ರಾಜ್ಯ ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಸಿಎಂ ಕುರ್ಚಿ ರೇಸ್ ಬಿಸಿ ಕರಾವಳಿಗೂ ತಟ್ಟಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಎದುರೇ ‘ಡಿಕೆ ಡಿಕೆ’ ಎಂದು ಘೋಷಣೆ ಕೂಗಿದ ಆರೋಪದ ಅಡಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಡಿಕೆಶಿ ಆಪ್ತ ಮಿಥುನ್ ರೈಗೆ ಎಐಸಿಸಿ ‘ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಹೈಕಮಾಂಡ್ ನಾಯಕನ ಮುಂದೆ ಶಿಸ್ತು ಉಲ್ಲಂಘಿಸಿ, ಬಣ ರಾಜಕೀಯ ಕೆಸರೆರೆಚಾಟ ನಡೆಸಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೆಂಡಾಮಂಡಲವಾಗಿದೆ.
ವೇಣುಗೋಪಾಲ್ ಎದುರೇ ಡಿಕೆಶಿ ಜೈಕಾರ..!
ಘಟನೆ ನಡೆದಿದ್ದು ಡಿ.3ರಂದು. ಮಂಗಳೂರಿನಲ್ಲಿ ‘ಗಾಂಧಿ-ಗುರು ಸಂವಾದ ಶತಾಬ್ಲಿ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕೆ.ಸಿ. ವೇಣುಗೋಪಾಲ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಮಿಥುನ್ ರೈ ನೇತೃತ್ವದಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ವೇಣುಗೋಪಾಲ್ ಅವರಿಗೆ ಶಾಲು ಹೊದಿಸಿದ ಸಂದರ್ಭದಲ್ಲಿ, ಮಿಥುನ್ ರೈ ಬೆಂಬಲಿಗರು ವೇಣುಗೋಪಾಲ್ ಅವರ ಕಾರನ್ನು ಸುತ್ತುವರಿದು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ “ಡಿಕೆ ಡಿಕೆ” ಎಂದು ಗಟ್ಟಿಯಾಗಿ ಘೋಷಣೆ ಕೂಗಿದರು. ಇದು ರಾಷ್ಟ್ರೀಯ ನಾಯಕರ ಎದುರು ರಾಜ್ಯ ನಾಯಕತ್ವದ ಬಣ ರಾಜಕೀಯದ ಸಾರಥ್ಯವನ್ನು ಪ್ರದರ್ಶಿಸಿ ತೀವ್ರ ಮುಜುಗರ ತಂದೊಡ್ಡಿತ್ತು.
ಹೈಕಮಾಂಡ್ ಕೆಂಗಣ್ಣು: ಶಿಸ್ತು ಉಲ್ಲಂಘನೆ ಗಂಭೀರ ಪರಿಗಣನೆ!
ರಾಜ್ಯದಲ್ಲಿ ಈಗಾಗಲೇ ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಕುರಿತು ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲೇ, ಹೈಕಮಾಂಡ್ ಮಟ್ಟದ ನಾಯಕರ ಎದುರು ಈ ರೀತಿ ವರ್ತಿಸಿರುವುದು ಪರೋಕ್ಷವಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಎಂದು ಎಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಪಕ್ಷದ ಶಿಸ್ತಿಗೆ ಧಕ್ಕೆ ತಂದ ಈ ನಡೆಯನ್ನು ಖಂಡಿಸಿ, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಅವರು ಮಿಥುನ್ ರೈಗೆ ನೋಟಿಸ್ ಜಾರಿ ಮಾಡಿದ್ದಾರೆ. ಘಟನೆಯ ಕುರಿತು ಕೂಡಲೇ ಸೂಕ್ತ ಸ್ಪಷ್ಟನೆ ನೀಡುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.
ಕರಾವಳಿಯಲ್ಲೂ ಪ್ರತಿಧ್ವನಿಸಿದ ಬಣ ರಾಜಕೀಯ!
ಮಂಗಳೂರು ವಿಮಾನ ನಿಲ್ದಾಣ ಅಕ್ಷರಶಃ ಕಾಂಗ್ರೆಸ್ನ ಬಣ ರಾಜಕೀಯದ ಕಣವಾಗಿ ಮಾರ್ಪಟ್ಟಿತ್ತು. ಮಿಥುನ್ ರೈ ಬೆಂಬಲಿಗರು ಡಿಕೆಶಿ ಪರ ಘೋಷಣೆ ಕೂಗುತ್ತಿದ್ದಂತೆಯೇ, ಎಂಎಲ್ಸಿ ಐವಾನ್ ಡಿಸೋಜಾ ನೇತೃತ್ವದಲ್ಲಿ ಸಿದ್ದರಾಮಯ್ಯ ಪರವಾಗಿಯೂ ಘೋಷಣೆಗಳು ಕೇಳಿಬಂದವು. “ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಬೇಕು” ಎಂದು ಒಂದು ಬಣ ಕೂಗಿದರೆ, ಮಿಥುನ್ ರೈ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಸಿದ್ದರಾಮಯ್ಯ ಮಹಾನ್ ನಾಯಕರು. ಆದರೆ, ಡಿಕೆ ಶಿವಕುಮಾರ್ ನಾಳೆಯೇ ಸಿಎಂ ಆದರೆ ನಮಗೆ ಹೆಚ್ಚು ಸಂತೋಷ.” ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದ್ದರು.
ಸದ್ಯ ಈ ಬೆಳವಣಿಗೆಯಿಂದಾಗಿ ಕರಾವಳಿ ಕಾಂಗ್ರೆಸ್ನಲ್ಲಿ ಭಾರಿ ಸಂಚಲನ ಮೂಡಿದ್ದು. ಡಿಕೆಶಿ ಬಣದ ಪ್ರಮುಖ ನಾಯಕನಿಗೆ ಹೈಕಮಾಂಡ್ ನೋಟಿಸ್ ಜಾರಿಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಕೇವಲ ಮಿಥುನ್ ರೈಗೆ ಮಾತ್ರವಲ್ಲದೆ, ರಾಜ್ಯದ ಒಳ ರಾಜಕೀಯದಲ್ಲಿ ಸಿಎಂ ಸ್ಥಾನದ ಕುರಿತ ಬಿಗುವಿನ ವಾತಾವರಣದ ಪ್ರತಿಬಿಂಬವೂ ಆಗಿದೆ. ಹೈಕಮಾಂಡ್ ಈ ವಿಚಾರವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.













































