ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ನಿಯಮಾವಳಿ; ಬಿಸಿಸಿಐ ಜುಟ್ಟು ಸರಕಾರದ ಕೈಗೆ?

Picture of Savistara

Savistara

Bureau Report

ರಾಷ್ಟ್ರೀಯ ಕ್ರೀಡಾ ನೀತಿ ಮಸೂದೆಯಲ್ಲಿ ಪ್ರಸ್ತಾವ, ಇಂದು ಲೋಕಸಭೆಯಲ್ಲಿ ಮಸೂದೆ ಮಂಡನೆ?

ಹೊಸದಿಲ್ಲಿ: ಸ್ಥಾಪನೆಯಾದಾಗಿನಿಂದಲೂ ಖಾಸಗಿ ಸಂಸ್ಥೆಯಾಗಿಯೇ ಉಳಿದುಕೊಂಡಿರುವ, ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಕೇಂದ್ರ ಸರಕಾರವು ತನ್ನ ಮೇಲಿನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.14 ವರ್ಷದಿಂದ ಬಾಕಿ ಉಳಿದುಕೊಂಡಿದ್ದ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಬುಧವಾರ ಲೋಕಸಭೆಯಲ್ಲಿ ಇದನ್ನು ಮಂಡಿಸಲು ನಿರ್ಧರಿಸಲಾಗಿದೆ. ಬಿಸಿಸಿಐಯನ್ನು ಸರಕಾರದ ನಿಯಂತ್ರಣಕ್ಕೆ ತರಲು ಈ ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ. ಈ ಮಸೂದೆ ಕಾಯ್ದೆಯಾಗಿ ಬದಲಾದ ಬಳಿಕ ಬಿಸಿಸಿಐಯನ್ನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಎಂದು ಗುರುತಿಸಲಾಗುತ್ತದೆ. ಇತರ ಕ್ರೀಡಾ ಪ್ರಾಧಿಕಾರಗಳಂತೆ ಬಿಸಿಸಿಐಯು ಸರಕಾರದ ಅಧೀನಕ್ಕೆ ಒಳಪಟ್ಟರೂ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಆದರೆ ಸಂಸತ್ತು ರೂಪಿಸುವ ನಿಯಮಗಳು ಬಿಸಿಸಿಐಗೆ ಅನ್ವಯವಾಗಲಿವೆ.

ಪ್ರಸ್ತಾವಿತ ಮಸೂದೆಯಲ್ಲಿ ದೇಶದ ಕ್ರೀಡಾ ಸಂಸ್ಥೆಗಳನ್ನು ನಿಯಂತ್ರಿಸುವ, ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಮತ್ತು ನಿಧಿಯನ್ನು ನಿರ್ಧರಿಸುವ ಸಂಸ್ಥೆಯೊಂದನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಬಿಸಿಸಿಐಯೂ ಇದರಡಿ ಕಾರ್ಯನಿರ್ವಹಿಸಲಿದ್ದು, ಉತ್ತಮ ಆಡಳಿತ ನಿರ್ವಹಣೆಗೆ ಸರಕಾರ ನೆರವಾಗಲಿದೆ.

ಬಿಸಿಸಿಐಗೆ ಅನುದಾನ ಸಿಗುವುದಿಲ್ಲ?

ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಸರಕಾರದ ನಿಯಂತ್ರಣದಡಿ ತಂದರೂ ಸರಕಾರದಿಂದ ಅದಕ್ಕೆ ಯಾವುದೇ ಅನುದಾನ ದೊರಕುವ ಸಾಧ್ಯತೆಗಳಿಲ್ಲ. ಬಿಸಿಸಿಐ ತನ್ನದೇ ಆದ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ. ಹೊಸ ಮಸೂದೆಯ ಪ್ರಕಾರ ಸ್ಥಾಪನೆಯಾಗುವ ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನು ಕ್ರೀಡಾ ಪ್ರಾಧಿಕಾರಗಳ ನಿಯಂತ್ರಕ ಎಂದು ಗುರುತಿಸದೆ ಇದ್ದರೂ, ಕ್ರೀಡಾ ಪ್ರಾಧಿಕಾರಗಳನ್ನು ರದ್ದು ಮಾಡುವ ತನ್ನದೇ ಆದ ಅಧಿಕಾರವನ್ನು ಅದು ಹೊಂದಿರುತ್ತದೆ.

ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ ಹಿನ್ನೆಲೆಯ ಕ್ರಮ

2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟನ್ನು ಸೇರ್ಪಡೆ ಮಾಡಿದ ಬಳಿಕ ಬಿಸಿಸಿಐ ಒಲಿಂಪಿಕ್ಸ್‌ ಆಂದೋಲನದ ಭಾಗವಾಗಿದೆ. ಹೀಗಾಗಿ ಈ ಸಂಸ್ಥೆಯನ್ನು ಸರಕಾರದ ಅಧೀನಕ್ಕೆ ತರಲಾಗುತ್ತಿದೆ. ಅಲ್ಲದೆ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಲ್ಲಿ ಉಂಟಾಗುವ ವಿವಾದಗಳನ್ನು ಪರಿಹಾರ ಮಾಡುವ ಮೂಲಕ ಆ್ಯಕ್ಲಿಟ್‌ಗಳಿಗೆ ಹೆಚ್ಚಿನ ನೆರವು ದೊರಕಿಸಿಕೊಡಲು ಸರಕಾರ ಮುಂದಾಗಿದೆ.

