ಲಖನೌ: ಜಗತ್ತಿನಲ್ಲೇ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾ ಕುಂಭಮೇಳವು ಮಹಾ ಶಿವರಾತ್ರಿಯ ದಿನವಾದ ಬುಧವಾರ ಅಂತ್ಯಗೊಳ್ಳಲಿದೆ. 144 ವರ್ಷಕ್ಕೆ ಒಮ್ಮೆ ಮಹಾ ಕುಂಭಮೇಳ ನಡೆಯುತ್ತದೆ ಎನ್ನಲಾಗಿದೆ. ತ್ರಿವೇಣಿ ಸಂಗಮ ಸ್ಥಾನದಲ್ಲಿ ಈ ಬಾರಿಯ ಕೊನೆಯ ‘ಅಮೃತ ಸ್ನಾನ’ ಮಾಡಲು ದೇಶದಾದ್ಯಂತ ಜನರು ಪ್ರಯಾಗರಾಜ್‌ನತ್ತ ಹರಿದುಬರುತ್ತಿದ್ದಾರೆ.
ಕೋಟ್ಯಂತರ ಜನರು ಬುಧವಾರದಂದು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.ಮಂಗಳವಾರ ಮಧ್ಯಾಹ್ನದಿಂದಲೇ ಸಾಗರೋಪಾದಿಯಲ್ಲಿ ಜನರು ಸಂಗಮಕ್ಕೆ ತೆರಳುವ ರಸ್ತೆಗಳಲ್ಲಿ ಸೇರಿಕೊಳ್ಳುತ್ತಿದ್ದಾರೆ.ಅಂತಿಮ ದಿನದ ‘ಅಮೃತ ಸ್ನಾನ’ಕ್ಕೆ ಮಾಡಿಕೊಳ್ಳಲಾದ ತಯಾರಿಗಳ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ಪರಿಶೀಲನೆ ನಡೆಸಿದರು.ಪ್ರಯಾಗರಾಜ್ ಮಾತ್ರವಲ್ಲದೇ ಅಯೋಧ್ಯೆ ಮತ್ತು ವಾರಾಣಸಿಯಲ್ಲಿಯೂ ಭಕ್ತರ ಸಂಖ್ಯೆ ಅತ್ಯಧಿಕವಾಗಲಿದೆ.ಆದ್ದರಿಂದ ಈ ಸ್ಥಳಗಳಲ್ಲಿಯೂ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ. ಶಿವರಾತ್ರಿ ಪ್ರಯುಕ್ತ ಅಧಿಕ ಭಕ್ತರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದಲ್ಲಿ ‘ವಿಐಪಿ ದರ್ಶನ’ವನ್ನು ರದ್ದು ಮಾಡಲಾಗಿದೆ.
ತ್ರಿವೇಣಿ ಸಂಗಮದಲ್ಲಿ ಮಾತ್ರವಲ್ಲದೆ ಇನ್ನಿತರ ಘಾಟ್‌ಗಳಲ್ಲಿಯೂ ಕೊನೆಯ ಅಮೃತ ಸ್ನಾನ ಕೈಗೊಳ್ಳುವಂತೆ ಭಕ್ತರಲ್ಲಿ ಮನವಿ ಮಾಡುತ್ತೇವೆ-ಉತ್ತರ ಪ್ರದೇಶ ಸರ್ಕಾರಕೋಟ್ಯಂತ ಭಕ್ತರ ನಿರ್ವಹಣೆ: ಸರ್ಕಾರದ ಕ್ರಮಗಳು* ಮಹಾ ಕುಂಭಮೇಳ ನಡೆಯುತ್ತಿರುವ ಪ್ರದೇಶದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸರಕು ಸಾಗಣೆ ವಾಹನ ಮತ್ತು ಆಂಬುಲೆನ್ಸ್ ಸಂಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ. ಇತರೆ ರಾಜ್ಯಗಳಿಂದ ಬರುವ ಭಕ್ತರ ವಾಹನಗಳು ಪ್ರಯಾಗರಾಜ್ ನಗರವನ್ನು ಪ್ರವೇಶಿಸುವಂತಿಲ್ಲ. ಇಂಥ ವಾಹನಗಳ ನಿಲುಗಡೆಗೆ ಬೇರೆಡೆ ವ್ಯವಸ್ಥೆ ಮಾಡಲಾಗಿದೆ * ಪ್ರಯಾಗರಾಜ್ ರೈಲು ನಿಲ್ದಾಣಗಳಲ್ಲಿ ಹೋಲ್ಡಿಂಗ್ ಪ್ರದೇಶವನ್ನು ರೂಪಿಸಲಾಗಿದೆ. ಭಕ್ತರನ್ನು ರೈಲು ನಿಲ್ದಾಣದ ಹೊರಗಡೆಯೇ ಕೂರಿಸಲಾಗುತ್ತದೆ. ರೈಲುಗಳು ಪ್ಲಾಟ್‌ಫಾರ್ಮ್‌ಗೆ ಬರುವ ಹೊತ್ತಿಗೆ ಪ್ರಯಾಣಿಕರನ್ನು ನಿಲ್ದಾಣದ ಒಳಗೆ ಬಿಡಲಾಗುತ್ತದೆ. ಪಂಡಿತ್ ದೀನ್ ದಯಾಳ್ಉಪಾಧ್ಯಾಯ ಜಂಕ್ಷನ್‌ನಲ್ಲಿಯೂ ಇದೇ ವ್ಯವಸ್ಥೆ ರೂಪಿಸಲಾಗಿದೆ.













































