ಉಚಿತ ಬಸ್ ಪ್ರಯಾಣ ಕೊಡಿ ಎಂದು ಕೇಳಿದವರಾರು? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Picture of Savistara

Savistara

Bureau Report

ಬೆಂಗಳೂರು: ‘ಬಸ್‌ ಪ್ರಯಾಣವನ್ನು ಉಚಿತವಾಗಿ ಒದಗಿಸಲು ನಿಮ್ಮನ್ನು ಯಾರು ಕೇಳಿದ್ದರು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಜನೌಷಧ ಕೇಂದ್ರಗಳನ್ನು ನಿಷೇಧಿಸಿ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶವನ್ನು ಸಾರಾಸಗಟಾಗಿ ರದ್ದುಗೊಳಿಸಿರುವ ಹೈಕೋರ್ಟ್, ಈ ಪ್ರಕರಣಗಳ ವಿಚಾರಣೆ ವೇಳೆ ರಾಜ್ಯ ಸರ್ಕಾರದ ನಿಲುವನ್ನು ಕಟುವಾಗಿ ಖಂಡಿಸಿದೆ.ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರ ಮುಚ್ಚಬೇಕೆಂಬ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹಾವೇರಿ ಜಿಲ್ಲೆ ಕುಸನೂರಿನ ಎಂ.ರಾಕೇಶ್ ಸೇರಿದಂತೆ ಒಟ್ಟು 34ಕ್ಕೂ ಹೆಚ್ಚು ಜನರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಮಹತ್ವದ ಆದೇಶ ನೀಡಿದೆ.ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ ಜೆ.ಎಂ.ಗಂಗಾಧರ ಅವರು, ‘ರಾಜ್ಯ ಸರ್ಕಾರದ ನೀತಿಗಳು ಜನಪರವಾಗಿಯೇ ಇವೆ. ಜನೌಷಧಿ ಕೇಂದ್ರಗಳು ಸಬ್ಸಿಡಿ ದರದಲ್ಲಿ ಔಷಧಿ ವಿತರಿಸಿದರೆ ರಾಜ್ಯ ಸರ್ಕಾರ ಸಂಪೂರ್ಣ ಪುಕ್ಕಟೆಯಾಗಿ ಔಷಧಿಗಳನ್ನು ಪೂರೈಸುತ್ತಿದೆ’ ಎಂದು ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

ಇದನ್ನು ಆಕ್ಷೇಪಿಸಿದ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಅನಿರುದ್ಧ ಎ.ಕುಲಕರ್ಣಿ, ಸರ್ಕಾರದ ನೀತಿ ಹೇಗೆ ಜನವಿರೋಧಿ ನಿಲುವಿನಿಂದ ಕೂಡಿದೆ ಎಂದು ವಿವರಿಸಿದರು.ಒಂದು ಹಂತದಲ್ಲಿ ಸರ್ಕಾರದ ಸಮರ್ಥನೆಯನ್ನು ತಳ್ಳಿಹಾಕಿದ ನ್ಯಾಯಪೀಠ, ‘ಕೇಂದ್ರ ಸರ್ಕಾರವೂ ಜನರ ಕಲ್ಯಾಣಕ್ಕಾಗಿಯೇ ಅಲ್ಲವೇ ಜನೌಷಧಿ ಯೋಜನೆ ಜಾರಿಗೆ ತಂದಿರುವುದು?, ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸಬೇಕು ಎಂದು ಯಾರಾದರೂ ನಿಮಗೆ ದೂರು ಕೊಟ್ಟಿದ್ದರಾ? ಇಲ್ಲವಲ್ಲಾ? ಹಾಗೆಯೇ, ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಯಾರಾದರೂ ಕೇಳಿದ್ದರಾ? ಇಲ್ಲವಲ್ಲಾ?… ಎಂದು ಪ್ರಶ್ನೆಗಳ ಸುರಿಮಳೆಗರೆದಿತು.’ಕ್ಯಾನ್ಸರ್‌ನಂತಹ ಔಷಧಗಳು ದುಬಾರಿ ಎಂದೇ ಅಲ್ಲವೇ ಅವುಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇವೆಲ್ಲಾ ಜನಕಲ್ಯಾಣ ಕಾರ್ಯಕ್ರಮ. ಅದನ್ನು ರಾಜ್ಯವೇ ಮಾಡಲಿ ಕೇಂದ್ರವೇ ಮಾಡಲಿ ಅದರಲ್ಲಿ ಸಣ್ಣತನ ಸಲ್ಲದು. ನೀವು ವಾಸ್ತವದಲ್ಲಿ ಶಿಕ್ಷಣ, ಔಷಧಗಳನ್ನು ಉಚಿತವಾಗಿ ನೀಡಬೇಕಿತ್ತು. ಅದು ಬಿಟ್ಟು ಬಸ್‌ ಫ್ರೀ… ಅದು ಫ್ರೀ, ಇದು ಫ್ರೀ ಎಂದು ಎಲ್ಲವನ್ನೂ ಫ್ರೀ ಮಾಡುವ ಯೋಚನೆ ಹೊಂದಿದ್ದೀರಿ’ ಎಂದು ಕುಟುಕಿತು.

ಜನೌಷಧಿ ನಿಷೇಧ ಆದೇಶ ರದ್ದು’ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವುದರಿಂದ ನೀವು ಸಾಧಿಸುವುದಾದರೂ ಏನಿದೆ? ಪ್ರಧಾನಿಯವರ ಹೆಸರಿನಲ್ಲಿ ಜನೌಷಧಿ ಯೋಜನೆ ಇದೆ ಎಂಬ ಏಕೈಕ ಕಾರಣಕ್ಕಾಗಿ ಅವುಗಳನ್ನು ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಆವರಣದಿಂದ ಎತ್ತಂಗಡಿ ಮಾಡಿಸುತ್ತಿದ್ದೀರಾ’ ಎಂದ ನ್ಯಾಯಪೀಠ ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿತು. ಇಂತಹುದೇ ಅರ್ಜಿಗಳು ಬೆಂಗಳೂರಿನ ಪ್ರಧಾನ ಪೀಠ ಮತ್ತು ಕಲಬುರಗಿಯ ಪೀಠಗಳಲ್ಲೂ ದಾಖಲಾಗಿದ್ದವು. ಈ ಅರ್ಜಿಗಳವಿಚಾರಣೆ ನಡೆಸಿದ್ದ ಸಮನ್ವಯ ನ್ಯಾಯಪೀಠಗಳು ಅರ್ಜಿದಾರರವಿರುದ್ಧ ಆತುರದ ಕ್ರಮ ಬೇಡ ಎಂಬ ಮಧ್ಯಂತರ ಆದೇಶನೀಡಿದ್ದವು. ಆದರೆ ಇದೀಗ ಧಾರವಾಡ ಪೀಠದ ನ್ಯಾಯಮೂರ್ತಿಎಂ.ನಾಗಪ್ರಸನ್ನ ಅವರ ಆದೇಶದಿಂದಾಗಿ ಈ ಎಲ್ಲಾ ಅರ್ಜಿಗಳೂಈಗ ನಿರರ್ಥಕವಾಗಿವೆ.

[t4b-ticker]
error: Content is protected !!