ಶಿವಮೊಗ್ಗಕ್ಕೆ 2 ವಂದೇ ಭಾರತ್‌ ರೈಲು; ಒಂದು ತಿರುಪತಿಗೆ, ಮತ್ತೊಂದು ಬೆಂಗಳೂರಿಗೆ ಸಂಚಾರ – ಬಿವೈ ರಾಘವೇಂದ್ರ | ಶಿವಮೊಗ್ಗ ರೈಲ್ವೆ ಕ್ರಾಂತಿಗೆ ನಾಂದಿ

Picture of Savistara

Savistara

Bureau Report

ನಗರ ಹೊರ ವಲಯದ ಕೋಟೆಗಂಗೂರಿನಲ್ಲಿ ರಾಜ್ಯದ 4ನೇ ರೈಲ್ವೆ ಕೋಚಿಂಗ್ ಡಿಪೋ ಆರಂಭದೊಂದಿಗೆ ಶಿವಮೊಗ್ಗದಲ್ಲಿ ಹೊಸ ರೈಲ್ವೆ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ಸಂಸದ ಬಿ. ವೈ.ರಾಘವೇಂದ್ರ ಹೇಳಿದರು. ನಗರದ ಜಿಲ್ಲಾ ಬಂಜಾರ ಭವನದಲ್ಲಿ ಮಂಗಳವಾರ ಬಿಜೆಪಿ ವಿಭಾಗ ಮಟ್ಟದ ಪ್ರಬುದ್ಧರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಬೆಂಗಳೂರು ಮತ್ತು ಮೈಸೂರು ರೈಲ್ವೆ ಮೇಲಿನ ಒತ್ತಡ ಕಡಿಮೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಅದಕ್ಕಾಗಿ ಬಹಳಷ್ಟು ರೈಲುಗಳು ಬೆಂಗಳೂರು ಮತ್ತು ಮೈಸೂರು ಬದಲಾಗಿ ಶಿವಮೊಗ್ಗದಿಂದ ಸಂಚಾರ ಆರಂಭಿಸಲು ಯೋಜನೆ ರೂಪಿಸಲಾಗಿದೆ.ರೈಲ್ವೆ ಕೋಚಿಂಗ್ ಡಿಪೋ 2026ನೇ ಜನವರಿ ಅಂತ್ಯದೊಳಗೆ ಆರಂಭವಾಗಲಿದೆ.

ಅದರ ಜತೆಗೆ ಎರಡು ವಂದೇ ಭಾರತ್ ರೈಲುಗಳು ಶಿವಮೊಗ್ಗದಿಂದ ಸಂಚಾರ ಆರಂಭಿಸುತ್ತವೆ. ಈಗಾಗಲೆ ಎರಡೂ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಹಾಗೂ ಗಾಡಿ ಸಂಖ್ಯೆಯನ್ನೂ ಇಲಾಖೆ ಪ್ರಕಟಿಸಿದೆ. ಶಿವಮೊಗ್ಗ ತಿರುಪತಿ ಎಂದೇ ಭಾರತ್ ರೈಲು ಮುಂಜಾನೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.30ಕ್ಕೆ ತಿರುಪತಿ ತಲುಪುತ್ತದೆ. ಮತ್ತೆ ಸಂಜೆ 4.30ಕ್ಕೆ ಹೊರಟು ರಾತ್ರಿ 12.30ಗಂಟೆಗೆ ಶಿವಮೊಗ್ಗ ತಲುಪುತ್ತದೆ. ಮತ್ತೊಂದು ವಂದೇ ಭಾರತ್ ರೈಲು ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸಲಿದೆ. ಇದಲ್ಲದೆ ಶಿವಮೊಗ್ಗ ಎರ್ನಾಕುಲಂ(ಕೇರಳ), ಶಿವಮೊಗ್ಗ ಬಗಲ್‌ಪುರ್ (ಬಿಹಾರ), ಶಿವಮೊಗ್ಗ ಜಮ್‌ ಶೆಡ್ ಪುರ್ (ಜಾರ್ಖಂಡ್), ಶಿವಮೊಗ್ಗ ಚಂಡೀಗಢ, ಶಿವಮೊಗ್ಗ ಗೌಹಾಟಿ ರೈಲುಗಳ ಸಂಚಾರ ಜನವರಿ ಮತ್ತು ಫೆಬ್ರವರಿಯಲ್ಲಿ ಆರಂಭಿಸಲು ಇಲಾಖೆ ನಿರ್ಧರಿಸಿದೆ ಎಂದರು.ಮತ್ತೊಂದು ಕಡೆ ತಾಳಗುಪ್ಪದಿಂದ ಹುಬ್ಬಳ್ಳಿ ಸಂಪರ್ಕಕ್ಕೆ ಸಿದ್ದಾಪುರ, ಶಿರಸಿ, ಮುಂಡಗೋಡು ತಡಸ ನಡುವೆ 150 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆ ಆಗಿದೆ. ಈ ಮಾರ್ಗದಲ್ಲಿ 195 ಹೆಕ್ಟರ್ ಖುಷಿ ಭೂಮಿ, 317 ಹೆಕ್ಟರ್ ನೀರಾವರಿ, 190 ಹೆಕ್ಟೇರ್ ಅರಣ್ಯ ಭೂಮಿ ಬರುತ್ತದೆ. ಅರಣ್ಯ ಭೂಮಿಗೆ ಬದಲಿ ಭೂಮಿ ಕೊಡುವ ಕಾರ್ಯ ಆರಂಭವಾಗಿದೆ.

