ಲಿವರ್‌ಪೂಲ್: ಭಾರತದ ಬಾಕ್ಸರ್‌ಗಳಾದ ಮೀನಾಕ್ಷಿ ಹೂಡಾ ಮತ್ತು ಜಾಸ್ಮಿನ್ ಲಂಬೋರಿಯಾ ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೀನಾಕ್ಷಿ ಅವರು ಮಹಿಳೆಯರ 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಕಜಕಿಸ್ತಾನದ ನಜಿಮ್ ಕೈಜೈಬೆ ಅವರನ್ನು 4-1ರಿಂದ ಮಣಿಸಿದ್ದಾರೆ. ಮೀನಾಕ್ಷಿ ಅವರು ಸೆಮಿಫೈನಲ್‌ನಲ್ಲಿ 5-0ಯಿಂದ ಎರಡು ಬಾರಿಯ ಏಷ್ಯನ್ ಕಂಚಿನ ಪದಕ ವಿಜೇತೆ ಲೂತ್ತೈಖನಿ ಅಲ್ತಾಂತ್ ಸೆಟ್ಟೆಗ್ (ಮಂಗೋಲಿಯಾ) ಅವರನ್ನು ಮಣಿಸಿದ್ದರು.57 ಕೆಜಿ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಜಾಸ್ಮಿನ್ ಲಂಬೋರಿಯಾ ಅವರು 4-1ರಿಂದ ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪೋಲೆಂಡ್‌ನ ಜೂಲಿಯಾ ಸ್ಟೆರೆಮೆಟಾ ಅವರನ್ನು ಸೋಲಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಜಾಸ್ಮಿನ್ ಅವರು 5-0ರಿಂದ ವೆನೆಜುವೆಲಾದ ಒಮೈಲಿನ್ ಅಲ್ಕಾಲಾ ಅವರನ್ನು ಮಣಿಸಿ, ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ್ದರು.ನೂಪುರ್ ಶೆರಾನ್ ಮತ್ತು ಪೂಜಾ ರಾಣಿ ಅವರು 80ಕ್ಕೂ ಹೆಚ್ಚು ಕೆ.ಜಿ. ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತದ ಮಹಿಳೆಯರು ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರೆ, ಪುರುಷರು 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬರಿಗೈಲಿ ವಾಪಸಾಗಿದ್ದಾರೆ.










































