ನ್ಯೂಯಾರ್ಕ್ : ಅಧ್ಯಕ್ಷರ ತುರ್ತು ಅಧಿಕಾರವನ್ನು ಬಳಸಿಕೊಂಡು ವಿಶ್ವದ ಬಹುತೇಕ ರಾಷ್ಟ್ರಗಳ ಮೇಲೆ ಹೇರಲಾಗಿದ್ದ ಸುಂಕ’ಗಳನ್ನು ಸುಪ್ರೀಂ ಕೋರ್ಟ್ 6-3 ಮತಗಳ ಅಂತರದಿಂದ ರದ್ದುಗೊಳಿಸಿದೆ.
ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿ ನೇಮಿಸಿದ ಮೂವರು ಕನ್ಸರ್ವೇಟಿವ್ ನ್ಯಾಯಾಧೀಶರಿದ್ದರೂ ಕೋರ್ಟ್ ಅವರ ಪ್ರಮುಖ ಆಜೆಂಡಾದ ವಿರುದ್ಧವಾಗಿಯೇ ತೀರ್ಪು ನೀಡಿದೆ.ಈಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರೀ ಮುಖಭಂಗವಾಗಿದೆ.
ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ತೀರ್ಪಿನಲ್ಲಿ ತೆರಿಗೆ ಅಥವಾ ಸುಂಕಗಳನ್ನು ವಿಧಿಸುವ ಸಂಪೂರ್ಣ ಅಧಿಕಾರ ಸಂವಿಧಾನದ ಪ್ರಕಾರ ಕಾಂಗ್ರೆಸ್ ಗೆ ಸೇರಿದ್ದಾಗಿದೆ.ತೆರಿಗೆ ವಿಧಿಸುವ ಅಧಿಕಾರದಲ್ಲಿ ಯಾವುದೇ ಪಾಲನ್ನು ಸಂವಿಧಾನವು ಕಾರ್ಯಾಂಗಕ್ಕೆ ನೀಡಿಲ್ಲ ಎಂದು ತಿಳಿಸಿದ್ದಾರೆ.ಡೊನಾಲ್ಡ್ ಟ್ರಂಪ್ ಅವರು 2025ರ ಏಪ್ರಿಲ್‌ನಲ್ಲಿ ವ್ಯಾಪಾರ ಕೊರತೆಯನ್ನು ನೀಗಿಸಲು ‘ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಘೋಷಿಸಿ ಅನೇಕ ದೇಶಗಳ ಮೇಲೆ ಸುಂಕ ಹೇರಿದ್ದರು. ಇದಕ್ಕೂ ಮೊದಲು ಚೀನಾ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಮೇಲೆಯೂ ಮಾದಕ ದ್ರವ್ಯ ಕಳ್ಳಸಾಗಣೆ ತಡೆಗಟ್ಟುವ ನೆಪದಲ್ಲಿ ಸುಂಕ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹನ್ನೆರಡು ರಾಜ್ಯಗಳು ಮತ್ತು ನೂರಾರು ಸಣ್ಣ ಉದ್ಯಮಗಳು ನ್ಯಾಯಾಲಯದ ಮೊರೆ ಹೋಗಿದ್ದವು.
ಈ ಸುಂಕಗಳಿಂದಾಗಿ ಮುಂದಿನ ದಶಕದಲ್ಲಿ ಅಮೇರಿಕಾಕ್ಕೆ 3 ಟ್ರಿಲಿಯನ್ ಡಾಲರ್ ಆರ್ಥಿಕ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು.ಡಿಸೆಂಬರ್ ವರೆಗಿನ ಮಾಹಿತಿ ಪ್ರಕಾರ, ಈ ತುರ್ತು ಅಧಿಕಾರ ಬಳಸಿ ಸರ್ಕಾರ ಈಗಾಗಲೇ 133 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಸುಂಕ ಸಂಗ್ರಹಿಸಿದೆ.ಈಗ ರದ್ದಾಗಿರುವ ಸುಂಕದ ಹಣವನ್ನು ಕಂಪನಿಗಳಿಗೆ ಹಿಂತಿರುಗಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕೋರ್ಟ್ ಸ್ಪಷ್ಟನೆ ನೀಡಿಲ್ಲ. ಇದು ದೊಡ್ಡ ಕಾನೂನು ಸಮರಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿ ಬ್ರೆಟ್ ಕ್ಯಾವನಾಗ್ ಕಳವಳ ವ್ಯಕ್ತಪಡಿಸಿದ್ದಾರೆ.ಈ ಪ್ರಕರಣವನ್ನು ಅಮೇರಿಕಾದ ಇತಿಹಾಸದಲ್ಲೇ ಅತ್ಯಂತ ಪ್ರಮುಖವಾದುದು ಎಂದು ಕರೆದಿದ್ದ ಟ್ರಂಪ್, ಈ ತೀರ್ಪಿನಿಂದ ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬೀಳಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಸರ್ಕಾರವು ಇತರ ಕಾನೂನುಗಳ ಅಡಿಯಲ್ಲಿ ಸುಂಕಗಳನ್ನು ಮುಂದುವರಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ತೀರ್ಪು ಅಮೇರಿಕಾದಲ್ಲಿ ಅಧ್ಯಕ್ಷರ ಅಧಿಕಾರ ಮತ್ತು ಸಂಸತ್ತಿನ ಹಕ್ಕುಗಳ ನಡುವಿನ ಸಮತೋಲನವನ್ನು ಎತ್ತಿ ಹಿಡಿದಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.













































