ಪುತ್ತೂರು: ಸೌಜನ್ಯ ಕೊಲೆ ಪ್ರಕರಣದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಪ್ರಮುಖ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಪುತ್ತೂರು ನಗರಕ್ಕೆ ಭೇಟಿ ನೀಡಿ, ಪೊಲೀಸ್ ಠಾಣೆಗೆ ಹಾಜರಾಗುವುದರ ಜೊತೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹಳೆಯ ಕೇಸ್ ಸಂಬಂಧ ಠಾಣೆಗೆ ಹಾಜರಿ:ಲಭ್ಯವಿರುವ ಮಾಹಿತಿಯಂತೆ, ಬೆಳಿಗ್ಗೆ ಸುಮಾರು 11.30ರ ವೇಳೆಗೆ ತಮ್ಮ ಹಳೆಯ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಮಹಿಳಾ ಠಾಣಾ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಅವರು ಬೇರೆ ಕರ್ತವ್ಯ ನಿಮಿತ್ತ ಠಾಣೆಯಲ್ಲಿ ಇರದ ಕಾರಣ, ತಿಮರೋಡಿ ಅವರು ಲಿಖಿತವಾಗಿ ಹಾಜರಾತಿ ನೀಡಿ ನೋಟಿಸ್ ಪಡೆದುಕೊಂಡರು.
ಮುಂದಿನ ನಿಗದಿತ ದಿನಾಂಕದಂದು ಅವರು ಮತ್ತೆ ಠಾಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಜೈನ್ ಸೇರಿದಂತೆ ಹಲವು ಬೆಂಬಲಿಗರು ಅವರೊಂದಿಗಿದ್ದರು.ಮಹಾಲಿಂಗೇಶ್ವರ ದೇವರ ದರ್ಶನ:ಠಾಣೆಯಿಂದ ಹಿಂತಿರುಗಿದ ಬಳಿಕ ಪುತ್ತೂರಿನ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ ತಿಮರೋಡಿ, ತಾವು ನಡೆಸುತ್ತಿರುವ ಸೌಜನ್ಯ ನ್ಯಾಯ ಹೋರಾಟಕ್ಕೆ ಜಯ ಸಿಗಲಿ ಎಂದು ದೇವರಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರಿಗೆ ಭೇಟಿ ನೀಡಿದಾಗಲೆಲ್ಲ ಮಹಾಲಿಂಗೇಶ್ವರ ದೇವರ ದರ್ಶನ ಪಡೆಯುವುದು ವಾಡಿಕೆಯಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.















































