ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಗೆ ಆಗಮಿಸಿದ್ದ ಸಂದರ್ಭ ಸಿದ್ಧಪಡಿಸಿದ್ದ ಹೆಚ್ಚುವರಿ ವ್ಯವಸ್ಥೆಗಳನ್ನು ಮರಳಿ ಸಹಜ ಸ್ಥಿತಿಗೆ ತರುವ ಕಾರ್ಯ ನಗರದಾದ್ಯಂತ ವೇಗವಾಗಿ ಸಾಗುತ್ತಿದೆ. ಈ ಮಧ್ಯೆ ಮೋದಿಯ ಭಾಷಣ, ರೋಡ್‌ಶೋದ್ದೆ ಚರ್ಚೆ ಎಲ್ಲೆಡೆಯೂ ನಡೆಯುತ್ತಿದೆ.
ಧಾರ್ಮಿಕ ಕ್ಷೇತ್ರಕ್ಕೆ ಬಂದಾಗ ಹೇಗೆ ಭಾಷಣ ಮಾಡಬೇಕು. ಇಲ್ಲಿನ ವಿಶೇಷತೆ, ಪರಂಪರೆ, ಕ್ಷೇತ್ರದ ಮಹಿಮೆ ಹೀಗೆ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ರಾಜನೀತಿ, ರಾಜತಾಂತ್ರಿಕತೆ, ಭಗವದ್ಗೀತೆ, ಶ್ರೀ ಕೃಷ್ಣಮಠ, ಅಷ್ಟಮಠ, ಶ್ರೀ ಮಧ್ವಾಚಾರ್ಯರು ಹೀಗೆ ಪ್ರಧಾನಿ ಮೋದಿಯವರು ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರತಿ ವಿಷಯಗಳ ಬಗ್ಗೆಯೂ ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತಲೇ ಇವೆ. ರಿಕ್ಷಾ, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಮೋದಿಯವರ ಭಾಷಣದ ವಿಷಯವೇ ಹೆಚ್ಚು ಗುಣುಗುಡುತ್ತಿದೆ. ರೋಡ್ ಶೋ ದಲ್ಲಿ ಸೇರಿದ್ದ ಜನ, ಮೋದಿಯವರನ್ನು ಹತ್ತಿರದಿಂದ ನೋಡಿದ್ದು, ಮೊಬೈಲ್‌ನಲ್ಲಿ ಅವರನ್ನು ಸೆರೆಹಿಡಿದದ್ದು ಇತ್ಯಾದಿಗಳದ್ದೇ ಚರ್ಚೆ ನಡೆಯುತ್ತಿದೆ.
ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಶಾಲಾ ಪ್ರವಾಸದ ಜತೆಗೆ ಅಯ್ಯಪ್ಪಸ್ವಾಮಿ ವ್ರತಧಾರಿಗಳು ಈ ಸಮಯದಲ್ಲಿ ಧಾರ್ಮಿಕ ಕ್ಷೇತ್ರಗಳಿಗೂ ಹೆಚ್ಚು ಪ್ರವಾಸ ಬೆಳೆಸುತ್ತಾರೆ. ಅಲ್ಲದೆ, ಮಕ್ಕಳಿಗೆ ಪರೀಕ್ಷೆಗಳು ಈ ಅವಧಿಯಲ್ಲಿ ಇಲ್ಲದೇ ಇರುವುದರಿಂದ ಕೌಟುಂಬಿಕ ಪ್ರವಾಸವೂ ಅನೇಕರು ಜೋಡಿಸಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಶ್ರೀ ಕೃಷ್ಣಮಠದಲ್ಲಿ ಭಕ್ತರ ಸಂಖ್ಯೆಯೂ ಅಧಿಕವಾಗಿತ್ತು.ಲಕ್ಷಕಂಠ ಗೀತಾ ಪಾರಾಯಣಕ್ಕೆ ಮಾಡಿದ್ದ ವ್ಯವಸ್ಥೆಯ ಹಲವು ಭಾಗಗಳನ್ನು ಇನ್ನೂ ತೆರವು ಮಾಡದ ಹಿನ್ನೆಲೆಯಲ್ಲಿ ಭಕ್ತರು ಅವುಗಳ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ, ರಥಬೀದಿ, ಕನಕನ ಗುಡಿ, ಕನಕನ ಕಿಂಡಿ, ಕೃಷ್ಣಮಠದ ಮುಖ್ಯದ್ವಾರ, ರಾಜಾಂಗಣ, ಗೀತಾಮಂದಿರ ಪರಿಸರದಲ್ಲಿ ವಿಶೇಷ ಅಲಂಕಾರ, ವಿದ್ಯುದ್ದೀಪಾಲಂಕಾರ ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಇನ್ನು ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆ ಮತ್ತು ಸಭಾಂಗಣದ ಜರ್ಮನ್ ಟೆಂಟ್ ಇಳಿಸುವ ಕಾರ್ಯ ಶನಿವಾರ ಬೆಳಗ್ಗನಿಂದಲೇ ನಡೆಯುತ್ತಿದೆ. ಅಲ್ಲದೆ ಸಭಾಂಗಣದ ಒಳಭಾಗದಲ್ಲಿ ಪಾರಾಯಣಕ್ಕೆ ಕುಳಿತುಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸುಮಾರು 150ಕ್ಕೂ ಅಧಿಕ ಸಿಬಂದಿ ವರ್ಗ ಈ ಕಾರ್ಯ ಮಾಡುತ್ತಿದ್ದಾರೆ.
ಬ್ಯಾರಿಕೇಡ್ ತೆರವು
ಪ್ರಧಾನಿಯವರ ರೋಡ್ ಶೋ ಹಿನ್ನೆಲೆಯಲ್ಲಿ ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದಿಂದ ಕಲ್ಸಂಕದವರೆಗೂ ವಿಶೇಷ ರೀತಿಯಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಅದರ ಜತೆಗೆ ಕಲ್ಸಂಕದಿಂದ ವಾಹನ ನಿಲುಗಡೆ ಪ್ರದೇಶ, ಕಾರ್ಯ ಕ್ರಮ ನಡೆದ ಸ್ಥಳ ಇತ್ಯಾದಿಗಳಲ್ಲೂ ಬ್ಯಾರಿಕೇಡ್ ಅಳವಡಿಸಲಾಗಿದ್ದು ಅದನ್ನು ತೆರವುಗೊಳಿಸುವ ಪ್ರಕ್ರಿಯೆ ಶನಿವಾರ ವೇಗವಾಗಿ ಸಾಗಿತು.













































