ಹೆಸರಿನಲ್ಲಿ ಪಕ್ಷ ಎಂದು ಇದ್ದರೂ, ಕಾಕ್ರೋಚ್ ಜನತಾ ಪಾರ್ಟಿ (ಜಿರಲೆ ಜನತಾ ಪಕ್ಷ- ಸಿಜೆಪಿ) ಒಂದು ನೋಂದಾಯಿತ ರಾಜಕೀಯ ಪಕ್ಷವಲ್ಲ. ವರ್ಷಗಳ ಕಾಲದಿಂದ ನಿರ್ದಿಷ್ಟ ತತ್ವ ಸಿದ್ಧಾಂತ ಆಧರಿಸಿ ನಡೆದುಬಂದ ಚಳವಳಿಯೂ ಅಲ್ಲ. ದಿಢೀರ್ ಹುಟ್ಟುಪಡೆದು, ಶರವೇಗದಲ್ಲಿ ವ್ಯಾಪಿಸುತ್ತಿರುವ ಒಂದು ಆನ್‌ಲೈನ್ ಆಂದೋಲನ.
ಇದರ ಹುಟ್ಟಿಗೆ ಆಧಾರವಾದದ್ದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆ. ‘ಕೆಲವು ಯುವಕರು ಜಿರಲೆಗಳಿದ್ದಂತೆ. ಅವರಿಗೆ ಯಾವುದೇ ಉದ್ಯೋಗ ಸಿಗುವುದಿಲ್ಲ. ಅಂಥವರು ತಾವೇ ಮಾಧ್ಯಮ, ಸಾಮಾಜಿಕ ಮಾಧ್ಯಮ, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಥವಾ ಇತರೆ ಕಾರ್ಯಕರ್ತರಾಗಿ ಸಮಾಜದ ಎಲ್ಲರ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ’ ಎಂದಿದ್ದರು. ಪದಾಂಕಿತ ಹಿರಿಯ ವಕೀಲ ಸ್ಥಾನಕ್ಕಾಗಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಹೀಗೆ ಹೇಳಿದ್ದರು ಎಂದು ವರದಿಯಾಗಿತ್ತು. ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟಿಕೊಂಡಿತ್ತು. ತಾವು ಹಾಗೆ ಹೇಳಿದ್ದು ಯುವಜನರ ಬಗ್ಗೆ ಅಲ್ಲ, ತಮ್ಮ ಮಾತನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ಸಿಜೆಐ ಸೂರ್ಯಕಾಂತ್ ಸ್ಪಷ್ಟೀಕರಣ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಹುಟ್ಟಿದ್ದೇ ಸಿಜೆಪಿ. ಇದೊಂದು ವಿಡಂಬನಾ ರಾಜಕೀಯ ಪಕ್ಷ. ‘ಯುವಕರಿಂದ ಯುವಕರಿಗಾಗಿ ಯುವಕರೇ ಆರಂಭಿಸಿದ ಜಾತ್ಯತೀತ, ಸಮಾಜವಾದಿ, ಪ್ರಜಾತಾಂತ್ರಿಕ ರಾಜಕೀಯ ವೇದಿಕೆ’ ಎಂದು ಸ್ವಯಂಘೋಷಣೆ ಮಾಡಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಜೆಪಿ ಬಗ್ಗೆ ಮೀಮ್‌ಗಳು, ಪೋಸ್ಟ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ರಾಜಕೀಯ ಮತ್ತು ಇತರ ರಂಗಗಳ ಕೆಲವು ಪ್ರಮುಖರು ಪಕ್ಷಕ್ಕೆ ಬೆಂಬಲ ಸೂಚಿಸಿದ್ದು, ಗಂಭೀರ ಚರ್ಚೆಗಳು ನಡೆಯುತ್ತಿವೆ. ಪಕ್ಷದ ವತಿಯಿಂದ ಮುಂಬರುವ ಬಿಹಾರದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕೆಲವರು ಇದು ದೇಶದ ರಾಜಕೀಯ ರಂಗದ ಭರವಸೆ, ನೆರೆಯ ರಾಷ್ಟ್ರಗಳಲ್ಲಿ ಆದಂತೆ ಇಲ್ಲೂ ಜೆನ್ ಝೀ ರಾಜಕಾರಣ ಬದಲಾವಣೆ ತರಬಲ್ಲದು ಎಂದರೆ, ಮತ್ತೆ ಕೆಲವರು ಇದು ಎರಡು ದಿನದ ಉನ್ಮಾದ ಅಷ್ಟೇ ಎನ್ನುತ್ತಿದ್ದಾರೆ.
