ಬಾಕಿ ಉಳಿಸಿಕೊಂಡ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಸಲು ಶೇ.50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು.
ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಶೇ.50ರಷ್ಟು ರಿಯಾಯಿತಿ ದಂಡ ಪಾವತಿಸಲು ನಿಗದಿಪಡಿಸಲಾಗಿದ್ದ ಅವಧಿಯ ಮೊದಲನೆಯ ದಿನವಾದ ಶನಿವಾರ ಎಲ್ಲ ವಿಧಾನಗಳ ಮೂಲಕ 1,48,747 ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು 4,18,20,500 ರೂ. ದಂಡ ಪಾವತಿ ಆಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡ ಪಾವತಿಸಲು ರಿಯಾಯಿತಿ ನೀಡಿ ಸರ್ಕಾರ ಆದೇಶಿಸಿದೆ. ಈ ಆದೇಶ ಆ.23ರಿಂದ ಜಾರಿಗೆ ಬಂದಿದೆ. ಆ.23ರಿಂದ ಸೆ.12ರವರೆಗೆ ರಿಯಾಯಿತಿ ಜಾರಿಯಲ್ಲಿ ಇರುತ್ತದೆ ಆದರೆ, ಈ ರಿಯಾಯಿತಿ 2023ರ ಫೆಬ್ರವರಿ 11ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರವೇ ಅನ್ವಯ.
ನಿಯಮ ಉಲ್ಲಂಘನೆ ತಿಳಿಯುವುದು, ಪಾವತಿ ಹೇಗೆ?:
- ಬಿಟಿಪಿ ಅಸ್ತ್ರಂ, ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಆ್ಯಪ್, ಬೆಂಗಳೂರು ಸಂಚಾರ ಪೊಲೀಸ್ ಅಥವಾ ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಾಹನದ ನೋಂದಣಿ ಸಂಖ್ಯೆೆ ನಮೂದಿಸಿ ಸಂಚಾರ ಉಲ್ಲಂಘನೆ ಪ್ರಕರಣ ತಿಳಿದುಕೊಳ್ಳಬಹುದು.
- ನಂತರ ದಂಡದ ಮೊತ್ತವನ್ನು ಪಾವತಿಸಬಹುದು. ಹತ್ತಿರದ ಸಂಚಾರ ಪೊಲೀಸ್ ಠಾಣೆಗಳು, ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆೆ ತೆರಳಿಯೂ ವಾಹನದ ನೋಂದಣಿ ಸಂಖ್ಯೆೆಯ ವಿವರ ನೀಡಿ ದಂಡ ಪಾವತಿಗೆ ಅವಕಾಶವಿದೆ.
- ಒಂದು ವೇಳೆ ತಪ್ಪಾಗಿ ದಂಡ ವಿಧಿಸಲಾಗಿದ್ದರೆ, ಮರುಪರಿಶೀಲನೆಯ ದೂರನ್ನು ಆನ್‌ಲೈನ್ ಮೂಲಕ ದಾಖಲಿಸಬಹುದು. ಅಲ್ಲದೆ, ಸಂಚಾರ ನಿರ್ವಹಣಾ ಕೇಂದ್ರಕ್ಕೆೆ ತೆರಳಿಯೂ ದೂರು ನೀಡಿ ಲೋಪ ಸರಿಪಡಿಸಿಕೊಳ್ಳಬಹುದು.
ವಾಹನದ ಮಾಲೀಕರಿಗೆ ಮತ್ತೊಂದು ಅವಕಾಶ:
ಕಳೆದ ಎರಡು ವರ್ಷಗಳ ಹಿಂದೆ 2023ರಲ್ಲಿ ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಬಾಕಿ ಉಳಿಸಿಕೊಂಡ ದಂಡ ಪಾವತಿಸಲು ಶೇ.50ರಷ್ಟು ರಿಯಾಯಿತಿ ಘೋಷಣೆ ಮಾಡಿತ್ತು. ಆಗ ಅಂದಾಜು 250 ಕೋಟಿ ರೂ.ಗೂ ಹೆಚ್ಚಿನ ಪ್ರಮಾಣದ ದಂಡವನ್ನು ವಸೂಲಿ ಮಾಡಲಾಗಿತ್ತು. 2023ರ ಫೆಬ್ರವರಿ 23ಕ್ಕಿಂತ ಮುಂಚಿನ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ವಾಹನಗಳ ಮಾಲೀಕರಿಗೆ ಮತ್ತೊಂದು ಅವಕಾಶವೆನ್ನುವಂತೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ.
ಎಲ್ಲ ವಾಹನ ಮಾಲೀಕರು ಮತ್ತು ಚಾಲಕರು ಈ ಸೀಮಿತ ಅವಧಿಯ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಹಾಗೂ ತಮ್ಮ ವಾಹನಗಳ ಮೇಲಿರುವ ಸಂಚಾರ ಉಲ್ಲಂಘನೆಗಳ ಬಾಕಿ ಇರುವ ದಂಡಗಳನ್ನು ಪಾವತಿಸಿ, ಮುಂದಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಿಎಂ ಕೋರಿದ್ದಾರೆ.











































