ಶ್ರೀಕ್ಷೇತ್ರ ಧರ್ಮಸ್ಥಳ ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ; ಭಕ್ತರ ಸ್ವತ್ತು – ಡಿಕೆ ಸುರೇಶ್‌

Picture of Savistara

Savistara

Bureau Report

ಧರ್ಮಸ್ಥಳವು ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ, ಎಲ್ಲ ಭಕ್ತರಿಗೂ ಸೇರಿದ್ದು. ಮಂಜುನಾಥ ಸ್ವಾಮಿಗೆ ಅಪಮಾನವಾದರೆ ಎಲ್ಲರಿಗೂ ಅಪಮಾನವಾದಂತೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ. ಧರ್ಮಸ್ಥಳದ ಬಗ್ಗೆ ಜನರ ಅನುಮಾನಗಳನ್ನು ನಿವಾರಿಸಲು ಸರ್ಕಾರವು ಎಸ್ಐಟಿ ರಚಿಸಿದೆ. ಇ.ಡಿ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ. ಇದನ್ನು ಒಂದು ಕುಟುಂಬ ನೋಡಿಕೊಳ್ಳುತ್ತಿದ್ದರೂ ಎಲ್ಲಾ ಭಕ್ತರಿಗೂ ಸೇರಿದ ಸ್ವತ್ತು. ಮಂಜುನಾಥ ಸ್ವಾಮಿಗೆ ಅಪಮಾನವಾದರೆ ನಮಗೂ ಅಪಮಾನವಾದಂತೆ ಎಂದು ಮಾಜಿ ಸಂಸದ, ಬಮುಲ್ ಅಧ್ಯಕ್ಷ ಡಿಕೆ ಸುರೇಶ್‌ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಎಸ್ಐಟಿ ರಚನೆ ಮಾಡಿದ್ದಕ್ಕೆ ಕಾರಣ ಹೇಳಿದ್ದಾರೆ.

ಎಸ್‌ಐಟಿ ರಚನೆ ಹಿಂದೂ ಪರ ನೀತಿ

“ಧರ್ಮಸ್ಥಳ ಶ್ರೀಕ್ಷೇತ್ರವನ್ನು ರಾಜ್ಯದ ಬಹುತೇಕ ಮಂದಿ ನಂಬಿ ಪೂಜೆ, ಹರಕೆ ಮಾಡಿಕೊಂಡು ಬಂದಿದ್ದಾರೆ. ಕೆಲವು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಲೇ ಬಂದಿದೆ. ಈ ವಿಚಾರದಲ್ಲಿ ಜನರ ಅನುಮಾನಗಳನ್ನು ನಿವಾರಣೆ ಮಾಡುವುದು ಸರ್ಕಾರದ ಕರ್ತವ್ಯ. ಇದರಿಂದ ಶ್ರೀಕ್ಷೇತ್ರಕ್ಕೂ ಒಳ್ಳೆಯದು. ಕೆಲವರು ಇದನ್ನು ಹಿಂದೂ ವಿರೋಧಿ ನೀತಿ ಎಂಬ ರೀತಿ ಬಿಂಬಿಸುತ್ತಿದ್ದಾರೆ. ಇದು ಹಿಂದೂ ವಿರೋಧಿ ನೀತಿ ಅಲ್ಲ. ಇದು ಹಿಂದೂಗಳ ಪರವಾದ ನೀತಿ. ಹಿಂದೂಗಳಿಗೆ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸಬೇಕಾಗಿದೆ. ಈ ಜವಾಬ್ದಾರಿ ಮಾತನಾಡುತ್ತಿರುವವರು ಸೇರಿದಂತೆ ಎಲ್ಲರ ಮೇಲಿದೆ ಎಂದರು.

ಯಾರನ್ನೂ ರಕ್ಷಿಸುವ ಅವಮಾನಿಸುವ ಪ್ರಶ್ನೆ ಇಲ್ಲ

“ಇದು ಶ್ರೀಕ್ಷೇತ್ರದ ಪಾವಿತ್ರ್ಯತೆ ನಂಬಿಕೆ ಉಳಿಸಿಕೊಳ್ಳುವ ಕೆಲಸವಾಗಿದೆ. ಇದು ರಾಜಕೀಯ ಕೆಸರೆರೆಚಾಟದಿಂದ ಹೊರಗೆ ಬರಬೇಕು. 40 ವರ್ಷಗಳಿಂದ ಪ್ರತಿ ವರ್ಷ ನಾನು ಶ್ರೀಕ್ಷೇತ್ರಕ್ಕೆ ಹೋಗಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಇಲ್ಲಿ ನಂಬಿಕೆ ಎಂಬುದು ಬಹಳ ಮುಖ್ಯ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ, ಯಾರಿಂದ ತಪ್ಪಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಶ್ರೀಕ್ಷೇತ್ರದ ಹೆಸರಿನಲ್ಲಿ ಏನಾದರೂ ಅಪಮಾನ ಆಗಿದ್ದರೆ ಇದನ್ನು ಸರಿಪಡಿಸುವ ಜವಾಬ್ದಾರಿ ಇದರ ಉಸ್ತುವಾರಿಗಳ ಮೇಲೆ ಇದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಅಥವಾ ಅಪಮಾನ ಮಾಡುವ ಪ್ರಶ್ನೆಯಲ್ಲ” ಎಂದು ತಿಳಿಸಿದರು.

ಮುಡಾ ಕುರಿತು ಇಡಿ ಅರ್ಜಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು

“ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದಾಗಿದೆ” ಎಂದು ಬಮುಲ್ ಅಧ್ಯಕ್ಷ ಹಾಗೂ ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ ಅವರು ಹೇಳಿದ್ದಾರೆ. “ನಿನ್ನೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹತ್ವದ್ದಾಗಿದೆ. ಇ.ಡಿ ಸಂಸ್ಥೆ ಹಸ್ತಕ್ಷೇಪ, ಕಾರ್ಯವೈಖರಿ ಹಾಗೂ ಎಲ್ಲೆ ಮೀರಿ ವರ್ತನೆ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇದೇ ಮೊದಲಲ್ಲ. ಕಳೆದ ಎರಡು ವರ್ಷಗಳಿಂದ ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಚಾಟಿ ಬೀಸುತ್ತಲೇ ಇದೆ. ಇ.ಡಿ. ಸಂಸ್ಥೆ ರಾಜಕೀಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು.

ಕಳೆದ ವಾರ ಮದ್ರಾಸ್ ಹೈಕೋರ್ಟ್ ಕೂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ರಾಜಕೀಯ ಪ್ರೇರಿತ ದಾಳಿ ಮಾಡಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ಇ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿಯಾದರೂ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಬಿಟ್ಟು, ಅಭಿವೃದ್ಧಿ ರಾಜಕಾರಣ ಮಾಡಲಿ. ದೇಶದ ಅಭಿವೃದ್ಧಿ, ಯುವಕರ ಭವಿಷ್ಯ ನಿರ್ಮಾಣ ಮಾಡುವ ಬಗ್ಗೆ, ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಚಿಂತನೆ ಮಾಡಲಿ ಎಂದು ಒತ್ತಾಯಿಸುತ್ತೇನೆ” ಎಂದು ತಿಳಿಸಿದರು.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!