ಧರ್ಮಸ್ಥಳ ಪ್ರಕರಣಗಳ ತನಿಖೆಗೆ ನೂತನ ಎಸ್‌ಐಟಿ ತಂಡ ರಚನೆ | ಹಿರಿಯ ಐಪಿಎಸ್ ಅಧಿಕಾರಿ ಡಾ. ಪ್ರಣವ್ ಮೊಹಾಂತಿ ನೇತ್ರತ್ವದಲ್ಲಿ ನಡೆಯಲಿದೆ ತನಿಖೆ

Picture of Savistara

Savistara

Bureau Report

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಎರಡು ದಶಕಗಳಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ, ನಿಗೂಢ ಸಾವು ಮತ್ತು ನಾಪತ್ತೆ ಪ್ರಕರಣಗಳ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿ ಡಾ. ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ನಾಲ್ವರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಶನಿವಾರ ಆದೇಶ ಹೊರಡಿಸಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ನೀಡಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಧರ್ಮಸ್ಥಳದ ಬಳಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ವ್ಯಕ್ತಿಯೊಬ್ಬರ ನ್ಯಾಯಾಲಯದ ಹೇಳಿಕೆ, ಮಾನವ ತಲೆಬುರುಡೆ ಪತ್ತೆಯಾದ ಬಗ್ಗೆ ಮಾಧ್ಯಮ ವರದಿಗಳು ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದ ಹೇಳಿಕೆಯನ್ನು ಆಯೋಗವು ತನ್ನ ಪತ್ರದಲ್ಲಿ ಉಲ್ಲೇಖಿಸಿತ್ತು.

ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ನಾಪತ್ತೆಯಾದ ಮಹಿಳೆಯರು, ವಿದ್ಯಾರ್ಥಿನಿಯರು, ಅಸ್ವಾಭಾವಿಕ ಸಾವು, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ಆಯೋಗ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಒಳಾಡಳಿತ ಇಲಾಖೆಯು (ಅಪರಾಧಗಳು) ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಿದೆ.

ತನಿಖಾ ತಂಡದಲ್ಲಿರುವವರು

ಎಸ್‌ಐಟಿ ತಂಡವು ಪೊಲೀಸ್ ಮಹಾನಿರ್ದೇಶಕ (ಆಂತರಿಕ ಭದ್ರತಾ ವಿಭಾಗ) ಡಾ. ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ತಂಡದ ಸದಸ್ಯರಾಗಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್‌.ಅನುಚೇತ್, ಬೆಂಗಳೂರು ನಗರ ಸಿ.ಎ.ಆ‌ರ್. ಕೇಂದ್ರಸ್ಥಾನದ ಡಿಸಿಪಿ ಶ್ರೀಮತಿ ಸೌಮ್ಯಲತಾ ಹಾಗೂ ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾ‌ರ್ ದಯಾಮ ಅವರನ್ನು ನೇಮಿಸಲಾಗಿದೆ.

ಎಸ್‌ಐಟಿ ಅಧಿಕಾರ ವ್ಯಾಪ್ತಿ

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಇತ್ತೀಚೆಗೆ ದಾಖಲಾದ ಪ್ರಕರಣ (ಮೊ.ಸಂ. 39/2025) ಸೇರಿದಂತೆ, ಈ ಸಂಬಂಧ ರಾಜ್ಯದ ಯಾವುದೇ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಅಥವಾ ಇನ್ನು ಮುಂದೆ ದಾಖಲಾಗಬಹುದಾದ ಎಲ್ಲ ಪ್ರಕರಣಗಳ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ.

ತನಿಖೆಗೆ ಬೇಕಾದ ಹೆಚ್ಚುವರಿ ಸಿಬ್ಬಂದಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ತಂಡಕ್ಕೆ ಅಧಿಕಾರ ನೀಡಲಾಗಿದೆ. ತಂಡವು ತನ್ನ ತನಿಖಾ ಪ್ರಗತಿಯನ್ನು ನಿಯಮಿತವಾಗಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ (ಡಿಜಿ-ಐಜಿಪಿ) ವರದಿ ಮಾಡಲಿದ್ದು, ಅಂತಿಮ ವರದಿಯನ್ನು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

[t4b-ticker]
error: Content is protected !!