ಕಾರುಗಳತ್ತ ಮುಖ ಮಾಡಿದ ಭಾರತೀಯರು; ಬೈಕ್​ ಮಾರಾಟದಲ್ಲಿ ಭಾರೀ ಕುಸಿತ!

Picture of Savistara

Savistara

Bureau Report

Car Sales Rise In India: ಭಾರತೀಯರು ಕಾರುಗಳ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಏಪ್ರಿಲ್ 2025ರಲ್ಲಿ ಶೇಕಡಾ 4ರಷ್ಟು ಏರಿಕೆ ಕಂಡಿದೆ.

Car sales rise in India: ವರ್ಷದಿಂದ ವರ್ಷಕ್ಕೆ ಕಾರುಗಳ ಮಾರಾಟ ಏರುತ್ತಲೇ ಇದೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತೀಯರು ಕಾರಿನ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ. ಕೈಗಾರಿಕಾ ಸಂಸ್ಥೆ SIAM (ಸೊಸೈಟಿ ಆಫ್​ ಇಂಡಿಯನ್​ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್​) ಬಿಡುಗಡೆ ಮಾಡಿದ ವರದಿಯಂತೆ, ಭಾರತದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಏಪ್ರಿಲ್ 2025ರಲ್ಲಿ ಶೇ.4ರಷ್ಟು ಬೆಳವಣಿಗೆ ದಾಖಲಿಸಿದೆ. ಈ ಅವಧಿಯಲ್ಲಿ ಒಟ್ಟು 3,48,847 ಪ್ರಯಾಣಿಕ ವಾಹನಗಳನ್ನು ಡೀಲರ್‌ಗಳಿಗೆ ರವಾನಿಸಲಾಗಿದ್ದು, ಇದು ಏಪ್ರಿಲ್, 2024ಕ್ಕಿಂತ (3,35,629) ಹೆಚ್ಚಾಗಿದೆ.ಏಪ್ರಿಲ್‌ನಲ್ಲಿ ಭಾರತದಿಂದ ರಫ್ತಾಗುತ್ತಿರುವ ಕಾರುಗಳ ಸಂಖ್ಯೆ ಕಳೆದ ವರ್ಷದ ಏಪ್ರಿಲ್​ ತಿಂಗಳಿಗೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಾಗಿದೆ. ಈ ಬಾರಿ ಏಪ್ರಿಲ್​ನಲ್ಲಿ 59,395 ವಾಹನಗಳು ಭಾರತದಿಂದ ರಫ್ತಾಗಿವೆ. ಇದೇ ವೇಳೆ, ದ್ವಿಚಕ್ರ ವಾಹನಗಳ ರಫ್ತಿನಲ್ಲಿ ಈ ವರ್ಷ ಕೇವಲ ಶೇ.14.7ರಷ್ಟು ಏರಿಕೆಯಾಗಿದ್ದು, 3,68,201 ಬೈಕ್​ಗಳನ್ನು ಮಾತ್ರ ಭಾರತದಿಂದ ರಫ್ತು ಮಾಡಲಾಗಿದೆ ಎಂದು SIAM ಡಾಟಾದಿಂದ ತಿಳಿದುಬಂದಿದೆ.

ಏಪ್ರಿಲ್‌ನಲ್ಲಿ ಅತ್ಯಧಿಕ ಮಾರಾಟ:

‘ಪ್ರಯಾಣಿಕ ವಾಹನ ವಿಭಾಗವು ಏಪ್ರಿಲ್ 2025ರಲ್ಲಿ 3.49 ಲಕ್ಷ ಯುನಿಟ್‌ಗಳ ಮಾರಾಟದೊಂದಿಗೆ ಏಪ್ರಿಲ್‌ನಲ್ಲಿ ಇದುವರೆಗಿನ ಅತ್ಯಧಿಕ ಸಗಟು ಮಾರಾಟವನ್ನು ದಾಖಲಿಸಿದೆ’ ಎಂದು SIAM ಮಹಾನಿರ್ದೇಶಕ ರಾಜೇಶ್ ಮೆನನ್ ಹೇಳಿದರು.

ದ್ವಿಚಕ್ರ ವಾಹನ ಮಾರಾಟದಲ್ಲಿ ಭಾರಿ ಕುಸಿತ:

ಮತ್ತೊಂದೆಡೆ, ದ್ವಿಚಕ್ರ ವಾಹನಗಳ ಸಗಟು ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.16.7ರಷ್ಟು ಭಾರಿ ಕುಸಿತ ಕಂಡಿದೆ. ಏಪ್ರಿಲ್ 2025ರಲ್ಲಿ ಕೇವಲ 14,58,784 ಯುನಿಟ್‌ಗಳನ್ನು ಡೀಲರ್‌ಗಳಿಗೆ ರವಾನಿಸಲಾಗಿದೆ. ಆದರೆ ಏಪ್ರಿಲ್ 2024ರಲ್ಲಿ ಈ ಸಂಖ್ಯೆ 17,51,393 ಆಗಿತ್ತು.‘ಕಳೆದ ವರ್ಷ ಏಪ್ರಿಲ್‌ನಲ್ಲಿ ಮಾರಾಟವಾದ 17,51,393 ಯೂನಿಟ್‌ಗಳಿಗೆ ಹೋಲಿಸಿದರೆ,ದ್ವಿಚಕ್ರ ವಾಹನ ವಿಭಾಗವು ಬೆಳವಣಿಗೆಯಲ್ಲಿ ಕುಸಿತ ಕಂಡಿದೆ. ಆದರೆ, ಮುಂಬರುವ ತಿಂಗಳುಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆಯಿದೆ’ ಎಂದು SIAM ಮಹಾನಿರ್ದೇಶಕರು ಹೇಳಿದ್ದಾರೆ.

