ಎಂದು ಹೇಳಿದ್ದಾರೆ.ಕರಾವಳಿ ಕರ್ನಾಟಕದ ಅಡಿಕೆ ಬೆಳೆಗಾರರ ಬದುಕು ಇಂದು ಹತಾಶೆಯಿಂದ ಕೂಡಿದೆ. ಪ್ರಕೃತಿಯ ವಿಕೋಪ, ರೋಗಗಳ ಬಾಧೆ, ವಿಮೆಯ ವಂಚನೆ ಮತ್ತು ಸರ್ಕಾರದ ನಿರ್ಲಕ್ಷ್ಯ – ಈ ಎಲ್ಲವುಗಳಿಂದ ರೈತರು ಕಂಗಾಲಾಗಿದ್ದಾರೆ. ಈ ಸಮಸ್ಯೆಗೆ ಸರ್ಕಾರ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕು, ರೈತರಿಗೆ ನ್ಯಾಯ ಒದಗಿಸಬೇಕು ಎನ್ನುವ ಆಗ್ರಹ ರೈತಾಪಿ ವರ್ಗದಿಂದ ಕೇಳಿ ಬರುತ್ತಿದೆ.

[t4b-ticker]
error: Content is protected !!