ಪಲ್ಟು… ವಿಪಕ್ಷಗಳ ಟೀಕೆ… ಬಿಹಾರ ಚುನಾವಣೆಗೂ ಮುನ್ನ ಚರ್ಚೆಗೆ ಗ್ರಾಸವಾದ ನಡೆ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ರಾಜ್ಯ ಮದರಸಾ ಮಂಡಳಿಯ ಕಾರ್ಯಕ್ರಮವೊಂದರಲ್ಲಿ ತಮಗೆ ನೀಡಲಾದ ಮುಸ್ಲಿಂ ಟೋಪಿ ಧರಿಸಲು ನಿರಾಕರಿಸಿರುವುದು ವಿಧಾನಸಭಾ ಚುನಾವಣೆಗೂ ಮುನ್ನ ಚರ್ಚೆಗೆ ಗ್ರಾಸವಾಗಿದೆ.ಪಾಟ್ನಾದಲ್ಲಿ ನಡೆದ ರಾಜ್ಯ ಮದರಸಾ ಶಿಕ್ಷಣ ಮಂಡಳಿಯ ಶತಮಾನೋತ್ಸವ ಸಮಾರಂಭದಲ್ಲಿ ನಿತೀಶ್ ಭಾಗವಹಿಸಿದ್ದಾಗ ಈ ಘಟನೆ ಸಂಭವಿಸಿದೆ. ಪ್ರತಿಪಕ್ಷಗಳು ನಿತೀಶ್ ಕುಮಾರ್ ಅವರ “ಜಾತ್ಯತೀತ ರುಜುವಾತುಗಳ” ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ, ನಿತೀಶ್ ಈ ಹಿಂದೆ ಇಫ್ತಾರ್ ಕೂಟಗಳು ಮತ್ತು ಇಸ್ಲಾಮಿಕ್ ಕಾರ್ಯಕ್ರಮಗಳಲ್ಲಿ ಹಲವು ಬಾರಿ ಟೋಪಿ ಧರಿಸಿ ಕಾಣಿಸಿಕೊಂಡಿದ್ದರು.ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಂಡಳಿಯ ಸದಸ್ಯರೊಬ್ಬರು ಟೋಪಿ ಹಾಕಲು ಪ್ರಯತ್ನಿಸಿದಾಗ ನಿತೀಶ್ ನಿರಾಕರಿಸಿ ಅದನ್ನು ಕೈಯಲ್ಲಿ ತೆಗೆದುಕೊಂಡಿದ್ದಾರೆ. ಬಳಿಕ ಬಿಹಾರದ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವ ಜಮಾ ಖಾನ್ ಮತ್ತೆ ನಿತೀಶ್ ಅವರಿಗೆ ಟೋಪಿ ಹಾಕಿಕೊಳ್ಳುವಂತೆ ಮನವೊಲಿಸುತ್ತಿರುವುದು ಕಂಡುಬಂದಿದೆ. ಆದರೂ, ನಿತೀಶ್ ನಿರಾಕರಿಸಿದ್ದಾರೆ.ಕಳೆದ ವರ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ ಬಳಿಕ ನಿತೀಶ್ ಈ ವರ್ಷದ ಮಾರ್ಚ್‌ನಲ್ಲಿ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿಯೂ ಟೋಪಿ ಧರಿಸಿರಲಿಲ್ಲ.ಬಿಹಾರದಲ್ಲಿ ಜನಸಂಖ್ಯೆಯ ಸುಮಾರು ಶೇ. 18 ರಷ್ಟು ಮುಸ್ಲಿಮರು ಇದ್ದು ಹಲವಾರು ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.














































