‘ಇಂದಲ್ಲ, ಮೊನ್ನೆಯಲ್ಲ ಎಂದೆಂದೂ ಒಗ್ಗಟ್ಟು’: ಉಪಾಹಾರ ಸಭೆ ಬಳಿಕ ಡಿ.ಕೆ.ಶಿವಕುಮಾರ್

Picture of Savistara

Savistara

Bureau Report

ಬೆಂಗಳೂರು: ‘ಇಂದಲ್ಲ ಮೊನ್ನೆಯಲ್ಲ ಎಂದೆಂದೂ ಒಗ್ಗಟ್ಟು’ ‘ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಿನಿಂದ ಇದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರೆ ‘ನಮ್ಮದು ಒಂದೇ ಧ್ವನಿ. ಯಾವುದೇ ಗೊಂದಲ ಇಲ್ಲ. ಇಬ್ಬರೂ ಜೊತೆಯಾಗಿ ಸರ್ಕಾರವನ್ನು ಮುನ್ನಡೆಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.

ಶಿವಕುಮಾರ್ ದನಿಗೂಡಿಸಿದರು.ಆ ಮೂಲಕ ‘ನಾಯಕತ್ವ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ಒಡಕು ಇಲ್ಲ. ರಾಹುಲ್‌ ಗಾಂಧಿ ಏನು ತೀರ್ಮಾನ ಮಾಡುತ್ತಾರೊ ಅದರಂತೆ ಹೈಕಮಾಂಡ್‌ ಹೇಳಿದಂತೆ ಇಬ್ಬರೂ ನಡೆದುಕೊಳ್ಳುತ್ತೇವೆ. ಸಮಯ ಸಿಕ್ಕಿದರೆ ಹೈಕಮಾಂಡ್‌ ಅವಕಾಶ ನೀಡಿದರೆ ಹೋಗಿ ಭೇಟಿ ಮಾಡುತ್ತೇವೆ’ ಎಂದು ಹೇಳುವ ಮೂಲಕ ಮತ್ತೊಮ್ಮೆ ಒಗ್ಗಟ್ಟು ತೋರಿಸಿದರು.’ನಾನು ಮತ್ತು ಉಪ ಮುಖ್ಯಮಂತ್ರಿ ಸಹೋದರರಿದ್ದಂತೆ. ಇವತ್ತು ಒಗ್ಗಟ್ಟಾಗಿ ಇರುವುದಲ್ಲ ಮೊನ್ನೆಯೂ ಒಗ್ಗಟ್ಟಾಗಿದ್ದಲ್ಲ. ನಾವು ಯಾವಾಗಲೂ ಒಗ್ಗಟ್ಟಾಗಿದ್ದೇವೆ. ಒಂದೇ ಪಕ್ಷದಲ್ಲಿದ್ದು ಒಂದೇ ಸಿದ್ಧಾಂತ ನಂಬಿದ್ದೇವೆ. 2028ರ ವಿಧಾನಸಭಾ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ’ ಎಂದು ಹೇಳಿದರು.ಅಧಿಕಾರ ಹಸ್ತಾಂತರದ ವಿಷಯದಲ್ಲಿ ಎದ್ದಿದ್ದ ಗೊಂದಲ ನಿವಾರಿಸಿಕೊಳ್ಳುವಂತೆ ಉಭಯ ನಾಯಕರಿಗೆ ಆ ಪಕ್ಷದ ಹೈಕಮಾಂಡ್‌ ಸೂಚನೆ ನೀಡಿತ್ತು. ಸಿದ್ದರಾಮಯ್ಯ ಅವರ ನಿವಾಸದಲ್ಲಿ ಶನಿವಾರ (ನ. 29) ನಡೆದ ಉಪಾಹಾರ ಸಭೆಯ ಮುಂದುವರೆದ ಭಾಗವಾಗಿ ಡಿ.ಕೆ. ಶಿವಕುಮಾರ್‌ ಅವರ ಸದಾಶಿವನಗರದಲ್ಲಿರುವ ಮನೆಯಲ್ಲಿ ಸಿದ್ದರಾಮಯ್ಯ ಮಂಗಳವಾರ ಬೆಳಿಗ್ಗೆ ಉಪಾಹಾರ ಸೇವಿಸಿದರು. ಒಂದು ಗಂಟೆಗೂ ಹೆಚ್ಚು ತಾಸು ಉಭಯ ನಾಯಕರು ವಿಚಾರವಿನಿಮಯ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ‘ಕಾಂಗ್ರೆಸ್‌ನ ಯಾವ ಶಾಸಕರಲ್ಲಿಯೂ ಭೇದವಿಲ್ಲ. ಶಾಸಕರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ ಅಷ್ಟೇ. ಕಾಂಗ್ರೆಸ್‌ನ ಎಲ್ಲ ಶಾಸಕರೂ ಅಧಿವೇಶನದಲ್ಲಿ ಭಾಗವಹಿಸಿ ವಿರೋಧ ಪಕ್ಷಗಳನ್ನು ಒಗ್ಗಟ್ಟಿನಿಂದ ಎದುರಿಸಲಿದ್ದಾರೆ’ ಎಂದು ಸಿದ್ದರಾಮಯ್ಯ ತಿಳಿಸಿದರು.ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ‘ಪಕ್ಷದ ವರಿಷ್ಠರು ತೀರ್ಮಾನಿಸಬೇಕಾಗಿದೆ’ ಎಂದರು.’ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗುವುದು ಯಾವಾಗ’ ಎಂದು ಕೇಳಿದಾಗ ‘ಹೈಕಮಾಂಡ್‌ ತೀರ್ಮಾನಿಸಿದಾಗ’ ಎಂದರು.’ಬೆಳಗಾವಿ ಅಧಿವೇಶನ ಡಿಸೆಂಬರ್ 8ರಂದು ಆರಂಭವಾಗಲಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮಾಹಿತಿ ಪತ್ರಿಕೆಗಳಿಂದ ಗೊತ್ತಾಗಿದೆ. ವಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ನಾವಿಬ್ಬರೂ ಚರ್ಚಿಸಿದ್ದೇವೆ. ಅಲ್ಲದೆ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸುತ್ತೇವೆ’ ಎಂದೂ ಮುಖ್ಯಮಂತ್ರಿ ಹೇಳಿದರು.

‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ನಾನು ಬುಧವಾರ ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜೊತೆಯಲ್ಲಿರುತ್ತೇವೆ’ ಎಂದರು.

‘ನಮ್ಮದು ಒಂದೇ ಧ್ವನಿ’

‘ನಮ್ಮದು ಒಂದೇ ಧ್ವನಿ. ಒಂದೇ ಆಚಾರ, ವಿಚಾರ. ನಾವಿಬ್ಬರೂ ಪಕ್ಷ, ಅಧಿವೇಶನ ವಿಷಯವನ್ನು ಚರ್ಚೆ ಮಾಡಿದ್ದೇವೆ. ಅವರು (ಬಿಜೆಪಿ, ಜೆಡಿಎಸ್‌) ಅವಿಶ್ವಾಸ ನಿರ್ಣಯವಲ್ಲ, ಏನೇ ತಂದರೂ ನಾವು ಅದನ್ನು ಸಮರ್ಥವಾಗಿ ಎದುರಿಸುತ್ತೇವೆ’ ಎಂದು ಶಿವಕುಮಾರ್ ಹೇಳಿದರು.’ಅಧಿವೇಶನದಲ್ಲಿ ವಿರೋಧ ಪಕ್ಷಗಳು ಎತ್ತಬಹುದಾದ ವಿಚಾರಗಳನ್ನು ಮುಖ್ಯಮಂತ್ರಿ ಮತ್ತು ನಾನು ಒಗ್ಗಟ್ಟಿನಿಂದ ಎದುರಿಸಲಿದ್ದೇವೆ‌’ ಎಂದರು.

