ಕನ್ನಡದಲ್ಲಿ ಬಿಡುಗಡೆಯಾಗಿ ಸದ್ಯ ಬಹುಭಾಷೆಗಳಲ್ಲೂ ಸದ್ದು ಮಾಡುತ್ತಿರುವ ಬ್ಲಾಕ್ಬಸ್ಟರ್ ‘ಸು ಫ್ರಮ್ ಸೋ’ ಸಿನಿಮಾವನ್ನು ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವ್ಗನ್ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದಾರೆ.
ಅತಿ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ಸದ್ಯ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ‘ಸು ಫ್ರಮ್ ಸೋ’ ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸಿದೆ. ರಾಜ್ ಬಿ ಶೆಟ್ಟಿ ಅತಿಥಿ ಪಾತ್ರದಲ್ಲಿ ಅಭಿನಯಿಸಿ ನಿರ್ಮಾಣ ಮಾಡಿರೋ ‘ಸು ಫ್ರಮ್ ಸೋ’ ಕನ್ನಡ ಮಾತ್ರವಲ್ಲದೇ ಮಲಯಾಳಂ, ತೆಲುಗು ಆವೃತ್ತಿಗಳಲ್ಲಿಯೂ ಬಿಡುಗಡೆ ಆಗಿ ಕಮಾಲ್ ಮಾಡುತ್ತಿದೆ. ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವ್ಗನ್ ಅವರ ಮೆಚ್ಚುಗೆಗೂ ಪಾತ್ರವಾಗಿದೆ.ಹೌದು, ಕಥಾಹಂದರ, ಕಚಗುಳಿ ಇಡುವ ಡೈಲಾಗ್ಸ್, ಮನರಂಜನೆಗೆ ಸಿನಿಪ್ರಿಯರು ಮನಸೋತಿದ್ದಾರೆ. ಈಗಾಗಲೇ ಕನ್ನಡ ಭಾಷೆ, ಇಂಗ್ಲಿಷ್ ಸಬ್ ಟೈಟಲ್ನೊಂದಿಗೆ ಹಿಂದಿ ಪ್ರದೇಶಗಳಲ್ಲೂ ಬಿಡುಗಡೆ ಆಗಿರುವ ಈ ಚಿತ್ರ ಹಿಂದಿಯಲ್ಲೂ ಡಬ್ ಆಗುವ ಸೂಚನೆ ಸಿಕ್ಕಿದೆ. ಏಕಂದ್ರೆ, ಇಡೀ ಚಿತ್ರತಂಡ ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವ್ಗನ್ ಅವರನ್ನು ಭೇಟಿ ಮಾಡಿ ಬಂದಿದೆ.
ಬಾಲಿವುಡ್ ಸಿಂಗಮ್ ಸು ಫ್ರಮ್ ಸೋ ಸಿನಿಮಾವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಜೆಪಿ ತುಮಿನಾಡ್ ಹಂಚಿಕೊಂಡಿದ್ದಾರೆ. ಅಜಯ್ ದೇವ್ಗನ್ ಜೊತೆಗಿನ ಫೋಟೋ ಹಂಚಿಕೊಂಡ ಅವರು, ”ಅವರಿಗೆ ನಮ್ಮ ‘ಸು ಫ್ರಮ್ ಸೋ’ ಚಿತ್ರ ತುಂಬಾನೇ ಇಷ್ಟವಾಗಿದೆ. ಚಿತ್ರದ ಬಗ್ಗೆ ಮಾತನಾಡಲು ನಮ್ಮನ್ನು ಆಹ್ವಾನಿಸಿದ್ದರು. ಅವರದ್ದು ನಿಜವಾಗಿಯೂ ಅದ್ಭುತ ವ್ಯಕ್ತಿತ್ವ. ದಿ ಗ್ರೇಟ್ ಅಜಯ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಗೌರವ” ಎಂದು ಬರೆದುಕೊಂಡಿದ್ದಾರೆ.ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ-ನಿರ್ಮಾಪಕ ರಾಜ್ ಬಿ ಶೆಟ್ಟಿ, ನಮ್ಮ ಸಿನಿಮಾದ ರಿಮೇಕ್ ಹಕ್ಕುಗಳನ್ನು ಹಿಂದಿಯವರು ಕೇಳಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದರು. ಇದೀಗ, ಅಜಯ್ ದೇವ್ಗನ್ ಅವರನ್ನು ಭೇಟಿಯಾಗಿರೋದನ್ನು ಗಮನಿಸಿದ್ರೆ ಬಹುಶಃ ಅಜಯ್ ದೇವ್ಗನ್ ಅವರೇ ಸು ಫ್ರಮ್ ಸೋ ಚಿತ್ರದ ರಿಮೇಕ್ ರೈಟ್ಸ್ ಪಡೆದು ಹಿಂದಿಯಲ್ಲಿ ಬಿಡುಗಡೆ ಮಾಡುತ್ತಾರಾ ಎಂಬ ಊಹಾಪೋಹಗಳೆದ್ದಿವೆ. ಏಕೆಂದರೆ, ಅಜಯ್ ದೇವ್ಗನ್ ಈಗಾಗಲೇ ಹಲವು ಸೌತ್ ಸಿನಿಮಾಗಳಾದ ಸಿಂಗಮ್, ದೃಶ್ಯಂ ಅಂತಹ ಚಿತ್ರಗಳನ್ನು ರಿಮೇಕ್ ಮಾಡಿದ್ದರು. ಈಗ ರಾಜ್ ಬಿ ಶೆಟ್ಟಿ ತಂಡ ಅಜಯ್ ದೇವಗನ್ ಅವರನ್ನು ಭೇಟಿ ಮಾಡಿರೋದು ಡಬ್ಬಿಂಗ್ ಸುತ್ತಲಿನ ಅಂತೆಕಂತೆಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಆಪ್ತರು ಹೇಳಿದ್ದಿಷ್ಟು: ರಾಜ್ ಬಿ ಶೆಟ್ಟಿ ಆಪ್ತರು ಹೇಳುವಂತೆ, ಈ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ರೀಚ್ ಆಗುತ್ತದೆ ಅಂದುಕೊಂಡಿರಲಿಲ್ಲ. ನಮ್ಮ ಸಿನಿಮಾ ಈಗಾಗಲೇ 70 ಕೋಟಿ ಕಲೆಕ್ಷನ್ ಮಾಡಿ 100 ಕೋಟಿಯ ಕ್ಲಬ್ ಸೇರುವ ಹಂತದಲ್ಲಿದೆ. ಯಾವಾಗ ಕನ್ನಡದಲ್ಲಿ ಈ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿಯೋ ಆವಾಗ್ಲೇ ನಾವು ಕಾಂತಾರ ಚಿತ್ರದ ಸ್ಟೈಲಲ್ಲೇ ಬೇರೆ ಭಾಷೆಗಳಿಗೆ ಡಬ್ಬಿಂಗ್ ಮಾಡೋಣ ಅಂದುಕೊಂಡ್ವಿ. ಅದೇ ರೀತಿ ಈಗ ಸು ಫ್ರಮ್ ಸೋ ಚಿತ್ರ ಬಹುಭಾಷೆಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸ್ವೀಕರಿಸುತ್ತಿದೆ. ಇದು ಈ ವರ್ಷದ ಬಂಪರ್ ಹಿಟ್ ಎಂದು ತಿಳಿಸಿದರು.
ರಾಜ್ ಬಿ ಶೆಟ್ಟಿ ತಮ್ಮ ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಜೆಪಿ ತುಮಿನಾಡ್ ನಿರ್ದೇಶಿಸೋ ಜೊತೆಗೆ ಅಭಿನಯಿಸಿದ್ದಾರೆ. ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ನಿರ್ಮಾಣ ತಂಡದಲ್ಲಿದ್ದಾರೆ. ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ರಾಮ್ದಾಸ್ ತಾರಾಗಣದಲ್ಲಿದ್ದಾರೆ. ಜುಲೈ 25, 2025ರಂದು ಕನ್ನಡದಲ್ಲಿ ಚಿತ್ರಮಂದಿರ ಪ್ರವೇಶಿಸಿದ ‘ಸು ಫ್ರಮ್ ಸೋ’ ಆಗಸ್ಟ್ 1ರಂದು ಮಲಯಾಳಂನಲ್ಲಿ, ಆಗಸ್ಟ್ 8ರಂದು ತೆಲುಗಿನಲ್ಲಿಯೂ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.














































