ಅಹಮದಾಬಾದ್ ವಿಮಾನ ದುರಂತ ನಡೆದ ನಾಲ್ಕೇ ದಿನದಲ್ಲಿ ಒಂದೇ ದಿನಕ್ಕೆ 112 ಪೈಲಟ್ಗಳು ಅನಾರೋಗ್ಯದ ರಜೆ ಅರ್ಜಿ ಸಲ್ಲಿಸಿದ್ದಾರೆ.
ನವದೆಹಲಿ: ಅಹಮದಾಬಾದ್ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 260 ಮಂದಿ ಸಾವನ್ನಪ್ಪಿದ ಪ್ರಕರಣದ ಬಳಿಕ ಏರ್ ಇಂಡಿಯಾ ಸಂಸ್ಥೆಯಲ್ಲಿ ಪೈಲಟ್ಗಳಲ್ಲಿ ಅನಾರೋಗ್ಯ ರಜೆಗಳ ಅರ್ಜಿಯಲ್ಲಿ ಏರಿಕೆ ಕಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಲೋಕಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ಸಲ್ಲಿಸಿದ ರಾಜ್ಯ ವಿಮಾನಯಾನ ಸಚಿವ ಮುರಳೀಧರ ಮೊಹಲ್, ಪೈಲಟ್ಗಳ ಅನಾರೋಗ್ಯದ ರಜೆ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ. ಜೂನ್ 16ರಂದು ಒಂದೇ ದಿನದಲ್ಲಿ 51 ಕಮಾಂಡರ್ಗಳು ಅನಾರೋಗ್ಯದ ರಜೆ ಪಡೆದಿದ್ದಾರೆ ಎಂದು ತಿಳಿಸಿದರು.ಎಐ-171 ವಿಮಾನ ಅಪಘಾತದ ಬಳಿಕ ಎಲ್ಲಾ ವಿಮಾನಗಳಲ್ಲಿ ಕೂಡ ಪೈಲಟ್ಗಳ ಅನಾರೋಗ್ಯದ ರಜೆ ಅರ್ಜಿಗಳಲ್ಲಿ ಹೆಚ್ಚಳ ವರದಿ ಕಂಡಿದೆ ಎಂದು ಏರ್ ಇಂಡಿಯಾ ವರದಿ ಮಾಡಿದೆ. ಜೂನ್ 16ರಂದು ಒಟ್ಟಾರೆ 112 ಪೈಲಟ್ಗಳು ಅನಾರೋಗ್ಯದ ವರದಿ ಮಾಡಿದ್ದು, ಇದರಲ್ಲಿ 51 ಕಮಾಂಡರ್ (ಪಿ1) ಹಾಗೂ 61 ಫಸ್ಟ್ ಆಫೀಸರ್ (ಪಿ2) ಇದ್ದಾರೆ.
ಜೂನ್ 12ರಂದು ಅಹಮದಾಬಾದ್ನಿಂದ ಲಂಡನ್ನ ಗ್ಯಾಟ್ವಿಕ್ಗೆ ತೆರಳುತ್ತಿದ್ದ ಬೋಯಿಂಗ್ 787-8 ಏರ್ಕ್ರಾಮ್ ಎಐ 171 ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣದಲ್ಲಿ ದುರಂತಕ್ಕೆ ಒಳಗಾಗಿತ್ತು. ಈ ಭೀಕರ ವಿಮಾನ ಪತನದಲ್ಲಿ 260 ಮಂದಿ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಅಚ್ಚರಿಯಂತೆ ಬದುಕುಳಿದಿದ್ದರು.2023ರ ಫೆಬ್ರವರಿಯಲ್ಲಿ ಡಿಜಿಸಿಎ ವೈದ್ಯಕೀಯ ಪ್ರಕಟಣೆಯಲ್ಲಿ, ವಿಮಾನ ಸಿಬ್ಬಂದಿ/ಎಟಿಸಿಒಗಳ ಮಾನಸಿಕ ಆರೋಗ್ಯ ಸ್ಥಿತಿಗಳ ದುಷ್ಪರಿಣಾಮಗಳನ್ನು ಗುರುತಿಸಲು ಮತ್ತು ನಿರ್ವಹಿಸಲು ಪ್ರತ್ಯೇಕ, ಸ್ವತಂತ್ರ ಮತ್ತು ಕಸ್ಟಮೈಸ್ ಮಾಡಿದ ತರಬೇತಿ ಕ್ಯಾಪ್ಸುಲ್ ಹೊಂದಲು ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿತ್ತು.ಜೊತೆಗೆ, ಮಾನಸಿಕ ಆರೋಗ್ಯ ನಿರ್ವಹಣೆಗೆ ಸಂಘಟನೆಗಳಿಗೆ ಉದ್ಯೋಗಿಗಳಿರುವ ಸ್ಥಳದಲ್ಲಿ ಬೆಂಬಲಿತ ಕಾರ್ಯಕ್ರಮದ ಸಲಹೆ ನೀಡಿತ್ತು. ಸಂಘಟನೆಗಳು ಸಿಬ್ಬಂದಿ ಮತ್ತು ಎಟಿಸಿಒಗಳ ಯಾವುದೇ ಸಮಸ್ಯೆಯನ್ನು ಗುರುತಿಸಲು, ನಿಭಾಯಿಸಲು ಮತ್ತು ನಿವಾರಿಸಲು ಸಹಾಯ ಮಾಡುವ ಮತ್ತು ಬೆಂಬಲ ನೀಡಲು ಈ ಪೂರ್ವಭಾವಿ ಮತ್ತು ಶಿಕ್ಷೆಯಿಲ್ಲದ ಕಾರ್ಯಕ್ರಮಕ್ಕೆ ಪ್ರವೇಶವನ್ನು ಸುಗಮಗೊಳಿಸುವುದು ಮತ್ತು ಖಚಿತಪಡಿಸಿಕೊಳ್ಳಲು ತಿಳಿಸಿತು ಎಂದು ಮೊಹಲ್ ತಿಳಿಸಿದ್ದರು.
ಮತ್ತೊಂದು ಲಿಖಿತ ಉತ್ತರದಲ್ಲಿ, ವಿಮಾನ ದುರಂತದಲ್ಲಿ ಹಾನಿಗೊಂಡ ನಾಗರಿಕರಿಗೆ ಯಾವುದೇ ಪರಿಹಾರ ನೀಡುವಿಕೆ ಕುರಿತು ವಿಮಾನಯಾನ ಸಚಿವಾಲಯದಿಂದ ಯಾವುದೇ ನಿರ್ದಿಷ್ಟ ನಿಯಮ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ತಾಂತ್ರಿಕ ದೋಷ:
ಈ ವರ್ಷ ಜುಲೈ 21ರವರೆಗೆ ಭಾರತದ ಐದು ವಿಮಾನಯಾನ ಸಂಸ್ಥೆಗಳ 183 ವಿಮಾನಗಳಲ್ಲಿ ತಾಂತ್ರಿಕ ದೋಷ ವರದಿ ಕಂಡು ಬಂದಿದೆ ಎಂದು ಡಿಜಿಸಿಎ ತಿಳಿಸಿದೆ ಎಂದು ಕೂಡ ಸದನಕ್ಕೆ ವಿಮಾನಯಾನ ಸಚಿವರು ತಿಳಿಸಿದರು.ಇದರಲ್ಲಿ 85 ಏರ್ ಇಂಡಿಯಾ ಸಂಸ್ಥೆ ವಿಮಾನವಾದರೆ, ಇಂಡಿಗೋ ಮತ್ತು ಆಕಾಸ್ ಏರ್ ಸಂಸ್ಥೆಯ ಕ್ರಮವಾಗಿ 62 ಮತ್ತು 28 ವಿಮಾನ ಹಾಗೂ ಸ್ಪೈಸ್ ಜೆಟ್ನ 8 ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿದೆ ಎಂದು ದತ್ತಾಂಶವನ್ನು ಹಂಚಿಕೊಂಡರು.











































