ಮಂಗಳೂರಿನ ಪಡೀಲಿನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು (ಸೆಪ್ಟೆಂಬರ್ 18) ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದ್ದು, ಕರಾವಳಿ ಭಾಗದಲ್ಲಿ ಅಭಿವೃದ್ಧಿಯ ನಿರೀಕ್ಷೆಗಳು ಗರಿಗೆದರಿವೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಐತಿಹಾಸಿಕ ಸಂಪುಟ ಸಭೆಗಾಗಿ ಮಂಗಳೂರು ನಗರ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಬೃಹತ್ ಸಂಕೀರ್ಣದ ಎರಡನೇ ಮಹಡಿಯಲ್ಲಿ ವಿಶೇಷವಾಗಿ ಹವಾನಿಯಂತ್ರಿತ ಹಾಲ್ ಸಿದ್ಧಪಡಿಸಲಾಗಿದ್ದು, ಬೆಳಿಗ್ಗೆ 10:30ಕ್ಕೆ ಸಭೆ ಆರಂಭವಾಗಲಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆಯ ಸಚಿವರು ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ, ಕೃಷಿ, ಶಿಕ್ಷಣ ಮತ್ತು ಮೂಲಸೌಕರ್ಯ ಬೆಳವಣಿಗೆಯ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಮುಖ್ಯವಾಗಿ ಮಂಗಳೂರಿನಲ್ಲಿ ‘ಮೆಡಿಕಲ್ ಟೂರಿಸಂ ಹಬ್’ ಸ್ಥಾಪನೆ, ಕರಾವಳಿಯಲ್ಲಿ ಐಟಿ ಪಾರ್ಕ್, ಮೀನುಗಾರಿಕೆ-ಬಂದರು ಅಭಿವೃದ್ಧಿ, ರಸ್ತೆ ಸಂಪರ್ಕ ಹಾಗೂ ಟೆಂಪಲ್ ಟೂರಿಸಂ ಉತ್ತೇಜನ ಸೇರಿದಂತೆ ಹಲವು ಯೋಜನೆಗಳಿಗೆ ಸಂಪುಟದ ಅನುಮೋದನೆ ಸಿಗುವ ನಿರೀಕ್ಷೆಯಿದೆ.
ಡಬಲ್ ಡೆಕ್ಕರ್ ಬಸ್‌ನಲ್ಲಿ ಆಗಮನ, ಬಳಿಕ ಸಿಎಂ ಸುದ್ಧಿಗೋಷ್ಠಿ:ಸಂಪುಟ ಸಭೆಯ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ, ಡಿಸಿಎಂ ಹಾಗೂ ಸಚಿವರು ತೆರೆದ ಡಬಲ್ ಡೆಕ್ಕರ್ ಬಸ್‌ನಲ್ಲಿ ಕದ್ರಿಯಿಂದ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಲಿದ್ದಾರೆ. ಸಚಿವ ಸಂಪುಟದ ಪ್ರಮುಖ ನಿರ್ಧಾರಗಳ ಕುರಿತು ಸಭೆಯ ಮುಕ್ತಾಯದ ನಂತರ ಮುಖ್ಯಮಂತ್ರಿಯವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.
















































