ಚೆನ್ನೈ: ಟಿವಿಕೆ ನಾಯಕ ವಿಜಯ್ ಅವರು ರವಿವಾರ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭಾಗಿಯಾಗಿ ವಿಜಯ್ ಅವರ ಪಕ್ಕದಲ್ಲೇ ಕುಳಿತು ಗಮನ ಸೆಳೆದರು.ಎಕ್ಸ್ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ಹೊಸ ಪೀಳಿಗೆ. ಹೊಸ ಧ್ವನಿ. ಹೊಸ ಕಲ್ಪನೆಯನ್ನು ತಮಿಳುನಾಡು ಆಯ್ಕೆ ಮಾಡಿದೆ.ತಿರು ವಿಜಯ್ ಅವರಿಗೆ ನನ್ನ ಶುಭ ಹಾರೈಕೆಗಳು. ಅವರು ತಮಿಳುನಾಡಿನ ಜನರ ಆಶಯಗಳನ್ನು ಈಡೇರಿಸಲಿ” ಎಂದು ಶುಭಹಾರೈಸಿದ್ದಾರೆ.ವಿಜಯ್ ಅವರೊಂದಿಗೆ ರಾಹುಲ್ ಗಾಂಧಿ ಆತ್ಮೀಯವಾಗಿ ಕಾಣಿಸಿಕೊಂಡರು. ಸೆಲ್ಸಿ ಕೂಡ ಕ್ಲಿಕ್ಕಿಸಿಕೊಂಡರು. ವಿಜಯ್ ಅವರು ರಾಹುಲ್ ಗಾಂಧಿ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು.ವಿಜಯ್ ಅವರಿಗೆ ಬಹುಮತಕ್ಕೆ ಅಗತ್ಯ ಸಂಖ್ಯೆ ಕೊರತೆಯಾದ ವೇಳೆ ಕಾಂಗ್ರೆಸ್ ಪಕ್ಷ ಡಿಎಂಕೆ ಮೈತ್ರಿಕೂಟದಿಂದ ದೂರವಾಗಿ ಐವರು ಶಾಸಕರ ಬೆಂಬಲ ಘೋಷಿಸಿತ್ತು. ವಿಜಯ್ ಸದ್ಯ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ವಿಸಿಕೆ ಮತ್ತು ಐಯುಎಂಎಲ್ ಶಾಸಕರ ಬೆಂಬಲದೊಂದಿಗೆ ಸ್ಪಷ್ಟ ಬಹುಮತ ಹೊಂದಿದ್ದಾರೆ.
ಸದ್ಯ ಟಿವಿಕೆಯ 9 ಮಂದಿ ಶಾಸಕರು ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿದ್ದು, ಕಾಂಗ್ರೆಸ್ ಮತ್ತು ಇರರ ಪಕ್ಷಗಳ ಶಾಸಕರಿಗೆ ಅವಕಾಶ ನೀಡಿಲ್ಲ. ಮುಂದಿನ ಹಂತದಲ್ಲಿ ನೀಡುವ ಸಾಧ್ಯತೆಗಳಿವೆ. ಇನ್ನೊಂದೆಡೆ ವಿಜಯ್ ಅವರು ‘ಈ ಸರಕಾರದಲ್ಲಿ ಬಹು ಅಧಿಕಾರ ಕೇಂದ್ರಗಳು ಇರುವುದಿಲ್ಲ, ಆಡಳಿತದಲ್ಲಿ ನಾನು ಏಕೈಕ ಅಧಿಕಾರವಾಗಿ ಉಳಿಯುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ.ಡಿಎಂಕೆ ಆಕ್ರೋಶಗೊಂಡಿದ್ದು, ಮೈತ್ರಿಕೂಟದಿಂದ(Secular Progressive Alliance) ಗೆದ್ದ ಹೊರತಾಗಿಯೂ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವಿಜಯ್ ಅವರಿಗೆ ಬೆಂಬಲ ನೀಡಿದ ನಿರ್ಧಾರದ ವಿರುದ್ಧ ಕಿಡಿ ಕಾರಿದೆ. ಪಕ್ಷಗಳೊಂದಿಗೆ ಎಲ್ಲ ಸಂಬಂಧ ಕಡಿದುಕೊಳ್ಳಲು ಮುಂದಾಗಿದೆ.













































