ನಾಳೆ ಉಡುಪಿಗೆ ಪ್ರಧಾನಿ ಮೋದಿ; 3 ಸಾವಿರಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ

Picture of Savistara

Savistara

Bureau Report

ಲಕ್ಷ ಕಂಠ ಗೀತೆ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನಾಳೆ ಉಡುಪಿಗೆ ಆಗಮಿಸಲಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಉಡುಪಿ:ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ನ.28) ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮಠಕ್ಕೆ ಆಗಮಿಸಲಿದ್ದು, ಮೊದಲು ಕನಕದಾಸರಿಗೆ ಪುಷ್ಪಾರ್ಚನೆ ಮಾಡುವರು. ಬಳಿಕ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸಲಿದ್ದಾರೆ.ಪ್ರಧಾನಿಯನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಕೃಷ್ಣಮಠ ಸಕಲ ರೀತಿಯಲ್ಲೂ ಸಜ್ಜಾಗಿದೆ. ಪ್ರಧಾನಿ ರೋಡ್ ಶೋ ಮೂಲಕ ಆದಿ ಉಡುಪಿಯಿಂದ ಕೃಷ್ಣಮಠಕ್ಕೆ ಬರಲಿದ್ದು, ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ದರ್ಶನ ಪಡೆಯಲಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಪರ್ಯಾಯ ಶ್ರೀಗಳು, ”ಸರ್ವಜ್ಞ ಪೀಠ, ಗೋಶಾಲೆ ದರ್ಶನ ಮಾಡಿದ ಬಳಿಕ ಅವರು ಗೀತಾಮಂದಿರಕ್ಕೆ ಭೇಟಿ ನೀಡುವರು. ಅಲ್ಲಿ ಲಘು ಉಪಹಾರ ಸೇವಿಸುವರು. ನಂತರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಪಠಿಸಲಿದ್ದಾರೆ” ಎಂದು ತಿಳಿಸಿದರು.ಬಿಗಿ ಪೊಲೀಸ್ ಭದ್ರತೆ:ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಉಡುಪಿಯಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸುಮಾರು 3000ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 10 ಮಂದಿ ಪೊಲೀಸ್‌ ಆಯುಕ್ತರು ಸೇರಿದಂತೆ 8ಕ್ಕೂ ಹೆಚ್ಚು ಜಿಲ್ಲೆಗಳಿಂದ ಪೊಲೀಸ್‌ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಭದ್ರತಾ ವ್ಯವಸ್ಥೆಗೆ ಎಸ್‌ಪಿಜಿ ತಂಡ ನೇತೃತ್ವ ವಹಿಸಿದ್ದು, ಈಗಾಗಲೇ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದೆ. ಸ್ಥಳೀಯ ಪೊಲೀಸ್‌ ಸಿಬ್ಬಂದಿಯೂ ಅವರೊಂದಿಗೆ ಸಮನ್ವಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು ಬಂದೋಬಸ್ತ್‌ ವ್ಯವಸ್ಥೆ ಎಡಿಜಿಪಿ ಜಿತೇಂದ್ರ ಕುಮಾರ್‌ ಅವರ ಮೇಲ್ವಿಚಾರಣೆಯಲ್ಲಿ, ಐಜಿ ಸಂದೀಪ್‌ ಪಟೀಲ್‌ ಮತ್ತು ಐಜಿ ಚಂದ್ರಗುಪ್ತ ನೇತೃತ್ವದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ಹೇಳಿದರು.ಉಡುಪಿ ನಗರವು ಕೇಸರಿ ಫ್ಲೆಕ್ಸ್ ಮತ್ತು ಬಂಟಿಂಗ್ಸ್​ಗಳಿಂದ ರಾರಾಜಿಸುತ್ತಿದೆ. ಮೋದಿ ಅವರನ್ನು ಕಾಣಲು ಜನರು ಕಾತರರಾಗಿದ್ದಾರೆ. ನಗರದೆಲ್ಲೆಡೆ ಇಂದಿನಿಂದಲೇ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗುತ್ತಿದ್ದು, ವಾಹನ ಸವಾರರು ಅಲ್ಲಲ್ಲಿ ಪರದಾಡುವಂತಾಗಿದೆ.

[t4b-ticker]
error: Content is protected !!