ಸುಳ್ಯ:_ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ವತಿಯಿಂದ _‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’_ ಅಭಿಯಾನದಡಿ ಸುಳ್ಯ ನಗರ ಪಂಚಾಯತ್ ಮುಂಭಾಗ ಪ್ರತಿಭಟನಾ ಪಾದಯಾತ್ರೆ ಮತ್ತು ಹಕ್ಕೊತ್ತಾಯ ಸಭೆ ನಡೆಯಿತು.

ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ನಡೆಸಿ, ಬಳಿಕ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಬಿಜೆಪಿ ವಕ್ತಾರ ವಿಕಾಸ್ ನಾಯಕ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬೆಲೆ ಏರಿಕೆ ನಿಯಂತ್ರಣವಿಲ್ಲದಾಗಿದೆ.


ಪಂಚ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಾಲು, ಮೊಸರು, ಬಸ್ ಟಿಕೆಟ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ರಾಜ್ಯದಲ್ಲಿ ಹುಟ್ಟುವ ಪ್ರತಿ ವ್ಯಕ್ತಿಯ ಮೇಲೂ ಸಾಲದ ಹೊರೆ ಹೇರಿದ್ದು, ಕಾಂಗ್ರೆಸ್ ಸರ್ಕಾರ ಕಿತ್ತೋಗುವವರೆಗೆ ನಮ್ಮ ಹೋರಾಟ ನಿರಂತರ ನಡೆಯಲಿದೆ ಎಂದರು.ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಜನರ ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದ್ದು, ಜನಸಾಮಾನ್ಯರ ಕೆಲಸಗಳಾಗುತ್ತಿಲ್ಲ.


ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಪಟ್ಟಿ ನಮ್ಮಲ್ಲಿದ್ದು, ನೀವು ಮೂರು ವರ್ಷದಲ್ಲಿ ಏನು ಮಾಡಿದ್ದೀರಿ ದಾಖಲೆ ಸಮೇತ ಚರ್ಚೆಗೆ ಬಿಜೆಪಿ ಸದಾ ಸಿದ್ಧ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್ ತಿಳಿಸಿದರು.ಸಭೆಯಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ,


ಪಿ.ಕೆ. ಉಮೇಶ್, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎ.ಟಿ. ಕುಸುಮಾಧರ, ಅವಿನಾಶ್ ಕುರುಂಜಿ, ಜಗನ್ನಾಥ ಜಯನಗರ, ಶ್ರೀಕಾಂತ್ ಮಾವಿನಕಟ್ಟೆ, ಶಶಿಕಲಾ ನೀರಬಿದಿರೆ, ಗಿರೀಶ್ ಕಲ್ಲುಗದ್ದೆ, ಲೋಕೇಶ್ ಕೆರೆಮೂಲೆ, ಶೀಲಾ ಕುರುಂಜಿ, ಶಿಲ್ಪಾ ಸುದೇವ್, ಬಿಜೆಪಿ ಪದಾಧಿಕಾರಿಗಳು, ಶಕ್ತಿ ಕೇಂದ್ರ ಪ್ರಮುಖರು, ಬೂತ್ ಸಮಿತಿ ಸದಸ್ಯರು, ಮಾಜಿ ನಗರ ಪಂಚಾಯತ್ ಸದಸ್ಯರು, ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.














































