ತಮಿಳುನಾಡಿನ ಭಾಷಾ ಅಭಿವೃದ್ಧಿ ಇಲಾಖೆಯು ತನ್ನ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಕಡ್ಡಾಯ ನಿಯಮವೊಂದನ್ನು ಜಾರಿ ಮಾಡಿದೆ.
ಚೆನ್ನೈ (ತಮಿಳುನಾಡು) : ತಮಿಳು ರಾಜಕೀಯ ನಾಯಕರ್ಯಾರೂ ತಮಿಳು ಭಾಷೆಯಲ್ಲಿ ‘ಸಹಿ’ ಕೂಡ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಕಿಚಾಯಿಸಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿರುವ ತಮಿಳುನಾಡು ಸರ್ಕಾರ, ಇನ್ನು ಮುಂದೆ ಸರ್ಕಾರಿ ನೌಕರರು ಯಾವುದೇ ವ್ಯವಹಾರಗಳಲ್ಲಿ ತಮಿಳಿನಲ್ಲೇ ಕಡ್ಡಾಯವಾಗಿ ‘ಸಹಿ’ ಮಾಡಬೇಕು ಎಂದು ಆದೇಶ ಹೊರಡಿಸಿದೆ.ತಮಿಳು ಅಭಿವೃದ್ಧಿ ಇಲಾಖೆಯು ಇಂಥದ್ದೊಂದು ಆದೇಶ ಮಾಡಿದ್ದು, ಸರ್ಕಾರಿ ನೌಕರರು ಕಡ್ಡಾಯವಾಗಿ ತಮಿಳಿನಲ್ಲಿ ಸಹಿ ಮಾಡಬೇಕು. ಸರ್ಕಾರಿ ಆದೇಶಗಳನ್ನು ತಮಿಳು ಭಾಷೆಯಲ್ಲೇ ಪ್ರಕಟಿಸಬೇಕು. ಈ ನಿಯಮ ಮೀರುವಂತಿಲ್ಲ ಎಂದು ಸೂಚಿಸಿದೆ.ವಾಣಿಜ್ಯ ಸಂಸ್ಥೆಗಳು, ರೆಸ್ಟೋರೆಂಟ್‌ಗಳು, ಅಂಗಡಿಗಳು ಮತ್ತು ಶಾಪಿಂಗ್ ಮಾಲ್‌ಗಳ ಮೇಲಿನ ನಾಮಫಲಕಗಳು ತಮಿಳಿನಲ್ಲಿಯೇ ಇರಬೇಕು ಎಂದು ಸರ್ಕಾರ ಈಗಾಗಲೇ ಆದೇಶಿಸಿದೆ. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಆದರೆ, ಸರ್ಕಾರಿ ಆದೇಶಗಳು, ಪತ್ರ ವ್ಯವಹಾರಗಳು ತಮಿಳಿನಲ್ಲಿ ಇರುವುದಿಲ್ಲ ಎಂಬ ಅಪಸ್ವರವಿತ್ತು. ಇದಕ್ಕೆ ಇತಿಶ್ರೀ ಹಾಡಲು ಮುಂದಾಗಿರುವ ಸ್ಟಾಲಿನ್ ಸರ್ಕಾರ, ಎಲ್ಲವನ್ನೂ ತಮಿಳುಮಯ ಮಾಡಲು ಹೊರಟಿದೆ.
ತಮಿಳು ಅಭಿವೃದ್ಧಿ ಮತ್ತು ಮಾಹಿತಿ ಇಲಾಖೆಯ ಅಧಿಸೂಚನೆಯ ಪ್ರಕಾರ, ರಾಜ್ಯದಲ್ಲಿ ತಮಿಳು ಅಧಿಕೃತ ಭಾಷಾ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಮತ್ತು ಸರ್ಕಾರಿ ಕಚೇರಿಗಳಲ್ಲಿನ ಎಲ್ಲಾ ವ್ಯವಹಾರಗಳಲ್ಲಿ ತಮಿಳನ್ನು ತಪ್ಪದೇ ಬಳಸಬೇಕು ಎಂದು ಕೋರಿದೆ.
