“ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಸಾವಿರಾರು ಕೋಟಿ ರೂಪಾಯಿ ಜನರಿಗೆ ನೀಡದೇ ಮಾತು ತಪ್ಪಿರುವ ಕಾಂಗ್ರೆಸ್ ಸರ್ಕಾರ, ಈಗ ಪರಭಾಷೆ ನಟಿಗೆ ಮಣೆ ಹಾಕುವುದನ್ನು ನಿಲ್ಲಿಸಬೇಕು ಹಾಗೂ ರಾಜ್ಯ ಸರ್ಕಾರ ಈ ಕೂಡಲೇ ಈ ನೇಮಕವನ್ನು ತಕ್ಷಣವೇ ರದ್ದುಗೊಳಿಸಬೇಕು. ಕನ್ನಡಿಗರ 6.20 ಕೋಟಿ ರೂಪಾಯಿಯನ್ನು ಉಳಿಸಲಿ ಎಂದು ಈ ಮೂಲಕ ಒತ್ತಾಯಿಸುತ್ತೇನೆ” -ಯದುವೀರ ಒಡೆಯರ್
ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ಬ್ರ್ಯಾಂಡ್ ಅಂಬಾಸಿಡರ್ (brand ambassador) ಆಗಿ ನಟಿ ತಮನ್ನಾ ಭಾಟಿಯಾ (Tamannaah Bhatia) ಅವ್ರನ್ನು ಆಯ್ಕೆ ಮಾಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಇದೀಗ ಬಿಜೆಪಿ ಸಂಸದ (BJP MP), ಮೈಸೂರು ರಾಜಮನೆತನದ ಯದುವೀರ ಒಡೆಯರ್ (Yaduveer Wadiyar) ಕೂಡ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಯದುವೀರ ಒಡೆಯರ್, ತಮನ್ನಾ ಆಯ್ಕೆ ಒಂದು ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ನಿರ್ಧಾರ ಅಂತ ಕಿಡಿಕಾರಿದ್ದಾರೆ.ತಮನ್ನಾ ಆಯ್ಕೆಗೆ ಯದುವೀರ್ ವಿರೋಧಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ಗೆ ನಟಿ ತಮನ್ನಾ ಭಾಟಿಯಾ ರಾಯಭಾರಿ ಆಗಿದ್ದಕ್ಕೆ ಸಂಸದ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪರಭಾಷೆ ನಟಿ ತಮನ್ನಾ ಭಾಟಿಯಾರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅತ್ಯಂತ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ನಿರ್ಧಾರ ಅಂತ ಕಿಡಿಕಾರಿದ್ದಾರೆ.
ಇತಿಹಾಸ ಕೆದಕಿ ಯದುವೀರ್ ಆಕ್ರೋಶ
ಈ ಸಂಸ್ಥೆ ಕಟ್ಟಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. 1916ರಲ್ಲಿ ನಮ್ಮ ಮೈಸೂರು ಸಂಸ್ಥಾನದಲ್ಲಿ ವಹಿಸಿದ್ದರು. ಸಂಸ್ಥೆಯ ಸೋಪ್ ದಶಕಗಳಿಂದಲೂ ಎಲ್ಲರ ಮನೆಯಲ್ಲಿ ಸ್ಥಾನ ಪಡೆದಿತ್ತು. ಈ ಸಂಸ್ಥೆಯ ಬಹುತೇಕ ವಸ್ತುಗಳನ್ನು ಬಳಸುತ್ತಿದ್ದವರೇ ಕನ್ನಡಿಗರು. ಇಂಥ ಸಂಸ್ಥೆಗೆ ಪರಭಾಷೆ ನಟಿಯನ್ನು ರಾಯಭಾರಿಯನ್ನಾಗಿ ಮಾಡಿದ್ದು ಹುಚ್ಚುತನ ಅಂತ ಯದುವೀರ್ ಒಡೆಯರ್ ಕಿಡಿಕಾರಿದ್ದಾರೆ.