1.71 ಕೋಟಿ ಫಾಲೋವರ್ಸ್: ಸಿಜೆಪಿ, ಸದ್ಯ ಅಮೆರಿಕದಲ್ಲಿರುವ ಪುಣೆಯ ಅಭಿಜೀತ್ ದೀಪ್ಕೆ ಎನ್ನುವ ಯುವಕ ಮೇ 16ರಂದು ಆರಂಭಿಸಿದ ವೇದಿಕೆ. ಯಾವ ಮುಂದಾಲೋಚನೆ, ವಿಶೇಷ ತಯಾರಿ ಇಲ್ಲದೇ ಆನ್‌ಲೈನ್‌ನಲ್ಲಿ ಪಕ್ಷ ಆರಂಭಿಸಿದ್ದಾಗಿ ದೀಪ್ಕೆ ಹೇಳಿದ್ದಾರೆ. ಆದರೆ, ಅದಕ್ಕೆ ಸಿಗುತ್ತಿರುವ ಸ್ಪಂದನೆ ನೋಡಿ ಸ್ವತಃ ಬೆರಗಾಗಿದ್ದಾರೆ. ಕೇವಲ ನಾಲ್ಕೇ ದಿನಕ್ಕೆ ಇನ್‌ಸ್ಟಾಗ್ರಾಂನಲ್ಲಿ ಅದರ ಫಾಲೋವರ್ಸ್ ಸಂಖ್ಯೆ 1.71 ಕೋಟಿ (ಮೇ 21ಕ್ಕೆ) ದಾಟಿದೆ. ಜಗತ್ತಿನ ಅತಿ ದೊಡ್ಡ ಪಕ್ಷ ಎಂದು ಪ್ರತಿಪಾದಿಸುವ ಬಿಜೆಪಿಯನ್ನು ( 89 ಲಕ್ಷ ಫಾಲೋವರ್‌ಗಳು) ಹಿಂದಿಕ್ಕಿರುವ ಬಗ್ಗೆ ದೀಪ್ಕೆ ಅವರು ಕಮಲವನ್ನು ತಿನ್ನುತ್ತಿರುವ ಜಿರಲೆಯ ಚಿತ್ರ ಹಾಕಿ ವ್ಯಂಗ್ಯ ಮಾಡಿದ್ದರು.ಗುರುವಾರ ಮಧ್ಯಾಹ್ನದ ಹೊತ್ತಿಗೆ ಭಾರತದಲ್ಲಿ ಪಾರ್ಟಿಯ ‘ಎಕ್ಸ್’ ಖಾತೆಯನ್ನು @ಸಿಜೆಪಿ2029 ತಡೆ ಹಿಡಿಯಲಾಗಿದೆ. ಕಾನೂನು ಪ್ರಕಾರವಾಗಿ ಲಿಖಿತ ಕೋರಿಕೆಯ ಮೇರೆಗೆ ಖಾತೆ ತಡೆ ಹಿಡಿಯಲಾಗಿದೆ ಎಂದು ‘ಎಕ್ಸ್’ ಹೇಳಿದೆ. ತಡೆ ಹಿಡಿಯುವುದಕ್ಕೂ ಮುನ್ನ ಅದರ ಫಾಲೋವರ್‌ಗಳ ಸಂಖ್ಯೆ 2 ಲಕ್ಷದಷ್ಟಿತ್ತು. ಈಗ ಮತ್ತೊಂದು ‘ಎಕ್ಸ್’ ಖಾತೆಯನ್ನು ತೆರೆಯಲಾಗಿದೆ.