ತಾಳಗುಪ್ಪ- ಹೊನ್ನಾವರ ರೈಲು ಮಾರ್ಗದ ಸರ್ವೆ ಸಹ ಆಗಿದೆ. ಇಲ್ಲಿ ಶೇ.73ರಷ್ಟು ಅರಣ್ಯ ಬರುವುದರಿಂದ ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.ಚಿಕ್ಕಮಗಳೂರು ಬೇಲೂರು ಹಾಸನ ನೂತನ ಮಾರ್ಗಕ್ಕೆ ಸರ್ವೆ ಆರಂಭವಾಗಿದೆ. ಬೀರೂರು ಶಿವಮೊಗ್ಗ ಡಬ್ಬಿಂಗ್‌ಗೆ 1900 ಕೋಟಿ ರೂ. ಅನುಮೋದನೆ ನೀಡಲಾಗಿದ್ದು ಈ ವರ್ಷಾಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ. ಭದ್ರಾವತಿ ಚಿಕ್ಕಜಾಜೂರು ನಡುವೆ 73 ಕಿ.ಮೀ. ರೈಲು ಮಾರ್ಗ ಸರ್ವೆಗೆ ಟೆಂಡರ್ ಆಗಿದೆ. ಇದು ವಿಐಎಎಲ್‌ಗೆ ಅದಿರು ಸಾಗಿಸಲು ಅನುಕೂಲವಾಗುತ್ತದೆ ಎಂದರು.

ಶಿವಮೊಗ್ಗದಿಂದ ಹೊಸ ರೈಲುಗಳು

  1. ಶಿವಮೊಗ್ಗ- ತಿರುಪತಿ(ವಂದೇ ಭಾರತ್)
  2. ಶಿವಮೊಗ್ಗ- ಬೆಂಗಳೂರು(ವಂದೇ ಭಾರತ್)#
  3. ಶಿವಮೊಗ್ಗ- ಎರ್ನಾಕುಲಂ(ಕೇರಳ)
  4. ಶಿವಮೊಗ್ಗ- ಬಗಲ್‌ಪುರ್(ಬಿಹಾರ)
  5. ಶಿವಮೊಗ್ಗ- ಜಮ್‌ಶೆಡ್‌ಪುರ(ಜಾರ್ಖಂಡ್)
  6. ಶಿವಮೊಗ್ಗ- ಚಂಡೀಗಢ(ಪಂಜಾಬ್)
  7. ಶಿವಮೊಗ್ಗ- ಗೌಹಾಟಿ(ಅಸ್ಸಾಂ)
[t4b-ticker]
error: Content is protected !!