ಬಿಸಿಸಿಐ ಅಧ್ಯಕ್ಷರ ಅಧಿಕಾರಾವಧಿ ಹೆಚ್ಚಳ

ಈ ಮಸೂದೆ ಕಾಯ್ದೆಯಾಗಿ ಬದಲಾದರೆ ಬಿಸಿಸಿಐ ಅಧ್ಯಕ್ಷರ ಅಧಿಕಾರಾವಧಿ ವಿಸ್ತರಣೆಯಾಗಲಿದೆ. ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರಗಳ ಅಧ್ಯಕ್ಷರ ಅಧಿಕಾರಾವಧಿಯನ್ನು 70 ವರ್ಷದಿಂದ 75 ವರ್ಷಕ್ಕೆ ಏರಿಕೆ ಮಾಡುವುದು ಈ ಕಾಯ್ದೆಯ ಪ್ರಮುಖ ನಿರ್ಧಾರವಾಗಿದೆ. ಹೀಗಾಗಿ ರೋಜ‌ರ್ ಬಿನ್ನಿ ಅವರು ಇನ್ನೂ 5 ವರ್ಷಗಳ ಕಾಲ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ.

ಸದ್ಯ ಖಾಸಗಿ ಸಂಸ್ಥೆ

1928ರ ಡಿ. 4ರಂದು ಸ್ಥಾಪನೆಯಾದ ಬಿಸಿಸಿಐಯು ಇದುವರೆಗೆ ಖಾಸಗಿ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಿದೆ. ಕ್ರೀಡೆಗೆ ಸಂಬಂಧಿಸಿ ಸರಕಾರ ರೂಪಿಸುವ ಯಾವುದೇ ಕಾಯ್ದೆಗಳು ಹಾಗೂ ಕಾನೂನುಗಳು ಬಿಸಿಸಿಐಗೆ ಅನ್ವಯವಾಗುತ್ತಿರಲಿಲ್ಲ. ಅದು ತನ್ನದೇ ಆದ ನೀತಿಗಳನ್ನು ಹೊಂದಿದ್ದು, ಅದರನ್ವಯ ಕಾರ್ಯನಿರ್ವಹಣೆ ಮಾಡುತ್ತಿದೆ. 2019ರವರೆಗೆ ಬಿಸಿಸಿಐಯನ್ನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಎಂದು ಕೂಡ ಗುರುತಿಸಲಾಗುತ್ತಿರಲಿಲ್ಲ. 2020ರಲ್ಲಿ ಬಿಸಿಸಿಐಯನ್ನು ಆರ್‌ಟಿಐ ವ್ಯಾಪ್ತಿಗೆ ತರಲಾಯಿತು. ಆದರೆ ಹೊಸ ಕ್ರೀಡಾ ಮಸೂದೆಯು ಬಿಸಿಸಿಐಯನ್ನು ಕ್ರೀಡಾ ಸಚಿವಾಲಯದ ವ್ಯಾಪ್ತಿಗೆ ತರಲಿದ್ದು ಸರಕಾರದ ನಿಯಂತ್ರಣಕ್ಕೆ ಒಳಪಡಲಿದೆ.

ಮುಂದೇನಾಗುತ್ತದೆ?

  • ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರವೆಂದು ಘೋಷಣೆ
  • ಕ್ರೀಡಾ ಸಚಿವಾಲಯದ ನೀತಿಗಳು ಬಿಸಿಸಿಐಗೆ ಅನ್ವಯ
  • ಸಂಸತ್ತು ರೂಪಿಸಿದ ನಿಯಮದಂತೆ ಚುನಾವಣೆ
  • ಬಿಸಿಸಿಐಯನ್ನು ವಜಾ ಮಾಡುವ ಅಧಿಕಾರವೂ ಸರಕಾರಕ್ಕೆ

ಯಾಕೆ ಬದಲಾವಣೆ?

  • ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾದ ಹಿನ್ನೆಲೆ
  • ಕ್ರೀಡಾ ಸಂಸ್ಥೆಗಳಲ್ಲಿ ಪಾರದರ್ಶಕತೆ ಕಾಪಾಡಲು
  • ಕ್ರೀಡಾಪಟುಗಳ ರಕ್ಷಣೆ, ಅವಕಾಶ ಹೆಚ್ಚಳಕ್ಕೆ ಈ ಕ್ರಮ
  • ಕ್ರೀಡಾಸಂಸ್ಥೆಯಲ್ಲಿ ಲಿಂಗ ಸಮಾನತೆ ತರುವುದು
News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!