ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ ಮಧೂರು ದೇಗುಲ

Picture of Savistara

Savistara

Bureau Report

ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ದೇಗುಲದ ನವೀಕರಣ, ಮೂಡಪ್ಪ ಸೇವೆಗೆ 400ಕ್ಕೂ ಮಿಕ್ಕಿ ಬುಟ್ಟಿ ಸಮರ್ಪಣೆ

ಕಾಸರಗೋಡು: ಮಧುವಾಹಿನಿ ನದಿಯ ತಟದಲ್ಲಿರುವಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ಬಳಿಕ ಮಾ.27ರಿಂದ ಎ.7ರ ವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ದೇಗುಲದ ನವೀಕರಣ ಕಾಮಗಾರಿ ನಡೆದಿದ್ದು, ರಾಜಾಂಗಣ, ಹೊರಾಂಗಣದ ಕಾಮಗಾರಿಗಳು ಸಂಪೂರ್ಣಗೊಂಡಿವೆ. ಗಣಪತಿ ನಡೆ, ಶಿವನ ನಡೆ, ದುರ್ಗಾ ಗುಡಿ, ಸುತ್ತು ಪೌಳಿಗೆ ಕೆಂಪುಕಲ್ಲು ಹಾಸಲಾಗಿದೆ. ನೂತನವಾಗಿ ಕಗ್ಗಲ್ಲಿನಿಂದ ನಿರ್ಮಾಣಗೊಂಡ ಕೆತ್ತನೆ ಕೆಲಸದ ಕಂಬಗಳು, ಕಾಷ್ಠ ಶಿಲ್ಪಗಳು ಆಕರ್ಷಿಸುತ್ತಿವೆ. ಮೂಡು ಗೋಪುರಕ್ಕೆ ಗ್ರಾನೈಟ್ ಹಾಸಲಾಗಿದೆ. ಮುರುಡೇಶ್ವರದ ಶಂಕರ್ ಮತ್ತು ಬಳಗ ಅತ್ಯಾಕರ್ಷಕವಾಗಿ ಕೆತ್ತನೆ ಕೆಲಸ ನಿರ್ವಹಿಸಿದ್ದು, ಕಾಷ್ಠ ಶಿಲ್ಪವನ್ನು ಮೂಡುಬಿದಿರೆ ಸಂಪಿಗೆಯ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಹರೀಶ ಆಚಾರ್ಯ ಮಾಡಿದ್ದಾರೆ.

2-3 ತಿಂಗಳುಗಳಿಂದ ಮಕ್ಕಳು, ಮಹಿಳೆಯರು ಸಹಿತ ಎಲ್ಲರೂ ರಾತ್ರಿ ಹಗಲೆನ್ನದೆ ಕರ ಸೇವೆಯಲ್ಲಿ ನಿರತರಾಗಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ಚಪ್ಪರದ ಕಾರ್ಯ ನಡೆಯುತ್ತಿದೆ. ಅನ್ನಛತ್ರ, ಉಗ್ರಾಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ, ಸಭಾ ಕಾರ್ಯಕ್ರಮಕ್ಕೆ ವೇದಿಕೆ, ಕಾರ್ಯಾಲಯ ಇತ್ಯಾದಿಗಳ ಕಾರ್ಯ ಪ್ರಗತಿಯಲ್ಲಿದೆ. ವಾಹನ ಪಾರ್ಕಿಂಗ್‌ಗೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.

ಕಂಗೊಳಿಸುತ್ತಿರುವ ಗೋಪುರಕ್ಕೆ ಅಂತಿಮ ಸ್ಪರ್ಶ ತಂಜಾವೂರು ಶೈಲಿ ಯಲ್ಲಿ ನಿರ್ಮಾಣ ವಾಗಿರುವ ಕಗ್ಗಲ್ಲಿನ ಗೋಪುರ ಪ್ರಮುಖ ಆಕರ್ಷಣೆಯಾಗಿದೆ. ಇದು ಮಧೂರು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಅವರ ಕೊಡುಗೆಯಾಗಿದೆ. ಸುಮಾರು 1.11 ಕೋಟಿ ರೂ. ವೆಚ್ಚದ ಈ ಗೋಪುರಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಖ್ಯಾತ ಶಿಲ್ಪಿ ಮೂಡುಬಿದಿರೆಯ ರಮೇಶ್ ಅವರು ಈ ಗೋಪುರದ ಕೆಲಸ ಮಾಡಿದ್ದಾರೆ. ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ರಾಜಾಂಗಣ ಹಾಗೂ ಸುಮಾರು 24 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನದ ಸುತ್ತ ಇಂಟರ್‌ಲಾಕ್ ವ್ಯವಸೆಯನ್ನೂ ಇವರು ಮಾಡಿದ್ದಾರೆ.

ಮಧೂರು: ಮೂಡಪ್ಪ ಸೇವೆಗೆ 400ಕ್ಕೂ ಮಿಕ್ಕಿ ಬುಟ್ಟಿ ಸಮರ್ಪಣೆಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಅಂಗವಾಗಿ ಸುಮಾರು 400ಕ್ಕೂ ಮಿಕ್ಕಿ ಬುಟ್ಟಿಗಳನ್ನು ದೇಗುಲಕ್ಕೆ ಸಮರ್ಪಿಸಲಾಯಿತು.

ಬುಟ್ಟಿಗಳನ್ನು ದಂಬೆಮೂಲೆ ನಾರಾಯಣ ಭಟ್ ನೇತೃತ್ವದಲ್ಲಿ ಶ್ರೀ ಮಧೂರು ಸನ್ನಿಧಿಗೆ ತರಲಾಯಿತು. ಅನೇಕ ದಾನಿಗಳ ಸಹಕಾರದಲ್ಲಿ ಕಾರ್ಯಾಡು ಬಟ್ಯ ಮತ್ತು ಬಳಗದವರು ಬುಟ್ಟಿ ಹೆಣೆದು ನೀಡಿದ್ದಾರೆ. ದೇಗುಲದ ಪ್ರಧಾನ ಅರ್ಚಕರಾದ ವಿ.ಶ್ರೀಕೃಷ್ಣ ಉಪಾಧ್ಯಾಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಒಂದೊಂದು ಬುಟ್ಟಿಗೆ ಸುಮಾರು 300 ರೂ. ಯಂತೆ ನೀಡಲಾಗಿದೆ.

[t4b-ticker]
error: Content is protected !!