ಸುಳ್ಯ, ಡಿ. 9: ಕೆಲವು ತಿಂಗಳ ಹಿಂದೆ ಮಾಣಿ ಮೈಸೂರು ಹೆದ್ದಾರಿಯ ಅರಂತೋಡು ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಮತ್ತು ದೇಹವನ್ನು ಹೊರಹಾಕಿ ಕುಳಿತು ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದ ಆರೋಪಿಗಳಲ್ಲೊಬ್ಬನಿಗೆ ಸುಳ್ಯ ನ್ಯಾಯಾಲಯ ಸಮುದಾಯ ಸೇವೆ ಶಿಕ್ಷೆ ಆದೇಶ ನೀಡಿದೆ.ಯುವಕರ ಹುಚ್ಚಾಟದ ದೃಶ್ಯವನ್ನು ಸ್ಥಳೀಯರೋರ್ವರು ವೀಡಿಯೋಮಾಡಿಸಾಮಾಜಿಕ -ಜಾಲತಾಣದಲ್ಲಿ ಹರಿಯಬಿಟ್ಟು ಯುವಕರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ನ್ಯಾಯಾಲಯಕ್ಕೆ ದೋಷಾರೋಪಣೆ
ಸಲ್ಲಿಸಿದ್ದರು. ನ್ಯಾಯಾಲಯಕ್ಕೆ ಹಾಜರಾದ ಆರೋಪಿ ಭಟ್ಕಳದ ಸಾಜಿಬ್‌ಗೆ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 5 ಸಾವಿರ ರೂ. ದಂಡ ಮತ್ತು 10 ದಿನಗಳ ಕಾಲ ಸಮುದಾಯ ಸೇವೆ ಶಿಕ್ಷೆಯನ್ನು ನೀಡಿ ಆದೇಶ ಮಾಡಿದ್ದಾರೆ.ಸಮುದಾಯ ಸೇವೆ ಶಿಕ್ಷೆ ಅಡಿಯಲ್ಲಿ ಸಾಜಿಬ್ ಡಿ. 9ರಿಂದ ಡಿ. 18ರ ವರೆಗೆ ಸುಳ್ಯ ಠಾಣೆಯ ಸಿಬಂದಿಯೊಂದಿಗೆ ಸುಳ್ಯ ಪೇಟೆಯ ಮುಖ್ಯ ಜಂಕ್ಷನ್ ನಲ್ಲಿ ನಿಂತು ಸಂಚಾರ ನಿಯಮಗಳನ್ನು ಹೊಂದಿರುವ ಫಲಕಗಳನ್ನು ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಹಾಗೂ ಸಂಚಾರ ನಿಯಂತ್ರಣ ಮಾಡಲು ಸಹಕರಿಸಬೇಕು ಎಂದು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ಮೋಹನ್ ಬಾಬು ಆದೇಶ ನೀಡಿದ್ದಾರೆ.













































