ರಾಜ್ಯದಲ್ಲಿ KPTCL ಸಿಬ್ಬಂದಿ ಪಿಂಚಣಿ, ಗ್ರಾಚ್ಯುಟಿಗಾಗಿ ವಿದ್ಯುತ್ ದರ ಏರಿಕೆ: ಯಾರಿಗೆಲ್ಲ ಇದು ಅನ್ವಯ

Picture of Savistara

Savistara

Bureau Report

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ.

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸಿಬ್ಬಂದಿ ಪಿಂಚಣಿ ಮತ್ತು ಗ್ರಾಚ್ಯುಟಿ ಸೌಲಭ್ಯಕ್ಕೆ ಹಣ ಹೊಂದಿಸುವ ನಿಟ್ಟಿನಲ್ಲಿ ಒಂದು ಯುನಿಟ್​ಗೆ 36 ಪೈಸೆಯಷ್ಟು ವಿದ್ಯುತ್ ದರ ಏರಿಕೆ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶಿಸಿದೆ.ಮೂರು ವರ್ಷಗಳ ಅವಧಿಗೆ ಅನ್ವಯವಾಗುವಂತೆ ಕೆಇಆರ್​​ಸಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಏಪ್ರಿಲ್ 1 ರಿಂದ ಕರೆಂಟ್ ದರ ಏರಿಕೆ ಜಾರಿಗೆ ಬರಲಿದೆ. ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಯೋಜನೆ ಲಾಭ ಪಡೆಯುವವರಿಗೆ ಈ ಹೆಚ್ಚಳ ಅನ್ವಯಿಸುವುದಿಲ್ಲ. ಆದರೆ, 200 ಯುನಿಟ್​​ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ಗ್ರಾಹಕರಿಗೆ ಈ ದರ ಏರಿಕೆ ಬಿಸಿ ತಟ್ಟಲಿದೆ.ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ದರ ಏರಿಕೆ ಬಗ್ಗೆ ಸಲ್ಲಿಸಿದ್ದ ಪ್ರಸ್ತಾವನೆಯ ವಿಚಾರಣೆ ನಡೆಸಿದ ಬಳಿಕ ಕೆಇಆರ್​​ಸಿ ಗುರುವಾರ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇಂಧನ ಇಲಾಖೆಯ ಸಿಬ್ಬಂದಿಗಳ ಪಿಂಚಣಿ ಮತ್ತು ಗ್ರಾಚ್ಯುಟಿಗಾಗಿ ವಿದ್ಯುತ್ ಕಂಪನಿಗಳು ಸರಕಾರದಿಂದ ಯುನಿಟ್​​ಗೆ 36 ಪೈಸೆಯಂತೆ ವಿದ್ಯುತ್ ದರ ಏರಿಸಿ ವಸೂಲು ಮಾಡಬಹುದೆಂದು ಕೆಇಆರ್​ಸಿ ತಿಳಿಸಿದೆ.ಆದರೆ,ರಾಜ್ಯ ಸರಕಾರ ತಾನು ಪಾವತಿಸಬೆಕಿದ್ದ ಹಣವನ್ನು ಗ್ರಾಹಕರ ತಲೆ ಮೇಲೆ ಹೊರಿಸಿದೆ. ಗೃಹಜ್ಯೋತಿ ಗ್ಯಾರಂಟಿ ಯೋಜನೆಯಿಂದ ಬೊಕ್ಕಸಕ್ಕೆ ಬೀಳುವ ಆರ್ಥಿಕ ಹೊರೆಯನ್ನು ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ತುಂಬಿಕೊಳ್ಳುತ್ತಿದೆಯೆಂದು ಪ್ರತಿಪಕ್ಷಗಳು ವಿದ್ಯುತ್ ದರ ಏರಿಕೆ ಬಗ್ಗೆ ಸರ್ಕಾರದ ವಿರುದ್ಧ ಹರಿಹಾಯ್ದಿವೆ.

ವಿಜಯೇಂದ್ರ ಆಕ್ರೋಶ:

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೆಇಆರ್​ಸಿಯ ವಿದ್ಯುತ್ ದರ ಹೆಚ್ಚಳ ಬಗ್ಗೆ ಪ್ರತಿಕ್ರಿಯಿಸಿ, ”ಇಂಧನ ಇಲಾಖೆ ಸಿಬ್ಬಂದಿ ಪಿಂಚಣಿ ಮತ್ತು ಗ್ರಾಚ್ಯುಟಿ ಹಣ ಹೊಂದಿಸುವುದು ಇದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ತನ್ನ ಹೊಣೆಗಾರಿಕೆಯನ್ನು ಸಾರ್ವಜನಿಕರ ಮೇಲೆ ಹೊರಿಸುವುದು ಸಮಂಜಸವಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಸರಕಾರದ ವಿರುದ್ಧ ಚರ್ಚೆ ಮಾಡಲಾಗುವುದು” ಎಂದು ಹೇಳಿದ್ದಾರೆ.

ಇಂಧನ ಸಚಿವರ ಸ್ಪಷ್ಟನೆ:

ದರ ಏರಿಕೆ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ”ಗೃಹಜ್ಯೋತಿ ಗ್ಯಾರಂಟಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಯಾವುದೇ ಸಂಬಂಧ ಇಲ್ಲ. ದರ ಏರಿಕೆಯು ಕೆಇಆರ್​​ಸಿಯ ಆದೇಶವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

[t4b-ticker]
error: Content is protected !!