ಪ್ರಯಾಗ್ರಾಜ್ನಲ್ಲಿ 45 ದಿನ ನಡೆದ ಮಹಾ ಕುಂಭಮೇಳದಲ್ಲಿ 65 ಕೋಟಿಗೂ ಅಧಿಕ ಜನರು ಭಾಗಿಯಾಗಿದ್ದಾರೆ. ಇದು ಚೀನಾ ಮತ್ತು ಭಾರತ ಹೊರತುಪಡಿಸಿ ವಿಶ್ವದ ಎಲ್ಲ ರಾಷ್ಟ್ರಗಳ ಜನಸಂಖ್ಯೆಗಿಂತ ಅತ್ಯಧಿಕ.
ಮಹಾಕುಂಭ ನಗರ(ಉತ್ತರ ಪ್ರದೇಶ): ಇಂದು ಮಹಾಶಿವರಾತ್ರಿ. ತ್ರಿವೇಣಿ ಸಂಗಮ ಪ್ರಯಾಗ್ರಾಜ್ನಲ್ಲಿ ‘ಹರ ಹರ ಮಹಾದೇವ’ ಘೋಷವಾಕ್ಯ ಪ್ರತಿಧ್ವನಿಸುತ್ತಿದೆ. ಇಂದಿನ ಅಮೃತ ಸ್ನಾನದ ಮೂಲಕ 45 ದಿನಗಳಿಂದ ನಡೆಯುತ್ತಿರುವ ಮಹಾ ಕುಂಭಮೇಳವೂ ಸಂಪನ್ನವಾಗಲಿದೆ.ಭೂಮಂಡಲದ ಮೇಲೆಯೇ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭವು ಜನವರಿ 13ರಂದು ಪ್ರಾರಂಭವಾಯಿತು. ನಾಗಾ ಸಾಧುಗಳು, ಸಂತರು, ಧರ್ಮ ರಕ್ಷಕರು, ಸನ್ಯಾಸಿಗಳು ಮತ್ತು ಭಕ್ತರು ಸೇರಿದಂತೆ ಇಲ್ಲಿಯವರೆಗೆ 65 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.ಯುಪಿ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಕುಂಭಮೇಳದ ಕೊನೆಯ ದಿನವಾದ ಇಂದು 1 ಕೋಟಿಗೂ ಅಧಿಕ ಜನರು ಪುಣ್ಯಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಜಗತ್ರಕ್ಷಕ ಮಹಾದೇವನ ಸ್ಮರಣೆಯು ನಿನಾದಿಸುತ್ತಿತ್ತು ಎಂದು ತಿಳಿಸಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಳಿಗ್ಗೆ 4 ಗಂಟೆಗೆ ಗೋರಖ್‌ಪುರದಿಂದ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಕುಂಭಮೇಳದ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಿದರು.
ಭಕ್ತರ ಮೇಲೆ ಹೂವಿನ ಸುರಿಮಳೆ: ಕುಂಭದ ಕೊನೆಯ ದಿನವಾದ ಇಂದೂ ತ್ರಿವೇಣಿ ಸಂಗಮದಲ್ಲಿ ನೆರೆದಿದ್ದ ಭಕ್ತಸಮೂಹದ ಮೇಲೆ ಯೋಗಿ ಸರ್ಕಾರ ಹೂವಿನ ಸುರಿಮಳೆ ಸುರಿಯಿತು. ಐದು ಸುತ್ತುಗಳಲ್ಲಿ ಇಪ್ಪತ್ತು ಕ್ವಿಂಟಲ್ ಹೂವಿನ ದಳಗಳನ್ನು ಭಕ್ತರ ಮೇಲೆ ಸಿಂಚನ ಮಾಡಲಾಯಿತು.
