ಭಾರತ-ಅಮೆರಿಕ ಸುಂಕ ಸಮರ ಅಂತ್ಯ: ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಬೂಸ್ಟ್

Picture of Savistara

Savistara

Bureau Report

ವಾಷಿಂಗ್ಟನ್/ನವದೆಹಲಿ: ಕಳೆದ ಕೆಲವು ತಿಂಗಳಿಂದ ಭಾರತಮತ್ತು ಅಮೆರಿಕ ನಡುವೆ ನಡೆಯುತ್ತಿದ್ದ ವ್ಯಾಪಾರ ಸಂಘರ್ಷಕ್ಕೆ ಈಗ ಸುಖಾಂತ್ಯ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು (Tariff) ಶೇಕಡಾ 25ರಿಂದ ಶೇಕಡಾ 18ಕ್ಕೆ ಇಳಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮಹತ್ವದ ನಿರ್ಧಾರವು ‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸ್ಥಾನವನ್ನು ನೀಡಲಿದ್ದು, ಭಾರತದ ಆರ್ಥಿಕತೆಗೆ ದೊಡ್ಡ ಮಟ್ಟದ ಬಲ ತಂದುಕೊಡಲಿದೆ.

ಒಪ್ಪಂದದ ಹಿನ್ನೆಲೆ ಮತ್ತು ಸುಂಕ ಕಡಿತದ ವಿವರ

2025ರ ಆಗಸ್ಟ್‌ನಿಂದ ಅಮೆರಿಕವು ಭಾರತೀಯ ಸರಕುಗಳ ಮೇಲೆ ಒಟ್ಟು ಶೇಕಡಾ 50ರಷ್ಟು ಸುಂಕವನ್ನು ವಿಧಿಸಿತ್ತು. ಇದರಲ್ಲಿ ಶೇ. 25ರಷ್ಟು ಸಾಮಾನ್ಯ ಸುಂಕವಾದರೆ, ಭಾರತವು ರಷ್ಯಾದಿಂದ ಕಚ್ಚಾ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೆಚ್ಚುವರಿ ಶೇ. 25ರಷ್ಟು ‘ಪ್ರತಿ ಸುಂಕ’ ವಿಧಿಸಲಾಗಿತ್ತು. ಆದರೆ ಈಗ ಏರ್ಪಟ್ಟಿರುವ ಒಪ್ಪಂದದಂತೆ ಈ ಎರಡೂ ಸುಂಕಗಳನ್ನು ರದ್ದುಗೊಳಿಸಿ, ಒಟ್ಟಾರೆ ಸುಂಕವನ್ನು ಶೇ. 18ಕ್ಕೆ ಸೀಮಿತಗೊಳಿಸಲಾಗಿದೆ. ಇದರಿಂದಾಗಿ ಚೀನಾ (34%), ಪಾಕಿಸ್ತಾನ (19%) ಮತ್ತು ಬಾಂಗ್ಲಾದೇಶದಂತಹ (20%) ದೇಶಗಳಿಗಿಂತಲೂ ಕಡಿಮೆ ಸುಂಕದ ಲಾಭ ಈಗ ಭಾರತಕ್ಕೆ ಸಿಕ್ಕಂತಾಗಿದೆ.

