ಬೆಂಗಳೂರು: ಧರ್ಮಸ್ಥಳ ವಿಷಯದಲ್ಲಿ ಬಿಜೆಪಿ ರಾಜಕೀಯಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿಂದುತ್ವವನ್ನು ತಮ್ಮ ಮನೆಯ ಆಸ್ತಿ ಎಂದುಕೊಂಡಿದ್ದಾರೆ. ಅವರಿಗೆ ಧರ್ಮಸ್ಥಳದ ಬಗ್ಗೆ ನಿಜವಾದ ಪ್ರೀತಿ ಇಲ್ಲ, ರಾಜಕೀಯಕ್ಕಾಗಿ ಭೇಟಿ ನೀಡಿದ್ದಾರೆ ಎಂದಿದ್ದಾರೆ.ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ಆರಂಭದಲ್ಲಿ ಏನೂ ಮಾತನಾಡಿರಲಿಲ್ಲ. ಅನಾಮಿಕ ದೂರು ಕೊಟ್ಟಾಗಾಗಲೀ, ಸರಕಾರ ಎಸ್‌ಐಟಿ ರಚಿಸಿದಾಗಾಗಲೀ ಮಾತನಾಡದ ಬಿಜೆಪಿಯವರು ಈಗ ಧರ್ಮಸ್ಥಳಕ್ಕೆ ಹೋಗಿದ್ದಾರೆ. ರಾಜಕೀಯ ಮಾಡುತ್ತಿದ್ದಾರೆ. ಆಗ ಮುಸುಕುಧಾರಿಯ ದೂರಿಗೆ ಯಾಕೆ ಆಕ್ಷೇಪಿಸಲಿಲ್ಲ ಎಂದು ಮರುಪ್ರಶ್ನೆ ಹಾಕಿದರು.
ಹಿಂದುತ್ವ ಯಾರೊಬ್ಬರ ಆಸ್ತಿಯೂ ಅಲ್ಲ. ಅವರವರ ಭಕ್ತಿ, ನಂಬಿಕೆ ಭಾವನೆಗೆ ಸಂಬಂಧಿಸಿದ್ದು. ನಮಗೆ ರಾಜಕೀಯಕ್ಕೆ ಧರ್ಮಸ್ಥಳ ಬೇಡ. ಧರ್ಮಸ್ಥಳದ ಗೌರವ ಕಾಪಾಡುವುದು ನಮ್ಮ ಚಿಂತನೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲಿ ಎನ್ನುವವರು ನಾವು. ನ್ಯಾಯಾಲಯದ ಮುಂದೆ ದೂರು ನೀಡಿದ ಬಳಿಕವೂ ಸರಕಾರ ತನಿಖೆ ಮಾಡದಿದ್ದರೆ ಬಿಜೆಪಿಯವರು ಏನು ಹೇಳುತ್ತಿದ್ದರು? ಅವರೇ ಟೀಕಿಸುತ್ತಿರಲಿಲ್ಲವೇ? ಈಗ ಈ ರೀತಿ ರಾಜಕಾರಣ ಮಾಡುತ್ತಿದ್ದು, ನಾವು ಇದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ನಾವೇಕೆ ಹಸ್ತಕ್ಷೇಪ ಮಾಡಬೇಕು?:
ಮುಸುಕುಧಾರಿಗೆ ಮಂಪರು ಪರೀಕ್ಷೆ ಮಾಡಬೇಕೆಂಬ ವಿಷಯದಲ್ಲಿ ಬಿಜೆಪಿಯವರು ಏನಾದರೂ ಆಗ್ರಹ ಮಾಡಲಿ, ಮಂಪರು ಪರೀಕ್ಷೆ ಅಥವಾ ಬೇರೆ ಯಾವುದೇ ತನಿಖೆಗೆ ಬೇಕಾದರೂ ಆಗ್ರಹಿಸಲಿ.ಅದು ತಪ್ಪಲ್ಲ. ಎಸ್‌ಐಟಿ ತನಿಖೆ ಸ್ವಾಗತಿಸಿದವರು ಇಂದು ಈ ರೀತಿ ಮಾತನಾಡುತ್ತಿದ್ದಾರೆ. ಎಷ್ಟು ಗುಂಡಿ ತೆಗೆಯಬೇಕು, ಬೇಡ ಎಂದು ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ. ಅವರ ತನಿಖೆಯಲ್ಲಿ ನಾವೇಕೆ ಹಸ್ತಕ್ಷೇಪ ಮಾಡಬೇಕು ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕರು ಸದನದಲ್ಲಿ ಮಾತನಾಡಿರಬಹುದು. ಅದಕ್ಕೂ ಮುನ್ನ ಆಭಾಗದ ನಮ್ಮ ಶಾಸಕರು ಶಾಸಕಾಂಗ ಸಭೆಯಲ್ಲೇ ಧರ್ಮಸ್ಥಳದ ಪರ ಧ್ವನಿ ಎತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಕೂಡ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಕಾನೂನು ಪ್ರಕಾರ ತನಿಖೆ ಆಗುತ್ತದೆ ಎಂದರು.ಆ ಭಾಗದ ಕಾಂಗ್ರೆಸ್ ನಾಯಕರು ಆರಂಭದಲ್ಲೇ ಬಂದು ನಮ್ಮನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಧಿಕಾರದಲ್ಲಿರುವ ಸರಕಾರ ಈ ವಿಚಾರವನ್ನು ಚರ್ಚಿಸಬಾರದು ಎಂದು ಮಾತನಾಡಿರಲಿಲ್ಲ. ನಮ್ಮ ಮುಖ್ಯಮಂತ್ರಿಗಳು ಕೂಡ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಕಾನೂನು ಪ್ರಕಾರ ತನಿಖೆ ಆಗುತ್ತದೆ ಎಂದು ಪುನರುಚ್ಚರಿಸಿದರು.
ತಪ್ಪು ಸಂದೇಶ ನೀಡಿ, ಅಪಪ್ರಚಾರ ಮಾಡಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಕುಮ್ಮಕ್ಕು ನೀಡುತ್ತಿರುವವನು ಮುಖ್ಯಮಂತ್ರಿಗಳನ್ನೇ ಕೊಲೆಗಾರ ಎಂದಿದ್ದಾನೆ. ಆತನ ಬಗ್ಗೆ ನೀವು ವರದಿ ಮಾಡಿದ್ದೀರಾ? ಇದೆಲ್ಲದರ ಮಾಹಿತಿ ನಮ್ಮ ಬಳಿ ಇದೆ. ನನಗೆ ವೈಯಕ್ತಿಕವಾಗಿ ಇರುವ ಅನುಭವದ ವಿಚಾರವನ್ನು ನಾನು ಹೇಳಿದ್ದೇನೆ.- ಡಿ.ಕೆ. ಶಿವಕುಮಾರ್,ಉಪಮುಖ್ಯಮಂತ್ರಿ














































