ಮಂಗಳೂರಿಗೆ ಮೀಸಲಿಟ್ಟ ಹಣ ಎಷ್ಟು: ಆ‌ರ್. ಅಶೋಕ ಪ್ರಶ್ನೆ

Picture of Savistara

Savistara

Bureau Report

ಬೆಂಗಳೂರು: ‘ಮಂಗಳೂರಿಗೆ ₹32,611 ಕೋಟಿ ಮೊತ್ತದ ಯೋಜನೆಗಳ ಕೊಡುಗೆ ನೀಡಿರುವುದಾಗಿ ಹೇಳುವ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಎಷ್ಟು ಹಣ ಮೀಸಲಿಟ್ಟಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆ‌ರ್. ಅಶೋಕ ಪ್ರಶ್ನಿಸಿದ್ದಾರೆ.

‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಂಗೈಯಲ್ಲೇ ಅರಮನೆ ತೋರಿಸಿ ಮಂಗಳೂರಿನ ಜನರ ಮೂಗಿಗೆ ತುಪ್ಪ ಸವರಿದ್ದಾರೆ. ಆಕಾಶದಲ್ಲಿ ಗಾಳಿಗೋಪುರ ಕಟ್ಟಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಇಂತಹ ನಾಟಕ ಸಾಕು ಮಾಡಿ. ಯೋಜನೆಗಳಿಗೆ ಬೇಕಾದ ಹಣ ಎಲ್ಲಿಂದ ತರುತ್ತೀರಿ ಎನ್ನುವುದನ್ನು ಮೊದಲು ಹೇಳಿ’ ಎಂದಿದ್ದಾರೆ.“ಸಾರಿಗೆ ನಿಗಮಗಳಿಗೆ ₹5,000 ಕೋಟಿ ಬಾಕಿ ಕೊಟ್ಟಿಲ್ಲ, ಬಸ್ಸುಗಳಿಗೆ ಡೀಸೆಲ್ ಹಾಕಿಸಲು, ಬಿಡಿ ಸಾಮಗ್ರಿ ಖರೀದಿಸಲು ಹಣವಿಲ್ಲ. ಎಸ್ಕಾಂಗಳಿಗೆ ಬಾಕಿ ತೀರಿಸಲು, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ, ಕೊಠಡಿಗಳ ದುರಸ್ತಿಗೂ ಹಣವಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಆಂಬುಲೆನ್ಸ್‌ ಚಾಲಕರಿಗೆ ವೇತನ ನೀಡಿಲ್ಲ. ಹಾಲಿನ ಪ್ರೋತ್ಸಾಹಧನ, ರೈತರ ಬರ ಪರಿಹಾರ ಬಿಡುಗಡೆ ಮಾಡಿಲ್ಲ’ ಎಂದು ಅವರು ದೂರಿದ್ದಾರೆ.

ಕರಾವಳಿಗರ ಕೈಗೆ ರಕ್ತ ಸವರುತ್ತಿದ್ದ ಬಿಜೆಪಿ: ಪ್ರಿಯಾಂಕ್

‘ಕರಾವಳಿಗರ ಕೈಗೆ ರಕ್ತ ಸವರುತ್ತಿದ್ದ ಬಿಜೆಪಿಗೆ ಕಾಂಗ್ರೆಸ್‌ ಅಭಿವೃದ್ಧಿ ಕೆಲಸಗಳು ಮೂಗಿಗೆ ತುಪ್ಪ ಸವರಿದಂತೆ ಕಾಣುತ್ತಿದೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

‘ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು ‘ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್’ ಎಂದು ಬಿಜೆಪಿ ಮಾಡಿದ ಆರೋಪವನ್ನು ಉಲ್ಲೇಖಿಸಿ ‘ಎಕ್ಸ್’ ಮಾಡಿರುವ ಅವರು ‘ಇದು ಬಿಜೆಪಿಗರ ಹತಾಶೆಯ ಟೀಕೆ. ನಮ್ಮ ಅಭಿವೃದ್ಧಿಪರ ನಿಲುವುಗಳನ್ನು ನೋಡಿ ಅವರಿಗೆ ತಳಮಳ ಶುರುವಾಗಿದೆ’ ಎಂದಿದ್ದಾರೆ.’ಬಿಜೆಪಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯಾಗಿ ಮಾಡಿಕೊಂಡಿತ್ತು. ನಾವು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ. ಬಿಜೆಪಿ ಕರಾವಳಿಯನ್ನು ಕೇವಲ ಮತಬ್ಯಾಂಕಿನ ಪ್ರದೇಶವಾಗಿ ಮಾತ್ರ ಕಾಣುತ್ತದೆ ನಾವು ಕರಾವಳಿಯಲ್ಲಿ ಪ್ರಗತಿಯ ಸಾಧ್ಯತೆಗಳನ್ನು ಕಾಣುತ್ತಿದ್ದೇವೆ’ ಎಂದಿದ್ದಾರೆ.’ಬಿಜೆಪಿಗರು ಕರಾವಳಿಗೆ ಕಾಲಿಡುತ್ತಿದ್ದಿದ್ದು ಹೊಡಿ ಬಡಿ ಎಂಬ ಪ್ರಚೋದನೆಯ ಭಾಷಣ ಕುಟ್ಟುವುದಕ್ಕೆ ಮಾತ್ರವಾಗಿತ್ತು. ನಾವು ಕರಾವಳಿಗರ ಆತ್ಮಗೌರವವನ್ನು ಗೌರವಿಸಲು ಕಾಲಿಟ್ಟಿದ್ದೇವೆ. ಬಿಜೆಪಿ ಕರಾವಳಿಯಲ್ಲಿ ಕೋಮು ಕಲಹದ ಚರ್ಚೆಗಳನ್ನು ಮಾತ್ರ ಹುಟ್ಟು ಹಾಕುತ್ತಿತ್ತು ನಾವು ಡೇಟಾ ಸೆಂಟರ್ ವಾಟರ್ ಮೆಟ್ರೊ ಪ್ರವಾಸೋದ್ಯಮ ಮರೀನ್ ಬಯೋಟೆಕ್ ಮಾಹಿತಿ ತಂತ್ರಜ್ಞಾನಗಳಂತಹ ಪ್ರಗತಿಪರ ವಿಷಯಗಳ ಚರ್ಚೆ ಹುಟ್ಟುಹಾಕಿದ್ದೇವೆ’ ಎಂದೂ ಹೇಳಿದ್ದಾರೆ.

[t4b-ticker]
error: Content is protected !!