ಬೆಂಗಳೂರು : ರಾಜ್ಯದ ನಿರುದ್ಯೋಗಿ ಯುವಜನತೆಗೆ ರಾಜ್ಯ ಸರ್ಕಾರವು ಬೃಹತ್ ನೇಮಕಾತಿಯ ಭರವಸೆ ನೀಡಿದ್ದು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ “ಅಭಯ ಹಸ್ತ” ಕಾರ್ಯಕ್ರಮವನ್ನು ಉದ್ಘಾಟಿಸಿ ‘ಅಭಯ ಹಸ್ತ’ ಕಾರ್ಯಕ್ರಮದಡಿ ನೂತನ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ವಿಶೇಷವಾಗಿ ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿನ ಬಾಕಿ ಇರುವ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಇಂದು 1,000 ಜನರು ನೇಮಕಾತಿ ಆದೇಶಗಳನ್ನು ಪಡೆದು ಆರೋಗ್ಯ ಇಲಾಖೆಗೆ ಸೇರ್ಪಡೆಯಾಗಿರುವುದು ಸಂತೋಷದ ವಿಷಯ. ಇದು ಕೇವಲ ವೃತ್ತಿಯಲ್ಲ, ಜೀವ ಉಳಿಸುವ ಹಾಗೂ ರೋಗ ತಡೆಯುವ ಸಾರ್ಥಕ ಕಾರ್ಯ. ನಮ್ಮ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ನೇಮಕಾತಿಯಲ್ಲಿದ್ದ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುತ್ತಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆ ಅತಿ ಮಹತ್ವದ್ದಾಗಿದ್ದು, ಇಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿದ್ದು, ಇವುಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಈ ಎಲ್ಲ ನೇಮಕಾತಿಗಳನ್ನು ಕೌನ್ಸೆಲಿಂಗ್ ಮೂಲಕ ಮಾಡುತ್ತಿದ್ದು, ಭ್ರಷ್ಠಚಾರ ತಡೆಯಲು ಸಾಧ್ಯವಾಗುತ್ತಿದೆ. 5,700 ವೈದ್ಯರು ಸೇರಿದಂತೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಟಾಚಾರವನ್ನು ತಡೆಯುವುದು ಸರ್ಕಾರದ ಆಶಯ.
ವರ್ಗಾವಣೆ ಏಜೆಂಟ್ ಗಳ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ನೌಕರರು ಇದಕ್ಕೆ ಬಲಿಯಾಗಬಾರದು. ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು. ಆರೋಗ್ಯ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಜಾತಿ, ಧರ್ಮಗಳ ಬೇಧಗಳನ್ನು ಮೀರಿ, ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ರೋಗಿಗಳು ಚಿಕಿತ್ಸೆಯ ಸಂದರ್ಭದಲ್ಲಿ ಬೇಕಾಗುವ ರಕ್ತವನ್ನು ಪಡೆಯಲು ಯಾವುದೇ ಜಾತಿ-ಧರ್ಮಗಳನ್ನು ಪರಿಗಣಿಸುವುದಿಲ್ಲ. ಆದರೆ ಜನರು ಗುಣಮುಖರಾದ ತಕ್ಷಣ ಮತ್ತೆ ಜಾತಿ-ಧರ್ಮಗಳ ಸುಳಿಯಲ್ಲಿ ಬೀಳುತ್ತಾರೆ. ರೋಗ ತಡೆಗಟ್ಟುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ದಿಸೆಯಲ್ಲಿ ಆರೋಗ್ಯ ಸಿಬ್ಬಂದಿಗಳು ಕಾರ್ಯತತ್ಪರರಾಗಬೇಕು. ರಾಜ್ಯದ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಸರ್ಕಾರ ಕಾರ್ಯಗತಗೊಳಿಸುತ್ತಿದೆ ಎಂದಿದ್ದಾರೆ.ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಸಿಎಂ, “ನೇಮಕಾತಿ ಪಡೆದವರು ಕೇವಲ ಉದ್ಯೋಗದ ಮನೋಭಾವದಿಂದ ಕೆಲಸ ಮಾಡಬಾರದು. ಜಾತಿ-ಧರ್ಮದ ಭೇದವಿಲ್ಲದೆ ಕರುಣೆ ಮತ್ತು ಸಮಾನತೆಯಿಂದ ಜನರ ಆರೋಗ್ಯ ರಕ್ಷಣೆಯ ಧ್ಯೇಯದೊಂದಿಗೆ ಸೇವೆ ಸಲ್ಲಿಸಬೇಕು” ಎಂದು ಕರೆ ನೀಡಿದರು.ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿರುವ ಸುಮಾರು 2.5 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ: ಇಂದು ನೇಮಕಾತಿ ಪಡೆದ ಒಟ್ಟು 878 ಮಂದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 320 ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.ವರ್ಗಾವಣೆಯಲ್ಲಿ ಲಂಚ ಮತ್ತು ಏಜೆಂಟ್ ಸಂಸ್ಕೃತಿಯನ್ನು ತೊಡೆದುಹಾಕಲು ಕೌನ್ಸಿಲಿಂಗ್ ಮೂಲಕ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಸಿಎಂ ಎಚ್ಚರಿಸಿದರು.
ಆರೋಗ್ಯ ಇಲಾಖೆಯ ಸಾಧನೆಗಳ ಮೆಲುಕು:
- ಹೃದಯ ಜ್ಯೋತಿ ಯೋಜನೆ: ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ’ ಯೋಜನೆಯಡಿ ಇದುವರೆಗೆ 13 ಸಾವಿರಕ್ಕೂ ಹೆಚ್ಚು ಜೀವಗಳನ್ನು ಉಳಿಸಲಾಗಿದೆ.
- ಕ್ಯಾನ್ಸರ್ ಚಿಕಿತ್ಸೆ: 16 ಜಿಲ್ಲೆಗಳಲ್ಲಿ ಬಡವರಿಗಾಗಿ ‘ಡೇ ಕೇರ್ ಕಿಮೋಥೆರಪಿ’ ಕೇಂದ್ರಗಳನ್ನು ಆರಂಭಿಸಲಾಗಿದೆ.
- ಮಹಿಳಾ ಆರೋಗ್ಯ: ‘ಶುಚಿ’ ಮತ್ತು ‘ಮೈತ್ರಿ’ ಯೋಜನೆಗಳ ಮೂಲಕ 19 ಲಕ್ಷ ವಿದ್ಯಾರ್ಥಿನಿಯರಿಗೆ ಸೌಲಭ್ಯ ನೀಡಲಾಗಿದ್ದು, ಭ್ರೂಣ ಹತ್ಯೆ ತಡೆಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವ ಯೋಜನೆ ಜಾರಿಯಲ್ಲಿದೆ.
- ಸೌರಸ್ವಾಸ್ಥ್ಯ: 5,000 ಆಸ್ಪತ್ರೆಗಳಿಗೆ ಸೌರ ವಿದ್ಯುತ್ ಅಳವಡಿಸುವ ಗುರಿ ಹೊಂದಿದ್ದು, ಈಗಾಗಲೇ 3,600 ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತ, ಆಯುಕ್ತ ಗುರುದತ್ ಹೆಗಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಿಎಂ ಸಿದ್ದರಾಮಯ್ಯ ಟ್ವೀಟ್
ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ “ಅಭಯ ಹಸ್ತ” ಕಾರ್ಯಕ್ರಮವನ್ನು ಉದ್ಘಾಟಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವೃಂದಗಳ ನೇಮಕಾತಿ ಆದೇಶಗಳನ್ನು ವಿತರಿಸಿ, ಶುಭ ಹಾರೈಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್, ನನ್ನ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.













































