ಕೋಲ್ಕತ್ತ: ಪಶ್ಚಿಮ ಬಂಗಾಳದ 23 ಜಿಲ್ಲೆಗಳ ಪೈಕಿ 9ರಲ್ಲಿ ಖಾತೆ ತೆರೆಯಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಫಲವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆದ್ದು ಮೂರನೇ ಎರಡರಷ್ಟು ಬಹುಮತ ಗಳಿಸಿರುವ ಬಿಜೆಪಿ, ಟಿಎಂಸಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸದೆ. 294 ಸದಸ್ಯ ಬಲದ ವಿಧಾನಸಭೆಯಲ್ಲಿ 80 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಟಿಎಂಸಿ ಸಫಲವಾಗಿದೆ.ಬಿಜೆಪಿಯ ಸಾಧನೆ ಪಟ್ಟಿಯಲ್ಲಿ ಸುವೇಂದು ಅಧಿಕಾರಿ ಅವರು ಮಮತಾ ಅವರ ವಿರುದ್ಧ 15 ಸಾವಿರ ಮತಗಳ ಅಂತರದಿಂದ ಗೆದ್ದಿರುವುದು ಪ್ರಮುಖವಾಗಿದೆ. ಬಂಗಾಳದ ಉತ್ತರ ಭಾಗದ 54 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದುಕೊಂಡಿತು, ಇದರಿಂದಾಗಿ ಟಿಎಂಸಿ ಕೇವಲ 14 ಸ್ಥಾನಕ್ಕೆ ಕುಸಿದಿದೆ.18 ಸ್ಥಾನಗಳನ್ನು ಹೊಂದಿದ್ದ ಡಾರ್ಜಿಲಿಂಗ್, ಕಾಲಿಂಪಾಂಗ್, ಜಗುರಿ ಮತ್ತು ಅಲಿಪುರ್ದೂರ್ ಎಂಬ ನಾಲ್ಕು ಜಿಲ್ಲೆಗಳಲ್ಲಿ ಒಂದೂ ಕ್ಷೇತ್ರವನ್ನು ಟಿಎಂಸಿ ಗೆಲ್ಲಲಿಲ್ಲ.
ಟಿಎಂಸಿಯ 22 ಸಚಿವರಿಗೆ ಸೋಲು
ಬಿಜೆಪಿ ಅಬ್ಬರಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 35 ಸಚಿವರಲ್ಲಿ 22 ಮಂದಿ ಸೋಲನುಭವಿಸಿದ್ದಾರೆ. ಇದು ಆಡಳಿತ ವಿರೋಧಿ ಅಲೆ ಎಂದು ವಿಶ್ಲೇಷಿಸಲಾಗಿದೆ.ಕೈಗಾರಿಕೆ, ಶಿಕ್ಷಣ, ವಸತಿ, ವಿದ್ಯುತ್, ಸಾರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಗಳನ್ನು ಹೊಂದಿದ್ದ ಸಚಿವರೇ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.ಭವಾನಿಪುರದಿಂದ ಸೋತ ಮಮತಾ ಬ್ಯಾನರ್ಜಿ, ಉತ್ತರ 24 ಪರಗಣ ಜಿಲ್ಲೆಯ ದಮ್ ದಮ್ ಕ್ಷೇತ್ರದಿಂದ ಚಂದ್ರಿಮಾ ಭಟ್ಟಾಚಾರ್ಯ ಸೇರಿದಂತೆ ಹಿರಿಯ ನಾಯಕರೂ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.













































