ಕೊಡಗಿನ ಜೀವನಾದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಕ್ಟೋಬರ್ 17ರ ರಾತ್ರಿ 7:50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ಆವೀರ್ಭವಿಸಲಿದ್ದಾಳೆ.
ತಲಕಾವೇರಿ ಹಾಗೂ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಗಳಲ್ಲಿ ನಡೆಯಲಿರುವ ತುಲಾ ಸಂಕ್ರಮಣ ಜಾತ್ರೋತ್ಸವದ ಪೂರ್ವಭಾವಿ ಸಭೆಯನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು, ಅಧಿಕಾರಿಗಳಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ.ಕಾವೇರಿ ತುಲಾ ಸಂಕ್ರಮಣ ಜಾತ್ರೋತ್ಸವದ ಧಾರ್ಮಿಕ ವಿಧಿವಿಧಾನಗಳಿಗೆ ಸೆಪ್ಟೆಂಬರ್ 27ರಂದು ಬೆಳಗ್ಗೆ 8:45ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ‘ಪತ್ತಾಯಕ್ಕೆ ಅಕ್ಕಿ ಹಾಕುವುದು’ ಎಂಬ ಕಾರ್ಯಕ್ರಮದ ಮೂಲಕ ಚಾಲನೆ ದೊರೆಯಲಿದೆ. ನಂತರ ಅಕ್ಟೋಬರ್ 5ರಂದು ಬೆಳಗ್ಗೆ 10:35ಕ್ಕೆ ಸಲ್ಲುವ ವೃಷಭ ಲಗ್ನದಲ್ಲಿ ‘ಆಜ್ಞಾ ಮುಹೂರ್ತ’ ನೆರವೇರಲಿದೆ.
ಇತರ ಧಾರ್ಮಿಕ ಮುಹೂರ್ತಗಳ ವಿವರ:ಅಕ್ಟೋಬರ್ 15ರಂದು ಮಧ್ಯಾಹ್ನ 12:35ಕ್ಕೆ ಸಲ್ಲುವ ಧನು ಲಗ್ನದಲ್ಲಿ ‘ಅಕ್ಷಯ ಪಾತ್ರೆ’ ಇಡುವ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಸಂಜೆ 6:03ಕ್ಕೆ ಸಲ್ಲುವ ಮೀನ ಲಗ್ನದಲ್ಲಿ ‘ಕಾಣಿಕೆ ಡಬ್ಬಿ’ ಇಡುವ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಅಕ್ಟೋಬರ್ 17ರ ರಾತ್ರಿ 7:50ಕ್ಕೆ ತಲಕಾವೇರಿಯಲ್ಲಿ ಕಾವೇರಿ ತುಲಾ ಸಂಕ್ರಮಣದ ಪ್ರಮುಖ ಆಕರ್ಷಣೆಯಾದ ಪವಿತ್ರ ‘ತೀರ್ಥೋದ್ಭವ’ ಜರುಗಲಿದೆ.

















































