ಪ್ರಾಯೋಗಿಕ ಪರೀಕ್ಷೆಯ ನಂತರ ಪರಿಸರಸ್ನೇಹಿ ಹಾಲಿನ ಪ್ಯಾಕೆಟ್ ಮಾರುಕಟ್ಟೆಗೆ: ಡಿ.ಕೆ.ಸುರೇಶ್

Picture of Savistara

Savistara

Bureau Report

ಪ್ರಾಯೋಗಿಕ ಪರೀಕ್ಷೆಯ ನಂತರ ಪರಿಸರಸ್ನೇಹಿ ಹಾಲಿನ ಪ್ಯಾಕೆಟ್‌ಗಳನ್ನು ಮಾರುಕಟ್ಟೆಗೆ ತರಲಾಗುವುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ರಾಮನಗರ: ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್​ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದ್ದಾರೆ.ಚನ್ನಪಟ್ಟಣದಲ್ಲಿಂದು ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ತೆರೆಯುವ ಬಗ್ಗೆ ಮಾತನಾಡಿದ ಅವರು, ನಾವು ಈಗಾಗಲೇ ಈ ವಿಚಾರವಾಗಿ ಅರ್ಜಿ ಸಲ್ಲಿಸಿದ್ದು, ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಇದಾದ ನಂತರ ನಮಗೂ ಮೆಟ್ರೋ ಸಂಸ್ಥೆ ಜೊತೆಗೂ ಒಪ್ಪಂದ ಆಗಬೇಕಿದೆ. ಹೊರರಾಜ್ಯದ ಸಂಸ್ಥೆಗಳು ಹೆಚ್ಚಿನ ಬಾಡಿಗೆ ನೀಡುವ ಪ್ರಸ್ತಾವನೆ ಸಲ್ಲಿಸುತ್ತಾರೆ. ಹೀಗಾಗಿ ಮೆಟ್ರೋದವರು ನಮ್ಮಿಂದಲೂ ಹೆಚ್ಚಿನ ಬಾಡಿಗೆ ನಿರೀಕ್ಷೆ ಮಾಡುತ್ತಾರೆ. ಇದು ರೈತರ ಸಂಸ್ಥೆಯಾಗಿರುವುದರಿಂದ ಕಡಿಮೆ ಬಾಡಿಗೆ ನೀಡಬೇಕೆಂದು ಉಪಮುಖ್ಯಮಂತ್ರಿಗಳು ಹಾಗೂ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು.

ಪರಿಸರಸ್ನೇಹಿ ಹಾಲಿನ ಪ್ಯಾಕೆಟ್: ಪರಿಸರಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸುವ ಕುರಿತು ಪ್ರತಿಕ್ರಿಯಿಸಿ, ಈಗ ಪ್ರಾಯೋಗಿಕವಾಗಿ ಬೆಂಗಳೂರಿನ ಒಂದು ಭಾಗವನ್ನು ಆಯ್ಕೆ ಮಾಡಲು ಸೂಚಿಸಿದ್ದೇನೆ. ಇದರ ವೆಚ್ಚ ಹೆಚ್ಚಾಗಿದ್ದು, ರಾಜ್ಯಮಟ್ಟದಲ್ಲಿ ಚರ್ಚೆ ಮಾಡಬೇಕಿದೆ. ನಮ್ಮ ಮಾರುಕಟ್ಟೆ ವ್ಯಾಪ್ತಿಯ ಜಯನಗರ, ಬಿಟಿಎಂ ಲೇಔಟ್ ಸೇರಿದಂತೆ ಯಾವ ಸ್ಥಳ ಸೂಕ್ತ ಎಂಬುದನ್ನು ಮಾರುಕಟ್ಟೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಅತೀ ಶೀಘ್ರದಲ್ಲೇ ಬೆಂಗಳೂರಿನ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡುತ್ತೇವೆ. ಸ್ವಲ್ಪ ನಷ್ಟವಾದರೂ ಪರಿಸರ ರಕ್ಷಣೆಗೆ ದೊಡ್ಡ ಹೆಜ್ಜೆ ಇಡಲಾಗುವುದು. ಪರಿಸರದ ದೃಷ್ಟಿಯಿಂದ ಇದನ್ನು ನಾವು ಮಾಡಬೇಕು. ರಾಜ್ಯದಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿರುವುದೇ ಹಾಲಿನ ಪ್ಯಾಕೆಟ್‌ಗಳಿಂದ. ನಿತ್ಯ ಕೋಟ್ಯಂತರ ಪ್ಲಾಸ್ಟಿಕ್ ಕವರ್ ತ್ಯಾಜ್ಯವಾಗಿ ಬೀಳುತ್ತಿದೆ. ಇವುಗಳನ್ನು ಕೊಳೆಯುವಂತೆ ಮಾಡುವ ವ್ಯವಸ್ಥೆ ಮಾಡುವುದು ನಮ್ಮ ಚಿಂತನೆ. ಪ್ರಾಯೋಗಿಕ ಪ್ರಯತ್ನದ ನಂತರ ಸರ್ಕಾರದ ಮುಂದೆ ಈ ಪ್ರಸ್ತಾಪವನ್ನಿಟ್ಟು ಸಾರ್ವಜನಿಕರ ವಿಶ್ವಾಸ ಗಳಿಸಿ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಹಾಲು ಒಕ್ಕೂಟದಲ್ಲಿ ಚನ್ನಪಟ್ಟಣ ಅತಿಹೆಚ್ಚು ಹಾಲು ಉತ್ಪಾದಿಸುತ್ತಿದೆ. ಇಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿದೆ. ನನ್ನನ್ನು ಬಮೂಲ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಂತರ ಎಲ್ಲಾ 14 ನಿರ್ದೇಶಕರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಒಕ್ಕೂಟದ ಬೆಳವಣಿಗೆಗೆ ಹಾಗೂ ರೈತ ಹಿತ ಕಾಯಲು ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿದ್ದಾವೆ. ಹೀಗಾಗಿ ಆಡಳಿತ ವರ್ಗ, ಹಾಲು ಮಂಡಳಿಯ ಸಲಹೆ, ಮಾರ್ಗದರ್ಶನ ಪಡೆಯಲು ಇಂದು ಭೇಟಿ ನೀಡಿದ್ದೇನೆ. ಇಲ್ಲಿ ರೈತರಿಗೆ ಅನುಕೂಲ ನೀಡಿ, ಹೆಚ್ಚು ಹಾಲು ಉತ್ಪಾದನೆ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.

