ಮಂಗಳೂರು/ಉಡುಪಿ: ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಮುಂದುವರಿದಿದೆ. ಮುಂದಿನ ಮೂರು- ನಾಲ್ಕು ದಿನಗಳ ಕಾಲ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಂಗಳೂರು ಭಾಗದಲ್ಲಿ ಬೆಳಗ್ಗೆಯಿಂದಲೇ ಗಾಳಿಯೊಂದಿಗೆ ಮಳೆ ಸುರಿಯಲಾರಂಭಿಸಿದೆ.ಕೆಲವು ಭಾಗದಲ್ಲಿ ಉತ್ತಮ ಮಳೆಯಾದರೆ ಇನ್ನು ಕೆಲ ಭಾಗದಲ್ಲಿ ತುಂತುರು ಮಳೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ಕೆಲವೊಂದು ಕಡೆಯಲ್ಲಿ ಗಾಳಿಯ ಅಬ್ಬರಕ್ಕೆ ಮರಗಳು ಉರುಳಿ ಬಿದ್ದು ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಕಾಣಿಸಿಕೊಂಡಿತ್ತು. ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಉತ್ತಮವಾಗಿ ಮಳೆಯಾಗಿದ್ದು, ಎಲ್ಲ ತಾಲೂಕುಗಳಲ್ಲೂ ಶುಕ್ರವಾರ ಮಳೆಯಾಯಿತು. ಒಮ್ಮೆ ಮೋಡ, ಬಿಸಿಲು ಹಾಗೂ ಆಗಾಗ ಉತ್ತಮವಾಗಿ ಮಳೆಯಾಯಿತು.
ನಾಲ್ಕು ದಿನ ಭಾರಿ ವರ್ಷಧಾರೆ ಸಾಧ್ಯತೆ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಆ.16ರಿಂದ ಆ.19ರ ವರೆಗೆ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಅಪಾಯದ ಸಾಧ್ಯತೆ ಇರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆಯೂ ಸಲಹೆ ನೀಡಲಾಗಿದೆ.














































