ಅಚ್ಚರಿಯಾಗಿ ಅಂತಿಮ ಹಂತದಲ್ಲಿ ಸೇರ್ಪಡೆಯಾದ ಮಹಿಳಾ ನಾಯಕಿಯ ಹೆಸರು?

Picture of Savistara

Savistara

Bureau Report

ಹೊಸದಿಲ್ಲಿ : ಬಿಹಾರದ ವಿಧಾನಸಭಾ ಚುನಾವಣೆಯ ನಂತರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತಿದೆ. ಬಿಹಾರದಲ್ಲಿ ಅಭೂತಪೂರ್ವ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ, ವರ್ಷಾಂತ್ಯದೊಳಗೆ ಹೊಸ ಹೆಸರನ್ನು ಪ್ರಕಟಿಸುವ ಸಾಧ್ಯತೆಯಿದೆ.

ಈಗಾಗಲೇ, ಆರು ಹೆಸರುಗಳು ಮುಂದಿನ ರಾಷ್ಟ್ರಾಧ್ಯಕ್ಷರ ರೇಸ್ ನಲ್ಲಿ ಮುನ್ನಲೆಯಲ್ಲಿ ಕೇಳಿ ಬರುತ್ತಿತ್ತು. ಈಗ, ಅದಕ್ಕೆ ಮಹಿಳಾ ನಾಯಕಿಯರೊಬ್ಬರ ಅಚ್ಚರಿ ರೀತಿಯಲ್ಲಿ ಕೇಳಿ ಬರುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅನುಮತಿಯನ್ನು ಪಡೆದು, ಹೊಸ ವರ್ಷಕ್ಕೆ, ಹೊಸ ರಾಷ್ಟ್ರಾಧ್ಯಕ್ಷರು ಅಧಿಕಾರ ಸ್ವೀಕರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರಾಧ್ಯಕ್ಷರ ಹೆಸರು ಘೋಷಣೆಯ ಜೊತೆಗೆ, ಬಿಜೆಪಿಯ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿರುವ ಉತ್ತರ ಪ್ರದೇಶ ಮತ್ತು ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರ ಹೆಸರೂ ಪ್ರಕಟವಾಗುವ ಸಾಧ್ಯತೆಯಿದೆ. ಆ ಮೂಲಕ, ದೇಶಾದ್ಯಂತ ಹಲವು ತಿಂಗಳಿನಿಂದ ಪೆಂಡಿಂಗ್ ನಲ್ಲಿರುವ ಈ ಪ್ರಕ್ರಿಯೆಗೆ ಫುಲ್ ಸ್ಟಾಪ್ ಹಾಕಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿರುವುದು, ಬಿಜೆಪಿ ಕಾರ್ಯಕರ್ತರ ವಲಯದಲ್ಲೂ ಅಸಮಾಧಾನಕ್ಕೆ ಕಾರಣವಾಗಿತ್ತು.

ಹಲವು ಬಾರಿ ವಿಸ್ತರಣೆಗೊಂಡ ಜೆಪಿ ನಡ್ಡಾ ಅವರ ಅವಧಿ

ಈಗಿನ ರಾಷ್ಟ್ರಾಧ್ಯಕ್ಷರಾಗಿರುವ ಜೆಪಿ ನಡ್ಡಾ ಅವರು ಕೇಂದ್ರ ಆರೋಗ್ಯ ಇಲಾಖೆಯ ಸಚಿವರೂ ಆಗಿದ್ದಾರೆ. ಹಲವು ಬಾರಿ ಇವರ ಅವಧಿ ಮುಂದುವರಿಯುತ್ತಲೇ ಬರುತ್ತಿದ್ದಾರೆ. ಹಿಮಾಚಲ ಪ್ರದೇಶ ಮೂಲದ ನಡ್ಡಾ, ಅಲ್ಲಿನ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಉತ್ಸುಕರಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಲೋಕಸಭಾ ಮತ್ತು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಅವರ ಅವಧಿಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಆದರೆ, ಸದ್ಯದ ಬೆಳವಣಿಗೆಯ ಪ್ರಕಾರ, ಈ ವರ್ಷಾಂತ್ಯಕ್ಕೆ ಹೊಸ ಹೆಸರು ಘೋಷಣೆಯಾಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

ಅಜ್ಞಾತವಾಸ ರಾಜಕೀಯದಲ್ಲಿ ಶಾಸ್ವತವಲ್ಲ ಎಂದ ವಸುಂಧರಾ ರಾಜೆ

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಗ್ವಾಲಿಯರ್ ನ ಮರಾಠ ಸಿಂಧಿಯಾ ರಾಜಮನೆತನದ ವಸುಂಧರಾ, ಹೆಸರು ಕೇಳಿ ಬರಲು ಕಾರಣ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರನ್ನು ಇವರು ಭೇಟಿಯಾಗಿದ್ದರು. ರಾಜಸ್ಥಾನದಲ್ಲಿ ಬೇರೊಬ್ಬರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿದ ನಂತರ, ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದ ವಸುಂಧರಾ, ಅಜ್ಞಾತವಾಸ ರಾಜಕೀಯದಲ್ಲಿ ಶಾಸ್ವತವಲ್ಲ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮೋದಿ ಮತ್ತು ಶಾ ಭೇಟಿಯಾದ ವಸುಂಧರಾ ರಾಜೆ