ಡಿಸಿಎಂ ಹೊರಗಿಟ್ಟು ಸಿಎಂ ಶಾಸಕರ ಸಭೆ ಮಾಡುತ್ತಿದ್ದಾರೆ ಎಂಬುದಕ್ಕೆ, ಆ ರೀತಿ ಏನಿಲ್ಲ. ಶಾಸಕರ ಸಭೆ ಮಾಡಲು ಮುಖ್ಯಮಂತ್ರಿಗಳಿಗೆ ಪರಮೋಚ್ಛ ಅಧಿಕಾರವಿದೆ. ಶಾಸಕರ ಸಮಸ್ಯೆ ಆಲಿಸುವುದು ಮೊದಲಿನಿಂದಲೂ ನಡೆಸಿಕೊಂಡು ಬರಲಾಗಿದೆ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶಾಸಕರ ಅಹವಾಲು ಸ್ವೀಕರಿಸುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆ ಎಂದರು.

ಯೂರಿಯಾ ಉತ್ಪಾದನೆ, ಪೂರೈಕೆ ಕೇಂದ್ರದ ಜವಾಬ್ದಾರಿ: ರಾಜ್ಯದಲ್ಲಿ ಯೂರಿಯಾ ಕೊರತೆ ಬಗ್ಗೆ ಮಾತನಾಡಿ, ಯೂರಿಯಾ ಉತ್ಪಾದನೆ ಮಾಡುವುದು ರಾಜ್ಯ ಸರ್ಕಾರವಲ್ಲ ಎಂದು ನಿಮಗೂ ಚೆನ್ನಾಗಿ ತಿಳಿದಿದೆ. ಈ ಯೂರಿಯಾವನ್ನು ಬಿಡುಗಡೆ ಮಾಡಬೇಕಿರುವುದೂ ಕೇಂದ್ರ ಸರ್ಕಾರವೇ. ಕೇಂದ್ರ ಇದರ ಜವಾಬ್ದಾರಿ ಹೊತ್ತಿದ್ದು, ಅವರು ರಾಜ್ಯ ಸರ್ಕಾರ ಮೇಲೆ ಆರೋಪ ಹಾಕುವ ಬದಲು ತಮ್ಮ ಜವಾಬ್ದಾರಿ ತೆಗೆದುಕೊಂಡು ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸುವುದು ಕೇಂದ್ರದ ಸಚಿವರು ಹಾಗೂ ಸಂಸದರ ಕರ್ತವ್ಯ. ಕೇಂದ್ರ ಸಚಿವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದು, ಸಂಸತ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಚಿವರು ದೆಹಲಿಯಲ್ಲಿ ಸಿಗುತ್ತಾರೆ. ಹೀಗಾಗಿ ಸಂಸದರುಗಳು ಅವರ ಜೊತೆ ಸಭೆ ಮಾಡಿ ಆದಷ್ಟು ಬೇಗ ಬೇಡಿಕೆ ಇರುವ ಕಡೆಗಳಲ್ಲಿ ಇದನ್ನು ಸರಬರಾಜು ಮಾಡಬೇಕು ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಈ ವಿಚಾರವಾಗಿ ರಾಹುಲ್ ಗಾಂಧಿ ಅವರೇ ಎಲ್ಲಾ ಹೇಳಿದ್ದು, ನಾನು ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತೇನೆ. ಉಳಿದಂತೆ ನಾನು ಹೇಳುವುದೇನಿದೆ? ಎಂದರು.ಆ.4ರಂದು ನಡೆಯಲಿರುವ ಪ್ರತಿಭಟನೆ ಬಗ್ಗೆ ಕೇಳಿದಾಗ, ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಅಗತ್ಯವಾದ ವಿಚಾರಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಇಂದು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕೆಎಂಎಫ್ ಅಧ್ಯಕ್ಷ ಸ್ಥಾನ:

ಹಾಲು ಒಕ್ಕೂಟಗಳ ನಿರ್ದೇಶಕರು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ಅಧ್ಯಕ್ಷರು ಏನು ತೀರ್ಮಾನ ಮಾಡುತ್ತಾರೋ ಅದರಂತೆ ಕೆಎಂಎಫ್ ಅಧ್ಯಕ್ಷ ಸ್ಥಾನ ನಿರ್ಧಾರವಾಗಲಿದೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!