ತೈಲ ಖರೀದಿ ಮತ್ತು ರಷ್ಯಾದೊಂದಿಗಿನ ಸಂಬಂಧ

ಈ ಒಪ್ಪಂದದ ಪ್ರಮುಖ ಅಂಶವೆಂದರೆ, ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸಲು ಭಾರತ ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಬದಲಾಗಿ, ಭಾರತವು ಅಮೆರಿಕ ಮತ್ತು ವೆನೆಜುವೆಲಾದಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನವನ್ನು ಆಮದು ಮಾಡಿಕೊಳ್ಳಲಿದೆ. ಇದು ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ನೆರವಾಗಲಿದೆ ಎಂಬುದು ಅಮೆರಿಕದ ಆಶಯವಾಗಿದೆ. ಇದಕ್ಕೆ ಪ್ರತಿಯಾಗಿ ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ತಾನು ವಿಧಿಸುತ್ತಿರುವ ಸುಂಕಗಳನ್ನು ಶೂನ್ಯಕ್ಕೆ ಇಳಿಸಲು ಮತ್ತು ಮುಂದಿನ ದಿನಗಳಲ್ಲಿ ಅಮೆರಿಕದಿಂದ ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ತಂತ್ರಜ್ಞಾನ, ಇಂಧನ ಹಾಗೂ ಕೃಷಿ ಉತ್ಪನ್ನಗಳನ್ನು ಖರೀದಿಸಲು ಬದ್ಧತೆ ತೋರಿದೆ.

ಭಾರತಕ್ಕೆ ಆಗುವ ಲಾಭಗಳೇನು?

ಈ ಸುಂಕ ಕಡಿತದಿಂದಾಗಿ ಭಾರತದ ಶ್ರಮ ಆಧಾರಿತ ಕ್ಷೇತ್ರಗಳಾದ ಸಿದ್ಧ ಉಡುಪು (Garments), ಚರ್ಮೋದ್ಯಮ, ಆಭರಣಗಳು, ರತ್ನಗಳು ಮತ್ತು ಕರಕುಶಲ ವಸ್ತುಗಳ ರಫ್ತುದಾರರಿಗೆ ದೊಡ್ಡ ಲಾಭವಾಗಲಿದೆ. ಹೆಚ್ಚಿನ ತೆರಿಗೆಯಿಂದಾಗಿ ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ವಸ್ತುಗಳು ದುಬಾರಿಯಾಗಿದ್ದವು, ಈಗ ಬೆಲೆ ಇಳಿಕೆಯಾಗುವುದರಿಂದ ಜಾಗತಿಕ ಸ್ಪರ್ಧೆಯಲ್ಲಿ ಭಾರತಕ್ಕೆ ಮೇಲುಗೈ ಸಿಗಲಿದೆ. ಔಷಧಗಳು, ಟೆಲಿಕಾಂ ಉಪಕರಣಗಳು ಮತ್ತು ಆಟೋ ಬಿಡಿಭಾಗಗಳ ರಪ್ತಿಗೂ ಇದು ವೇಗ ನೀಡಲಿದೆ.

ಸಂತಸ ಹಂಚಿಕೊಂಡ ಪ್ರಧಾನಿ ಮೋದಿ

ಈ ಬೆಳವಣಿಗೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಪ್ರಧಾನಿ ಮೋದಿ, “ನನ್ನ ಆತ್ಮೀಯ ಸ್ನೇಹಿತ ಟ್ರಂಪ್ ಅವರೊಂದಿಗೆ ಮಾತನಾಡಿದ್ದು ಸಂತೋಷ ತಂದಿದೆ. 140 ಕೋಟಿ ಭಾರತೀಯರ ಪರವಾಗಿ ಈ ನಿರ್ಧಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಜೊತೆಯಾಗಿ ಕೆಲಸ ಮಾಡುವುದರಿಂದ ಎರಡೂ ದೇಶಗಳ ನಾಗರಿಕರಿಗೆ ಅಪಾರ ಅವಕಾಶಗಳು ತೆರೆದುಕೊಳ್ಳಲಿವೆ,” ಎಂದು ಹೇಳಿದ್ದಾರೆ. ಇತ್ತ ಟ್ರಂಪ್ ಕೂಡ ಮೋದಿಯವರನ್ನು “ಪ್ರಬಲ ಮತ್ತು ಗೌರವಾನ್ವಿತ ನಾಯಕ” ಎಂದು ಬಣ್ಣಿಸಿದ್ದು, ಈ ಒಪ್ಪಂದವು ಉಭಯ ದೇಶಗಳ ಸ್ನೇಹಕ್ಕೆ ಸಾಕ್ಷಿ ಎಂದಿದ್ದಾರೆ.

[t4b-ticker]
error: Content is protected !!