ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಮುಖ್ಯಸ್ಥೆ ಖಲೀದಾ ಜಿಯಾ (80) ಅವರು ವಯೋಸಹಜ ಕಾಯಿಲೆಗಳಿಂದಾಗಿ ಮಂಗಳವಾರ (ಡಿ. 30) ಮುಂಜಾನೆ ನಿಧನರಾದರು.
ಚಿಕಿತ್ಸೆ ಫಲಕಾರಿಯಾಗದ ಹೋರಾಟ:ಹೃದಯ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಖಲೀದಾ ಜಿಯಾ ಅವರನ್ನು ನವೆಂಬರ್ 23 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 36 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದ ಅವರು ನ್ಯುಮೋನಿಯಾ, ಲಿವರ್ ಸಿರೋಸಿಸ್, ಸಂಧಿವಾತ, ಮಧುಮೇಹ ಮತ್ತು ಮೂತ್ರಪಿಂಡದ ವೈಫಲ್ಯ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ‘ದಿ ಡೈಲಿ ಸ್ಟಾರ್’ ವರದಿ ಮಾಡಿದೆ.
ಬ್ರಿಟನ್, ಅಮೆರಿಕ, ಚೀನಾ ಮತ್ತು ಆಸ್ಟ್ರೇಲಿಯಾದ ನುರಿತ ವೈದ್ಯರ ತಂಡವು ಅವರಿಗೆ ಸುಧಾರಿತ ಚಿಕಿತ್ಸೆ ನೀಡಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಲು ಪ್ರಯತ್ನಿಸಲಾಗಿತ್ತಾದರೂ, ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಾಂಗ್ಲಾ ರಾಜಕೀಯಕ್ಕೆ ದೊಡ್ಡ ನಷ್ಟ:ಬಾಂಗ್ಲಾದೇಶದ ಇತಿಹಾಸದಲ್ಲಿ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಿಯಾ ಅವರು ದೇಶದ ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಮುಂಬರುವ ಫೆಬ್ರವರಿಯಲ್ಲಿ ನಡೆಯಲಿದ್ದ ಸಾರ್ವತ್ರಿಕ ಚುನಾವಣೆಗೆ ಅವರು ತಯಾರಿ ನಡೆಸುತ್ತಿದ್ದರು ಮತ್ತು ಮತ್ತೆ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿದ್ದರು. ಅವರ ಅಕಾಲಿಕ ನಿಧನವು ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ನಿಧನಕ್ಕೆ ಜಗತ್ತಿನಾದ್ಯಂತದ ಗಣ್ಯರು ಮತ್ತು ಬಾಂಗ್ಲಾದೇಶದ ನಾಗರಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.













