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುನ್ನ ವಸುಂಧರಾ, ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ರಾಷ್ಟ್ರ ಮಟ್ಟದಲ್ಲಿ ಅವರಿಗೆ ಜವಾಬ್ದರಿಯುತ ಸ್ಥಾನ ನೀಡುವ ಮುನ್ಸೂಚನೆ ಇದು ಎಂದು ಹೇಳಲಾಗುತ್ತಿರುವ ಸಮಯದಲ್ಲಿ, ರಾಷ್ಟ್ರಾಧ್ಯಕ್ಷರ ಸಂಭಾವ್ಯ ಪಟ್ಟಿಯಲ್ಲಿ ಅವರ ಹೆಸರೂ ಕೇಳಿಬರುತ್ತಿದೆ. ಕೆಲವೊಂದು ಮೂಲಗಳ, ಪ್ರಕಾರ, ರಾಜಸ್ಥಾನದ ರಾಜಕೀಯದಲ್ಲಿ ಮತ್ತೆ ಹಿಡಿತವನ್ನು ಸಾಧಿಸಲು, ವಸುಂಧರಾ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾತೂ ಚಾಲ್ತಿಯಲ್ಲಿದೆ.

ರಾಷ್ಟ್ರಾಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿರುವ ಸಂಭಾವ್ಯ ಹೆಸರುಗಳು

ಈಗಾಗಲೇ, ಕೇಂದ್ರ ಸಚಿವರುಗಳಾದ, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್, ಪ್ರಲ್ಹಾದ ಜೋಶಿ ಮತ್ತು ಉತ್ತರ ಪ್ರದೇಶದ ಕೇಶವ ಪ್ರಸಾದ್ ಮೌರ್ಯ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಈಗ, ಆ ಪಟ್ಟಿಗೆ ವಸುಂಧರಾ ರಾಜೇ ಹೆಸರು ಸೇರ್ಪಡೆಯಾಗಿದೆ ಎನ್ನುವ ಸುದ್ದಿಗಳು ದೆಹಲಿ ವಲಯದಲ್ಲಿ ಓಡಾಡುತ್ತಿದೆ. ಈ ಪೈಕಿ, ಶಿವರಾಜ್ ಸಿಂಗ್, ಅಷ್ಟೇನೂ ಆಸಕ್ತಿಯನ್ನು, ರಾಷ್ಟ್ರಾಧ್ಯಕ್ಷರ ಹುದ್ದೆಗೆ ತೋರಿಸುತ್ತಿಲ್ಲ ಎನ್ನುವ ಮಾಹಿತಿಯೂ ಇದೆ.

ಮಕರ ಸಂಕ್ರಾಂತಿಯ ಆಸುಪಾಸಿನಲ್ಲಿ ರಾಷ್ಟ್ರಾಧ್ಯಕ್ಷರ ಅಧಿಕಾರ ಸ್ವೀಕಾರ ಸಾಧ್ಯತೆ

ಬಿಹಾರದ ಚುನಾವಣೆಯ ಫಲಿತಾಂಶ ಮತ್ತು ನೂತನ ಸರ್ಕಾರ ಆಡಳಿತಕ್ಕೆ ಬಂದ ನಂತರ, ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಗ ಪಡೆದುಕೊಳ್ಳಬಹುದು ಎನ್ನುವ ಮಾತು ಕೇಳಿ ಬರುತ್ತಿತ್ತು. ಈಗ, ವಿಶೇಷವಾಗಿ ಜನವರಿ 14 ರ ನಂತರ, ಹಿಂದೂ ಕ್ಯಾಲೆಂಡರ್‌ ನಲ್ಲಿ ಮಕರ ಸಂಕ್ರಾಂತಿಯ ಆಸುಪಾಸಿನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ವಸುಂಧರಾ ರಾಜೇ ಅವರನ್ನು ರಾಷ್ಟ್ರ ರಾಜಕಾರಣದಲ್ಲಿ ತರಲು ಆರ್‌ಎಸ್‌ಎಸ್‌, ಮೋದಿ ಮತ್ತು ಅಮಿತ್ ಶಾ ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನೂತನವಾಗಿ ಆಯ್ಕೆಯಾಗುವ ಅಧ್ಯಕ್ಷರು, ಎನ್‌ಡಿಎ ಮೈತ್ರಿಕೂಟದ ಸದಸ್ಯ ಪಕ್ಷದೊಂದಿಗೂ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವ ಅನಿವಾರ್ಯತೆಯೂ ಪಾರ್ಟಿಗೆ ಇದೆ.

[t4b-ticker]
error: Content is protected !!