‘ಉಪಾಹಾರ ಕೂಟಕ್ಕೆ ಬರುವಂತೆ ಮುಖ್ಯಮಂತ್ರಿಯನ್ನು ನಾನು ಕರೆದಿದ್ದೆ. ಅವರು, ನೀವೇ ಮೊದಲು ನಮ್ಮ ಮನೆಗೆ ಬನ್ನಿ, ಆಮೇಲೆ ನಾನು ಬರುತ್ತೇನೆ ಎಂದಿದ್ದರು. ಅದರಂತೆ ಅವರ ಮನೆಗೆ ಹೋಗಿದ್ದೆ. ಇಂದು ನಮ್ಮ ಮನೆಗೆ ಆಹ್ವಾನಿಸಿದ್ದೆ. ನಾವಿಬ್ಬರೂ ಬಹಳ ಸಂತೋಷದಿಂದ ಉಪಹಾರ ಸೇವಿಸಿದ್ದೇವೆ. ಈ ವೇಳೆ ರಾಜಕೀಯವಾಗಿಯೂ ಚರ್ಚೆ ಮಾಡಿದ್ದೇವೆ. ವಿಧಾನ ಪರಿಷತ್‌ಗೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ನಡೆಯಲಿರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ. ಈ ವಿಚಾರವಾಗಿಯೂ ಚರ್ಚೆ ಮಾಡಿದ್ದೇವೆ’ ಎಂದು ತಿಳಿಸಿದರು.ನಿಮ್ಮ, ನಿಮ್ಮ ಪರವಾಗಿ ನಿಂತಿದ್ದ ಪಕ್ಷದ ಶಾಸಕರು, ಸಚಿವರು ಒಂದಾಗಿ ಸಾಗುತ್ತಾರಾ ಎಂದು ಕೇಳಿದಾಗ, ‘ನಮ್ಮ ಪಕ್ಷದಲ್ಲಿ ಯಾರೂ ಬೇರೆಯಾಗಿಲ್ಲ. ನೀವುಗಳು (ಮಾಧ್ಯಮಗಳು) ಬೇರೆ ಮಾಡುತ್ತಿದ್ದೀರಿ’ ಎಂದರು.

‘ವಿಧಾನ ಮಂಡಲ ಅಧಿವೇಶನದ ಮೊದಲ ದಿನ (ಡಿ. 8) ಸಂತಾಪ ಸೂಚನೆಯ ಬಳಿಕ ಕಲಾಪವು ಮಾರನೆ ದಿನಕ್ಕೆ ಮುಂದೂಡಿಕೆಯಾಗಬಹುದು. ಹೀಗಾಗಿ, ಅದೇ ದಿನ ರಾಜ್ಯದ ಸಂಸದರ ಸಭೆಯನ್ನು ದೆಹಲಿಯಲ್ಲಿ ಕರೆಯಲು ತೀರ್ಮಾನಿಸಿದ್ದೇವೆ’ ಎಂದು ಸಿದ್ದರಾಮಯ್ಯ ತಿಳಿಸಿದರು. ‘ದೆಹಲಿಗೆ ಹೋಗಿ ಸರ್ವಪಕ್ಷ ಸಂಸದರ ಸಭೆ ನಡೆಸುವ ಬಗ್ಗೆ ನಾವಿಬ್ಬರೂ ಚರ್ಚಿಸಿದ್ದೇವೆ. 8ರಂದು ದೆಹಲಿಗೆ ಹೋಗಿ, ಅಂದೇ ವಾಪಸ್‌ ಬರಲಿದ್ದೇವೆ. ಮೇಕೆದಾಟು, ಮೆಕ್ಕೆಜೋಳ ದರ, ಕೇಂದ್ರ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಅನುದಾನ ಬಾರದಿರುವ ವಿಚಾರ ವಾಗಿ ಸಂಸದರ ಜತೆ ಚರ್ಚಿಸುತ್ತೇವೆ. ವಿಧಾನಸಭೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನು ಮತ್ತು ಜೆಡಿಎಸ್ ನಾಯಕರನ್ನು ಸಭೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ಇದೇ 8ಕ್ಕೆ ದೆಹಲಿಯಲ್ಲಿ ಸಂಸದರ ಸಭೆ

[t4b-ticker]
error: Content is protected !!