  • ಸ್ಕೂಟರ್ ಮಾರಾಟ: 5,48,370 ಯುನಿಟ್‌ಗಳು (ಕಳೆದ ವರ್ಷ 5,81,277 ಯುನಿಟ್‌ಗಳು) – ಶೇ.6ರಷ್ಟು ಕುಸಿತ.
  • ಮೋಟಾರ್ ಸೈಕಲ್ ಮಾರಾಟ: 8,71,666 ಯುನಿಟ್‌ಗಳು (ಕಳೆದ ವರ್ಷ 11,36,192 ಯುನಿಟ್‌ಗಳು) – ಶೇ.23ರಷ್ಟು ಕುಸಿತ.
  • ಮೊಪೆಡ್ ಮಾರಾಟ: 38,748 ಯುನಿಟ್‌ಗಳು (ಕಳೆದ ವರ್ಷ 41,924 ಯುನಿಟ್‌ಗಳು) – ಶೇ.8ರಷ್ಟು ಕುಸಿತ

ಹೊಸ ನಿಯಮ, ಮತ್ತು ಇಂಧನ ಆಯ್ಕೆ ಎಫೆಕ್ಟ್​: ಏಪ್ರಿಲ್ 2025ರಲ್ಲಿ ಪ್ರಯಾಣಿಕ ವಾಹನಗಳು, ತ್ರಿಚಕ್ರ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಕ್ವಾಡ್ರಿಸೈಕಲ್‌ಗಳ ಒಟ್ಟು ಮಾರಾಟ ಗಮನಿಸಿದರೆ 2,318,882 ಯೂನಿಟ್‌ಗಳಿಗೆ ಏರಿದೆ. ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳಿಗೆ ‘ಆನ್-ಬೋರ್ಡ್ ಡಯಾಗ್ನೋಸ್ಟಿಕ್ಸ್’ಗಾಗಿ (OBD-2) ಏಪ್ರಿಲ್ 2025ರಿಂದ ಜಾರಿಗೆ ಬಂದ ಎರಡನೇ ಹಂತದ ನಿಯಂತ್ರಕ ಮಾನದಂಡಗಳನ್ನು ಆಟೋ ಉದ್ಯಮವು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಅಲ್ಲದೆ, E20 ಇಂಧನದಲ್ಲಿ (ಶೇ.20ರಷ್ಟು ಎಥೆನಾಲ್+ಶೇ.80ರಷ್ಟು ಪೆಟ್ರೋಲ್) ಚಲಿಸುವ ಸಾಮರ್ಥ್ಯವಿರುವ ಪೆಟ್ರೋಲ್ ವಾಹನಗಳನ್ನು ಈಗ ದೇಶಾದ್ಯಂತ ಪರಿಚಯಿಸಲಾಗಿದೆ.

E20 ಇಂಧನ ತಂತ್ರಜ್ಞಾನ ಪರಿಸರ ಸ್ನೇಹಿ:

ಭಾರತಕ್ಕೆ ಪರ್ಯಾಯ ಮತ್ತು ಶುದ್ಧ ಇಂಧನದತ್ತ ಪ್ರಮುಖ ಹೆಜ್ಜೆಯಾಗಿ E20- ಕಂಪ್ಲೈಂಟ್ ಪೆಟ್ರೋಲ್ ವಾಹನಗಳ ಪರಿಚಯವನ್ನು ಪರಿಗಣಿಸಲಾಗಿದೆ. ಇದು ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಾಲಿನ್ಯದ ಮಟ್ಟದಲ್ಲೂ ಸಹ ಇಳಿಮುಖವಾಗುವ ನಿರೀಕ್ಷೆಯಿದೆ.

ಇತ್ತೀಚಿನ ಕ್ರಿಸಿಲ್ ವರದಿಯ ಪ್ರಕಾರ, ದೇಶಿಯ ಪ್ರಯಾಣಿಕ ವಾಹನ (PV) ಡೀಲರ್‌ಶಿಪ್ ಉದ್ಯಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 100 ಬೇಸಿಸ್ ಪಾಯಿಂಟ್‌ಗಳ (bps) ಆದಾಯದ ಬೆಳವಣಿಗೆ ಕಾಣಲಿದೆ.”ತೆರಿಗೆ ಸ್ಲ್ಯಾಬ್‌ಗಳಲ್ಲಿನ ಪರಿಷ್ಕರಣೆ, ಬಡ್ಡಿದರ ಕಡಿತ, ಕಡಿಮೆ ಹಣದುಬ್ಬರ ಮತ್ತು SUVಗಳ ನಿರಂತರ ಜನಪ್ರಿಯತೆಯಿಂದ ಪ್ರಯಾಣಿಕ ವಾಹನಗಳಿಗೆ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದಲ್ಲದೆ, ಸಾಮಾನ್ಯ ಮಾನ್ಸೂನ್ ಮತ್ತು MSP ಹೆಚ್ಚಳದ ನಡುವೆ ಹೆಚ್ಚಿನ ಕೃಷಿ ಆದಾಯವು ವಾಹನಗಳ ಗ್ರಾಮೀಣ ಮಾರಾಟವನ್ನೂ ವೃದ್ಧಿಸುತ್ತದೆ ಎಂದು ಕ್ರಿಸಿಲ್ ರೇಟಿಂಗ್ಸ್ ನಿರ್ದೇಶಕ ಹಿಮಾಂಕ್ ಶರ್ಮಾ ತಿಳಿಸಿದ್ದಾರೆ.

[t4b-ticker]
error: Content is protected !!