- ಸರ್ಕಾರಿ ಆದೇಶಗಳನ್ನು ತಮಿಳಿನಲ್ಲಿ ಮಾತ್ರ ಪ್ರಕಟಿಸಬೇಕು
- ಸುತ್ತೋಲೆ, ಟಿಪ್ಪಣಿಗಳು ತಮಿಳಿನಲ್ಲಿ ಇರಬೇಕು
ಯಾವುದೇ ಇಲಾಖೆಯ ಪ್ರಧಾನ ಕಚೇರಿಯಿಂದ ಇತರ ಕಚೇರಿಗಳಿಗೆ ಕಳುಹಿಸುವ ಪತ್ರ ವ್ಯವಹಾರಗಳು ತಮಿಳಿನಲ್ಲಿ ಇರಬೇಕು. ವಿನಾಯಿತಿ ಇರುವ ದಾಖಲೆಗಳನ್ನು ಹೊರತುಪಡಿಸಿ ಎಲ್ಲಾ ಪತ್ರಗಳು, ಅಧಿಕೃತ ಆದೇಶಗಳು ಮತ್ತು ಇತರ ವ್ಯವಹಾರಗಳನ್ನು ತಮಿಳು ಭಾಷೆಯಲ್ಲಿ ಪ್ರಕಟಿಸಬೇಕು ಎಂಬುದು ಆದೇಶದಲ್ಲಿದೆ.
ಜನರಿಗೂ ತಮಿಳಿನಲ್ಲೇ ಉತ್ತರ ನೀಡಿ:
ಸಾರ್ವಜನಿಕರಿಂದ ಸ್ವೀಕರಿಸುವ ಪತ್ರಗಳು, ಟಿಪ್ಪಣಿಗಳು, ದೂರುಗಳಿಗೆ ತಮಿಳಿನಲ್ಲೇ ಉತ್ತರ ನೀಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ, ಇಂಗ್ಲಿಷ್‌ನಲ್ಲಿ ಪ್ರಕಟಣೆಯಾದ ಯಾವುದೇ ದಾಖಲೆ, ಅಧಿಸೂಚನೆಗಳನ್ನು ತಮಿಳು ಅಭಿವೃದ್ಧಿ ಮತ್ತು ಮಾಹಿತಿ ಇಲಾಖೆಯ ಅನುವಾದ ವಿಭಾಗದ ಮೂಲಕ ತಮಿಳು ಭಾಷೆಯಲ್ಲಿ ಅನುವಾದಕ್ಕೆ ಕಳುಹಿಸಿ, ಬಳಿಕ ತಮಿಳಿನಲ್ಲಿ ಪ್ರಕಟಿಸಬೇಕು.
ಮೋದಿ, ಅಮಿತ್ ಶಾ ಹೇಳಿದ್ದೇನು?
ರಾಜ್ಯದಲ್ಲಿ ಹಿಂದಿ ಹೇರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಸ್ಟಾಲಿನ್ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಇದನ್ನು ಗುರಿಯಾಗಿಸಿಕೊಂಡು ರಾಮೇಶ್ವರಂನಲ್ಲಿ ಹೊಸ ಪಂಬನ್ ಸೇತುವೆ ಉದ್ಘಾಟನೆಯ ವೇಳೆ ಟೀಕಿಸಿದ್ದ ಪ್ರಧಾನಿ ಮೋದಿ ಅವರು, ತಮಿಳುನಾಡು ನಾಯಕರು ಕೇಂದ್ರ ಮತ್ತು ಪ್ರಧಾನಿ ಕಚೇರಿಗೆ ಕಳುಹಿಸುವ ಪತ್ರಗಳಿಗೆ ತಮಿಳಿನಲ್ಲಿ ಸಹಿ ಹಾಕುವುದಿಲ್ಲ. ನಿಮ್ಮ ಭಾಷೆಯ ಬಗ್ಗೆ ನಿಮಗೆ ಹೆಮ್ಮೆ ಇದ್ದರೆ, ಕನಿಷ್ಠ ತಮಿಳಿನಲ್ಲಿ ಸಹಿ ಮಾಡಿ ಎಂದು ಛೇಡಿಸಿದ್ದರು.
ಹಿಂದಿಯನ್ನು ವಿರೋಧಿಸುವ ಡಿಎಂಕೆ ನಾಯಕರಿಗೆ ತಮಿಳಿನಲ್ಲಿ ಸಹಿ ಮಾಡುವುದು ಹೇಗೆಂದು ತಿಳಿದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟೀಕಿಸಿದ್ದರು.













