ಮಹಾ ಕುಂಭಮೇಳದ ಕೊನೆಯ ಪುಣ್ಯಸ್ನಾನ ಆದ ಕಾರಣ, ಬುಧವಾರ ಮಧ್ಯರಾತ್ರಿಯಿಂದಲೇ ಜನರು ಸಂಗಮದಲ್ಲಿ ಜಮಾಯಿಸಿದರು. ಕೆಲವರು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಲು ಕಾದಿದ್ದರು. ಭೂಮಿಯ ಮೇಲಿನ ಅತಿದೊಡ್ಡ ಧಾರ್ಮಿಕ ಉತ್ಸವ ಎಂದು ಕರೆಯಲ್ಪಡುವ ಈ ಕುಂಭಮೇಳವು ವಿಶ್ವದ ಅನೇಕ ರಾಷ್ಟ್ರಗಳು ಸೇರಿದಂತೆ ದೇಶದ ಕೋಟ್ಯಂತರ ಜನರನ್ನು ಆಕರ್ಷಿಸಿತು.ಪ್ರಯಾಗದಾದ್ಯಂತ ಕಟ್ಟುನಿಟ್ಟಿನ ನಿಗಾ: ಕುಂಭಮೇಳದ ಕೊನೆಯ ದಿನ ಯಾವುದೇ ಅವಘಡ ಮತ್ತು ಅಜಾಗರೂಕತೆಗಳು ನಡೆಯದಂತೆ ಯೋಗಿ ಸರ್ಕಾರ ಹದ್ದಿನ ಕಣ್ಣಿಟ್ಟಿತ್ತು. ತ್ರಿವೇಣಿ ಸಂಗಮ ಅಥವಾ ಅದರ ಸುತ್ತಲಿನ ವಿವಿಧ ಘಾಟ್‌ಗಳಲ್ಲಿ ಯಾತ್ರಿಕರು ಪವಿತ್ರ ಸ್ನಾನ ಮಾಡುತ್ತಿದ್ದಾಗ, ಭದ್ರತಾ ಸಿಬ್ಬಂದಿ ಹರಿದು ಬರುತ್ತಿದ್ದ ಭಕ್ತ ಸಾಗರವನ್ನು ನಿಯಂತ್ರಿಸುತ್ತಿದ್ದರು. ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಜನರು ಸೇರದಂತೆ ಜಾಗರೂಕತೆ ವಹಿಸಿದ್ದರು.ವಿಶ್ವದ ರಾಷ್ಟ್ರಗಳ ಜನಸಂಖ್ಯೆ ಮೀರಿದ ಕುಂಭೋತ್ಸವ: ಮಹಾ ಕುಂಭಮೇಳದಲ್ಲಿ ಈವರೆಗೂ 65 ಕೋಟಿ ಅಧಿಕ ಜನರು ಭೇಟಿ ಭಾಗಿಯಾಗಿದ್ದಾರೆ. ಅಂದರೆ, ಇದು ಚೀನಾ ಮತ್ತು ಭಾರತ ಹೊರತುಪಡಿಸಿ ವಿಶ್ವದ ಎಲ್ಲ ರಾಷ್ಟ್ರಗಳ ಜನಸಂಖ್ಯೆಗಿಂತ ಅತ್ಯಧಿಕವಾಗಿದೆ. ದೇಶದ ಅರ್ಧದಷ್ಟು ಜನರು ಪ್ರಯಾಗ್ರಾಜ್ಗೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.
ಜನವರಿ 13ರಂದು ಪೌಷ ಪೂರ್ಣಿಮಾ, ಜನವರಿ 14ರಂದು ಮಕರ ಸಂಕ್ರಾಂತಿ, ಜನವರಿ 29ರಂದು ಮೌನಿ ಅಮಾವಾಸ್ಯೆ, ಫೆಬ್ರವರಿ 3ರಂದು ವಸಂತ ಪಂಚಮಿ, ಫೆಬ್ರವರಿ 12ರಂದು ಮಾಘಿ ಪೂರ್ಣಿಮಾ ಮತ್ತು ಫೆಬ್ರವರಿ 26 ರಂದು ಮಹಾಶಿವರಾತ್ರಿಯ ಅಮೃತ ಸ್ನಾನ ಸೇರಿ ಆರು ವಿಶೇಷ ಸ್ನಾನಗಳಿಗೆ ಸಾಕ್ಷಿಯಾಯಿತು.ಜನವರಿ 29ರಂದು ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. 60 ಜನರು ಗಾಯಗೊಂಡರು ಎಂದು ಸರ್ಕಾರ ತಿಳಿಸಿದೆ. ಈ ಘಟನೆ ಹೊರತುಪಡಿಸಿ 45 ದಿನಗಳು ಕೋಟ್ಯಂತರ ಭಕ್ತರ ಭಾಗವಹಿಸುವಿಕೆ ಮಧ್ಯೆ ಎಲ್ಲ ಕಾರ್ಯಕ್ರಮಗಳು ಸಾಂಘವಾಗಿ ನಡೆದಿವೆ.













