ದೇಶದ ಬಹುತೇಕ ಯುವಕರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಅವರನ್ನು ಮುಖ್ಯವಾಹಿನಿಯ ರಾಜಕೀಯದಿಂದ ದೂರ ಇಡಲಾಗಿದ್ದು, ಅಂಥ ಯುವಜನರ ರಾಜಕೀಯ ವೇದಿಕೆ ಇದು’ ಎಂದು ದೀಪ್ಕೆ ಹೇಳಿದ್ದಾರೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳಂತೆ ಆಗುವುದರಲ್ಲಿ ಮತ್ತು ಪಕ್ಷ ರಾಜಕಾರಣಿಗಳನ್ನು ಸೇರಿಸಿಕೊಳ್ಳುವುದರಲ್ಲಿ ತನಗೆ ಆಸಕ್ತಿ ಇಲ್ಲ ಎಂದೂ ಅವರು ಹೇಳಿದ್ದಾರೆ.ಬಿಜೆಪಿಯೇ ಗುರಿ: ವ್ಯವಸ್ಥೆ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ- ಎರಡನ್ನೂ ವಿಡಂಬಿಸುವಂತೆ ಆನ್‌ಲೈನ್ ವೇದಿಕೆ ಹೆಸರನ್ನು ರೂಪಿಸಲಾಗಿದೆ. ಪಕ್ಷದ ವೆಬ್‌ಸೈಟ್‌ನಲ್ಲಿ ಐದು ಅಂಶಗಳ ಪ್ರಣಾಳಿಕೆಯನ್ನು ನೀಡಲಾಗಿದ್ದು, ಸದಸ್ಯತ್ವ ನೋಂದಣಿಗೆ ಅವಕಾಶವನ್ನೂ ನೀಡಲಾಗಿದೆ. ಯುವಜನರ ಬಗ್ಗೆ ಸೋಮಾರಿಗಳು, ಸದಾ ಆನ್‌ಲೈನ್‌ನಲ್ಲಿ ಇರುವವರು, ನಿರುದ್ಯೋಗಿಗಳು ಎನ್ನುವ ಟೀಕೆಗಳು ಕೇಳಿಬರುವುದು ಸಹಜ. ಅವೇ ತಮ್ಮ ಪಕ್ಷದ ಸದಸ್ಯತ್ವ ಪಡೆಯಲು ಬೇಕಾಗಿರುವ ಅರ್ಹತೆ ಎಂದು ಸಿಜೆಪಿ ಹೇಳಿದೆ. ಪಕ್ಷದ ಸದಸ್ಯತ್ವ ಪಡೆಯಲು ನಾಯಕರೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದು, ಮಿಸ್ ಕಾಲ್ ಕೊಡುವುದು ಅಗತ್ಯವಿಲ್ಲ ಎಂದೂ ರಾಜಕೀಯ ಪಕ್ಷಗಳ ಸದಸ್ಯತ್ವ ಅಭಿಯಾನವನ್ನು ವ್ಯಂಗ್ಯ ಮಾಡಲಾಗಿದೆ.
ಇದರ ಜತೆಗೆ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಆಡಳಿತವೇ ಗುರಿ ಎನ್ನುವಂತೆ ಮಹಿಳಾ ಮೀಸಲಾತಿ, ಅಂಬಾನಿ, ಅದಾನಿ ಒಡೆತನದ ಮಾಧ್ಯಮ ಸಂಸ್ಥೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ‘ನಾವು ಪಿಎಂ ಕೇರ್ಸ್‌ಗಾಗಿ ಹಣ ಸಂಗ್ರಹಿಸುವುದಿಲ್ಲ’ ಎಂದು ವಿಡಂಬಿಸಲಾಗಿದೆ. ರಾಜಕಾರಣಿಗಳ ಭ್ರಷ್ಟಾಚಾರ, ವಿದೇಶ ಪ್ರವಾಸಗಳನ್ನೂ ಪ್ರಸ್ತಾಪಿಸಲಾಗಿದೆ.
ಆಧಾರ: ಪಿಟಿಐ, ಬಿಬಿಸಿ, ರಾಯಿಟರ್ಸ್, ಜಾಲತಾಣಗಳ ಪೋಸ್ಟ್‌ಗಳು













































