ಬೆಂಗಳೂರು : ಬಿಕ್ಕು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಇಲ್ಲಿನ ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ.ರೌಡಿಶೀಟರ್ ಬಿಕ್ಲು ಶಿವ ಯಾನೆ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ಅವರಿಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ನಂತರ ಬಂಧನದ ಭೀತಿಯಿಂದ ಬೈರತಿ ಬಸವರಾಜ್ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದರು. ಅವರು ಅಹಮದಾಬಾದ್‌ನಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಿರುವ ಖಚಿತ ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದರು. ವಿಮಾನ ನಿಲ್ದಾಣದ ಟರ್ಮಿನಲ್ 1ರ ಒಳಭಾಗಕ್ಕೆ ಸಿಐಡಿ ಅಧಿಕಾರಿಗಳಿಗೆ ಪ್ರವೇಶವಿಲ್ಲದ ಕಾರಣ, ದೇವನಹಳ್ಳಿ ಎಸಿಪಿ ಹರ್ಷ ಅವರು ಶಾಸಕರನ್ನು ವಶಕ್ಕೆ ಪಡೆದು ಹೊರಕ್ಕೆ ಕರೆತಂದರು.ಗುರುವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ನಿ ಅವರ ಪೀಠವು ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.ಗುರುವಾರ ಸಂಜೆ ಶಾಸಕರ ಭೈರತಿಯವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಬೆಂಗಳೂರು ನಗರದ ಸಿಐಡಿ ಕಚೇರಿಗೆ ಕರೆತಂದು, ಆ ಬಳಿಕ ಮುಂಜಾಗ್ರತಾ ಕ್ರಮವಾಗಿ ವಿಕ್ಟೋರಿಯಾ ಅಥವಾ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು, ಭೈರತಿ ಬಸವರಾಜ್ ಅವರನ್ನು ನಾಳೆ(ಫೆ.13) ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.
2025ರ ಜುಲೈ 15ರಂದು ಬೆಂಗಳೂರಿನ ಹಲಸೂರು ಕೆರೆ ಸಮೀಪ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಬಿಕ್ಕು ಶಿವನನ್ನು ಅವನ ತಾಯಿಯ ಮುಂದೆಯೇ ಕೊಲೆ ಮಾಡಲಾಗಿತ್ತು. ಈ ಕೊಲೆಗೆ ಸಂಚು ರೂಪಿಸಿದ ಆರೋಪ ಶಾಸಕ ಬೈರತಿ ಬಸವರಾಜ್ ಅವರ ಮೇಲಿದೆ. ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಪಡೆದಿದ್ದರೂ, ನಂತರದ ಬೆಳವಣಿಗೆಗಳಲ್ಲಿ ಜಾಮೀನು ರದ್ದಾಗಿದ್ದರಿಂದ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಯೂ ಶಾಸಕರಿಗೆ ನಿರಾಸೆಯುಂಟಾಗಿದೆ.













































