ಮಂಗಳೂರು: ಭಾರತೀಯ ವಾಯುಪಡೆಯ ಹೆಮ್ಮೆ ಹಾಗೂ ಯಶಸ್ವಿ ಯುದ್ಧವಿಮಾನಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಜಾಗ್ವಾರ್ ವಿಮಾನವನ್ನು ಮುನ್ನಡೆಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪಡೆದಿದ್ದಾರೆ. ಇದುವರೆಗೆ ಮಹಿಳಾ ಪೈಲಟ್‌ಗಳು ಜಾಗ್ವಾರ್ ಯುದ್ಧ ವಿಮಾನವನ್ನು ಶಾಶ್ವತ ನೆಲೆಯಲ್ಲಿ ಮುನ್ನಡೆಸಿಲ್ಲ.
ಮಂಗಳೂರು ಮೂಲದ ಪ್ಲೆಯಿಂಗ್ ಆಫೀಸರ್ ತನುಷ್ಕಾ ಸಿಂಗ್ ಅವರು ಜಾಗ್ವಾರ್ ಯುದ್ಧ ವಿಮಾನ ಸ್ಕ್ಯಾಡ್ರನ್‌ನಲ್ಲಿ ಪೈಲಟ್ ಆಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಮಿಲಿಟರಿ ಹಿನ್ನೆಲೆ ಕುಟುಂಬದಿಂದ ಬಂದಂತಹ ತನುಷ್ಕಾ ಅವರ ತಂದೆ. ಅಜ್ಜ ಎಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮೂಲತಃ ಉ.ಪ್ರದೇಶದವರಾದರೂ 2007ರಿಂದ ತನುಷ್ಕಾ ಮಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಹಾಗಾಗಿ “ನಾನು ಕುಡ್ಲದವಳು’ ಎಂದು ಹೆಮ್ಮೆಯಿಂದ ತನುಷ್ಕಾ ಹೇಳುತ್ತಾರೆ.
ಸುರತ್ಕಲ್ ಡಿಪಿಎಸ್ ಎಂಆರ್‌ಪಿಎಲ್ ಶಾಲೆಯಲ್ಲಿ ಎಸೆಸೆಲ್ಸಿ ಮುಗಿಸಿದ ತನುಷ್ಕಾ ಅವರು ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ವಿಜ್ಞಾನ ಶಿಕ್ಷಣದ ಬಳಿಕ ಮಣಿಪಾಲ ಎಂಐಟಿಯಲ್ಲಿ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ 2022ರಲ್ಲಿ ಬಿ.ಟೆಕ್. ಪದವಿ ಗಳಿಸಿದ್ದಾರೆ. ತನುಷ್ಕಾ ಸಿಂಗ್ ತಂದೆ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಜಯ್ ಪ್ರತಾಪ್ ಸಿಂಗ್ ಅವರು ಪ್ರಸ್ತುತ ಎಂಆರ್‌ಪಿಎಲ್ ಸಂಸ್ಥೆಯ ಎಚ್‌ಎಸ್‌ಇ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ.“ಚಿಕ್ಕಂದಿನಿಂದಲೂ ಸೇನೆಗೆ ಸೇರ ಬೇಕೆಂಬ ಹಂಬಲವಿತ್ತು. ಆದರೆ ವಾಯುಪಡೆಗೆ ಸೇರುತ್ತೇನೆ. ಅದರಲ್ಲೂ ಸಮರ ವಿಮಾನದ ಪೈಲಟ್ ಆಗುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ” ಎನ್ನುತ್ತಾರೆ ತನುಷ್ಕಾ.ತನುಷ್ಕಾ ಸಿಂಗ್ ಅವರು ಶಾರ್ಟ್ ಸರ್ವಿಸ್ ಕಮಿಷನ್ ಮೂಲಕ ಭಾರತೀಯ ಸೇನೆಯನ್ನು ಸೇರಲು ಬಯಸಿದ್ದರು. ಆದರೆ ಅಲ್ಲಿ ಮಹಿಳೆಯರಿಗೆ ಹುದ್ದೆಯ ಅವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ವಾಯುಪಡೆಯನ್ನು ಆಯ್ಕೆ ಮಾಡಿಕೊಂಡರು.
ಒಂದೂವರೆ ವರ್ಷ ಕಾಲ ವಾಯುಪಡೆಯ ಕೆಡೆಟ್ ಆಗಿ ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ವಾಯುಪಡೆ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಅಲ್ಲಿ ಕಮಿಷನ್‌ರ್ ಅಧಿಕಾರಿಯಾಗಿ ಭಡ್ತಿ ಪಡೆದು ಒಂದು ವರ್ಷ ಕಾಲ ಯುದ್ಧ ವಿಮಾನಗಳ ಪೈಲಟ್ ಆಗಿ ತರಬೇತಿ ಪಡೆದಿದ್ದಾರೆ. ಈ ವೇಳೆ ಅವರು ಹಾಕ್ ಎಂಕೆ 132 ವಿಮಾನವನ್ನು ಚಲಾಯಿಸಿದ್ದಾರೆ.ಇದೀಗ ರಜೆಯಲ್ಲಿ ಊರಿಗೆ ಬಂದಿರುವ ತನುಷ್ಕಾ ಶೀಘ್ರವೇ ವಿರಾಮ ಪೂರೈಸಿ ಭಾರತೀಯ ವಾಯು ಪಡೆಯ ಜಾಗ್ವಾರ್ ಸ್ಕ್ಯಾಡ್ರನ್ ಸೇರಿಕೊಳ್ಳಲಿದ್ದಾರೆ.“ಇದುವರೆಗೆ ಕೆಲವರು ಪೈಲಟ್ ಮಹಿಳೆಯರು ಅನುಭವಕ್ಕಾಗಿ ಜಾಗ್ವಾರ್ ಯುದ್ಧ ವಿಮಾನವನ್ನು ಚಲಾಯಿಸಿದ್ದಾರೆ: ಆದರೆ ಶಾಶ್ವತ ನೆಲೆಯಲ್ಲಿ ಜಾಗ್ವಾರ್ ಸ್ಕ್ಯಾಡ್ರನ್‌ಗೆ ಸೇರ್ಪಡೆಯಾಗಿರುವುದು ಇದೇ ಮೊದಲು’ ಎಂದಿದ್ದಾರೆ ಮಾಜಿ ಮಿಲಿಟರಿ ಅಧಿಕಾರಿ.













































