ಇಂಡಿಯನ್ ಪ್ರೀಮಿಯರ್ ಲೀಗ್-2026ರಲ್ಲಿ ಈಗಾಗಲೇ 54 ಪಂದ್ಯಗಳು ಮುಕ್ತಾಯಗೊಂಡಿವೆ. ಈ ನಡುವೆ 2 ತಂಡಗಳು ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದರೆ, ಇನ್ನುಳಿದ 8 ತಂಡಗಳು ನಾಲ್ಕು ಸ್ಥಾನಗಳಿಗಾಗಿ ಪೈಪೋಟಿ ನಡೆಸಿವೆ. ವಿಶೇಷವಾಗಿ ಅಗ್ರ ಸ್ಥಾನದಲ್ಲಿರುವ 6 ತಂಡಗಳು ಪ್ಲೇ ಆಫ್ ತಲುಪುಲು ತೀವ್ರ ಹಣಾಹಣಿ ನಡೆಸುತ್ತಿವೆ.
ಮುಂಬೈ-ಲಖನೌ ಹೊರಕ್ಕೆ
ಟೂರ್ನಿ ಆರಂಭಕ್ಕೂ ಮುನ್ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯುದ್ದಕ್ಕೂ ನೀರಸ ಪ್ರದರ್ಶನ ನೀಡುವ ಮೂಲಕ ನಿರಾಸೆ ಅನುಭವಿಸಿದೆ. ಆಡಿರುವ 11 ಪಂದ್ಯಗಳಲ್ಲಿ 8 ಸೋಲು ಹಾಗೂ 3 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.ರಿಷಬ್ ಪಂತ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ತಂಡ ಕೂಡ ನೀರಸ ಪ್ರದರ್ಶನ ತೋರಿದ್ದು, ಆಡಿರುವ 11 ಪಂದ್ಯಗಳಲ್ಲಿ ಕೇವಲ 3 ಗೆಲುವು ಹಾಗೂ 8 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆ ಮೂಲಕ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಯಿತು.
ಅಗ್ರಸ್ಥಾನಕ್ಕೇರಿದ ಆರ್‌ಸಿಬಿ
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ 4ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ವಿರುದ್ಧ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಅಗ್ರಸ್ಥಾನಕ್ಕೇರಿದೆ. ಇಂದು (ಮೇ 11) ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋತರೆ, ಆರ್‌ಸಿಬಿ ಅಗ್ರಸ್ಥಾನದಲ್ಲೇ ಮುಂದುವರೆಯಲಿದೆ.
ಹೈದರಾಬಾದ್, ಪಂಜಾಬ್, ಗುಜರಾತ್ ಸೆಣಸಾಟ
ಟೂರ್ನಿಯ ಆರಂಭದಿಂದಲೂ ಅಮೋಘ ಪ್ರದರ್ಶನ ತೋರಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು 7 ಗೆಲುವು ಹಾಗೂ 4 ಸೋಲುಗಳೊಂದಿಗೆ 14 ಅಂಕ ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ಟೂರ್ನಿಯ ಬಲಿಷ್ಠ ತಂಡವಾಗಿರುವ ಪಂಜಾಬ್ ಕಿಂಗ್ಸ್ 10 ಪಂದ್ಯಗಳಿಂದ 3 ಸೋಲು, 6 ಗೆಲುವು ಹಾಗೂ ಒಂದು ಪಂದ್ಯ ರದ್ದಾಗಿರುವುದರಿಂದ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.ಆರಂಭದಲ್ಲಿ ನಿರಂತರ ಸೋಲುಗಳಿಂದ ಕಂಗಾಲಾಗಿದ್ದ ಗುಜರಾತ್ ಟೈಟನ್ಸ್ ತಂಡವು ಸತತವಾಗಿ ಪಂದ್ಯಗಳನ್ನು ಗೆಲ್ಲುತ್ತಿದೆ. ಪರಿಣಾಮ, 11 ಪಂದ್ಯಗಳಿಂದ 7 ಗೆಲುವು ಹಾಗೂ 4 ಸೋಲುಗಳೊಂದಿಗೆ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.
ನಿಧಾನವಾಗಿ ಮೇಲೆ ಬರುತ್ತಿದೆ ಸಿಎಸ್ ಕೆ
ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡವು ಆರಂಭದಲ್ಲಿ ಸತತ ಸೋಲುಗಳಿಂದ ಕಂಗಾಲಾಗಿತ್ತು. ಆದರೆ, ಗೆಲುವಿನ ಹಳಿಗೆ ಮರಳಿರುವ ಸಿಎಸ್‌ಕೆ 11 ಪಂದ್ಯಗಳಿಂದ 6 ಗೆಲುವು ಹಾಗೂ 5 ಸೋಲುಗಳೊಂದಿಗೆ 12 ಅಂಕ ಹೊಂದಿದ್ದು, 5ನೇ ಸ್ಥಾನದಲ್ಲಿದೆ.
ಸೋಲಿನ ಸುಳಿಯಲ್ಲಿ ರಾಜಸ್ಥಾನ ರಾಯಲ್ಸ್
ಟೂರ್ನಿ ಆರಂಭದಲ್ಲಿ ನಿರಂತರ ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ, ಯುವ ಆಟಗಾರರಿಂದ ಕೂಡಿರುವ ರಾಜಸ್ಥಾನ ರಾಯಲ್ಸ್ ತಂಡವು, ಪ್ರಸ್ತುತ ಸೋಲಿನ ಸುಳಿಗೆ ಸಿಲುಕಿದೆ. ಸದ್ಯ, ಆಡಿರುವ 11 ಪಂದ್ಯಗಳಿಂದ 6 ಗೆಲುವು ಹಾಗೂ 5 ಸೋಲುಗಳೊಂದಿಗೆ 6ನೇ ಸ್ಥಾನದಲ್ಲಿದೆ.ಅಗ್ರ 6 ತಂಡಗಳು ಮುಂದಿನ ಹಂತ ತಲುಪಲು ತೀವ್ರ ಪೈಪೋಟಿ ನಡೆಸಿದ್ದರೆ, ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೂಡ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯಲು ಪೈಪೋಟಿ ನಡೆಸುತ್ತಿವೆ. ಆದರೆ, ಈ ಎರಡು ತಂಡಗಳು ಪ್ಲೇ ಆಫ್ ಪ್ರವೇಶಿಸಲು ಆಟದ ಜೊತೆ ಅದೃಷ್ಟ ಕೂಡ ಕೈಹಿಡಿಯಬೇಕು.












