ಕನ್ನಡ ನಟ, ನಟಿಯರನ್ನೇ ನೇಮಿಸಿಕೊಳ್ಳಬೇಕಿತ್ತು
ಅದು ಸಾಲದೆಂಬಂತೆ ಆರು ಕೋಟಿ ರೂಪಾಯಿಗಳಿಗೂ ಹೆಚ್ಚು ರೂಪಾಯಿ ನೀಡಿ ರಾಯಭಾರಿ ಮಾಡಿರುವುದು ಅಕ್ಷಮ್ಯ. ಈ ಸಂಸ್ಥೆಗೆ ರಾಯಭಾರಿಯನ್ನು ಮಾಡಲೇಬೇಕು ಎಂಬುದು ಸರ್ಕಾರದ ನಿರ್ಧಾರವಾಗಿದ್ದರೆ ಕನ್ನಡದ ಜನಪ್ರಿಯ ಹಾಗೂ ಪ್ರತಿಭಾವಂತ ನಟಿಯರನ್ನು ನೇಮಿಸಿಕೊಳ್ಳಬೇಕಾಗಿತ್ತು ಅಂತ ಯದುವೀರ್ ಸಲಹೆ ನೀಡಿದ್ದಾರೆ. ತಮನ್ನಾ ಭಾಟಿಯಾ ಅವರಿಗೆ ಮಣೆ ಹಾಕುವ ಮೂಲಕ ರಾಜ್ಯ ಸರ್ಕಾರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ ಅಂತ ಯದುವೀರ್ ಬೇಸರಿಸಿದ್ದಾರೆ.
ತಮನ್ನಾ ಆಯ್ಕೆಗೆ ಕರವೇ ವಿರೋಧ!
ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂಪಾಯಿ ತೆತ್ತು ನೇಮಕ ಮಾಡಿರುವುದು ಅವಿವೇಕದ, ಅಸಂಬದ್ಧ, ಅನೈತಿಕ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಅಂತ ನಾರಾಯಣ ಗೌಡ ಕಿರಿಕಾರಿದ್ದಾರೆ.
2 ಕೋಟಿ ವ್ಯಯಿಸಿರುವುದು ಆಕ್ಷೇಪಾರ್ಹ
ಮೈಸೂರು ಸೋಪ್ಸ್ ಸಂಸ್ಥೆ ಕರ್ನಾಟಕ ಸರ್ಕಾರದ ಸ್ವಾಮ್ಯದ ಕಂಪನಿ. 1916ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದರು. ಈ ಕಂಪನಿಯು ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ ಮತ್ತು ಇದರ ಪ್ರಾಥಮಿಕ ಗ್ರಾಹಕರು ಕನ್ನಡಿಗರಾಗಿದ್ದಾರೆ ಎನ್ನುವ ಕನಿಷ್ಠ ತಿಳಿವಳಿಕೆ ಈ ನೇಮಕ ಮಾಡುವಾಗ ಇರಲಿಲ್ಲವೇ? ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವುಳ್ಳ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೇ ಬೇಕಿತ್ತೆ? ಈ ನೇಮಕಕ್ಕಾಗಿ ಕರ್ನಾಟಕ ಸರ್ಕಾರವು 6.20 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ವ್ಯಯಿಸಿರುವುದು ಇನ್ನಷ್ಟು ಆಕ್ಷೇಪಾರ್ಹವಾಗಿದೆ ಅಂತ ನಾರಾಯಣ ಗೌಡ ಕಿಡಿಕಾರಿದ್ದಾರೆ.
ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಕರ್ನಾಟಕದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಈ ಕಂಪನಿಯು ಕನ್ನಡಿಗರ ಗುರುತನ್ನು ಪ್ರತಿನಿಧಿಸುವ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ತಮನ್ನಾ ಭಾಟಿಯಾ ಅವರ ನೇಮಕವು ಕರ್ನಾಟಕದ ಜನರ ಭಾವನೆಗಳಿಗೆ ಧಕ್ಕೆ ತರುವಂತಿದ್ದು, ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರ ಪ್ರತಿಭಟನೆಯನ್ನು ಆಯೋಜಿಸಲಿದೆ. ಕರ್ನಾಟಕ ಸರ್ಕಾರ ಮತ್ತು ಮೈಸೂರು ಸೋಪ್ಸ್ ಕಂಪನಿಯು ಕನ್ನಡಿಗರ ಭಾವನೆಗಳಿಗೆ ಮನ್ನಣೆ ನೀಡಿ, ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸುತ್ತೇವೆ ಅಂತ ನಾರಾಯಣ ಗೌಡ ಹೇಳಿದ್ದಾರೆ.












































