ಕೊಡಗು ಜಿಲ್ಲೆಯಲ್ಲಿ ಕ್ಯಾನ್ಸ‌ರ್ ಹೆಚ್ಚಳ; ಮಹಿಳೆಯರೇ ಹೆಚ್ಚು!

Picture of Savistara

Savistara

Bureau Report

ಮಡಿಕೇರಿ: ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಯಲ್ಲಿ ಕ್ಯಾನ್ಸ‌ರ್ರೋಗಿಗಳು ಹೆಚ್ಚುತ್ತಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಜತೆಗೂಡಿ ಕ್ಯಾನ್ಸ‌ರ್ ಪತ್ತೆಗೆ ಮತ್ತು ಕ್ಯಾನ್ಸ‌ರ್ ತಡೆಗೆ ಪ್ರಯತ್ನ ಆರಂಭಿಸಲೇಬೇಕಾದ ದಿನಗಳು ಬಂದಿವೆ.

2024ರಲ್ಲಿ ಜಿಲ್ಲೆಯಲ್ಲಿ 133 ಮಂದಿಯಲ್ಲಷ್ಟೇ ಕ್ಯಾನ್ಸ‌ರ್ ಇತ್ತು. ಅವರಲ್ಲಿ ಸ್ತನ ಕ್ಯಾನ್ಸರ್ 46, ಬಾಯಿ ಮತ್ತು ಗಂಟಲು ಕ್ಯಾನ್ಸರ್ 36, ಗರ್ಭಕೊರಳಿನ ಕ್ಯಾನ್ಸರ್ 17 ಮತ್ತು ಇತರೆ ಕ್ಯಾನ್ಸರ್ 34 ಮಂದಿಯಲ್ಲಿತ್ತು.2025ರಲ್ಲಿ ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ 142ಕ್ಕೆ ಏರಿಕೆ ಕಂಡಿತು. ಸ್ತನ ಕ್ಯಾನ್ಸರ್ 47, ಬಾಯಿ ಕ್ಯಾನ್ಸರ್ 29, ಗರ್ಭಕಂಠದ ಕ್ಯಾನ್ಸರ್ 20 ಮತ್ತು ಇತರೆ ಕ್ಯಾನ್ಸರ್ 46 ಮಂದಿಯಲ್ಲಿತ್ತು. ಆದರೆ, ಈಗ 2026ರಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ 200ರ ಗಡಿ ದಾಟಿದೆ. ಪ್ರಸ್ತುತ ಒಟ್ಟು 218 ಮಂದಿ ಕ್ಯಾನ್ಸರ್ ರೋಗಿಗಳಿದ್ದು, ಅವರಲ್ಲಿ ಸ್ತನ ಕ್ಯಾನ್ಸರ್ 80, ಬಾಯಿ ಕ್ಯಾನ್ಸರ್ 46, ಗರ್ಭಕಂಠದ ಕ್ಯಾನ್ಸ‌ರ್ 22 ಹಾಗೂ ಇತರೆ ಕ್ಯಾನ್ಸರ್‌ಗಳು 70 ಮಂದಿಯಲ್ಲಿದೆ.ಇತರೆ ಕ್ಯಾನ್ಸ‌ರ್ ರೋಗಗಳ ಪಟ್ಟಿಯಲ್ಲಿ ಮೂಳೆ ಕ್ಯಾನ್ಸ‌ರ್, ಶ್ವಾಸಕೋಶ, ಮಿದುಳು, ಲಿವರ್, ಚಿಕ್ಕ ಮತ್ತು ದೊಡ್ಡಕರುಳಿನ ಕ್ಯಾನ್ಸರ್, ಗುದನಾಳದ ಕ್ಯಾನ್ಸರ್, ರಕ್ತ ಕ್ಯಾನ್ಸರ್‌ಗಳೂ ಇವೆ.

ಎರಡೇ ವರ್ಷದಲ್ಲಿ ದುಪ್ಪಟ್ಟು;ಜಿಲ್ಲೆಯಲ್ಲಿ ಎರಡೇ ವರ್ಷದಲ್ಲಿ ಸ್ತನ ಕ್ಯಾನ್ಸರ್ ದುಪ್ಪಟ್ಟಾಗಿದೆ. 2024ರಲ್ಲಿ 47 ಮಂದಿಯಲ್ಲಿದ್ದ ಸ್ತನಕ್ಯಾನ್ಸರ್ 2026ರಲ್ಲಿ 80 ಮಂದಿಯಲ್ಲಿದೆ. 46 ಮಂದಿಯಲ್ಲಿದ್ದ ಇತರೆ ಕ್ಯಾನ್ಸರ್‌ಗಳು ಈಗ 70ಕ್ಕೆ ಹೆಚ್ಚಿದೆ.ಕ್ಯಾನ್ಸರ್ ಬೇಗ ಪತ್ತೆ ಮಾಡಿದಷ್ಟು ಬೇಗನೆ ಗುಣಪಡಿಸಬಹುದು. ಪತ್ತೆ ಕಾರ್ಯ ಹೆಚ್ಚು ನಡೆಯಬೇಕು. ಸಂಘ, ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಜೊತೆಗೆ ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನೂ ನಡೆಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ನಡೆಯಬೇಕು.ಆದರೆ, ಪ್ರಸ್ತುತ ಜಿಲ್ಲೆಯಲ್ಲಿ ಶಿಬಿರಗಳು ಸಾಕಷ್ಟು ನಡೆಯುತ್ತಿಲ್ಲ. ವಿಶ್ವ ಕ್ಯಾನ್ಸರ್ ದಿನ ಸೇರಿ ಆಯಾಯಾ ಕ್ಯಾನ್ಸರ್ ದಿನದಂದು ಕೂಡ ಜಾಗೃತಿ ಯತ್ನ ನಡೆಯುತ್ತಿಲ್ಲ. ರೋಗವು ಅಂತಿಮ ಹಂತಕ್ಕೆ ಬಂದಾಗ ತಪಾಸಣೆಗೆ ಒಳಗಾಗುವ ಸನ್ನಿವೇಶಗಳೇ ಹೆಚ್ಚು.

ಕಿಮೊಥೆರಪಿ ಕೇಂದ್ರ ಅಂಬೆಗಾಲು

ರಾಜ್ಯದ ಇತರೆ ಜಿಲ್ಲಾಸ್ಪತ್ರೆಗಳಲ್ಲಿ ಕಿಮೊಥೆರಪಿ ಹಗಲು ಆರೈಕೆ ಕೇಂದ್ರ (‘ಡೇ-ಕೇರ್ ಕಿಮೊಥೆರಪಿ’) ಕಾರ್ಯಾಚರಣೆ ನಡೆಸುತ್ತಿದ್ದರೆ ಜಿಲ್ಲೆಯಲ್ಲಿ ತಜ್ಞ ವೈದ್ಯರಿಲ್ಲದೆ ಅಂಬೆಗಾಲಿಡುತ್ತಿದೆ. ಸ್ತನ ಕ್ಯಾನ್ಸರ್ ಪತ್ತೆ ಮಾಡುವ ಮೆಮೊಗ್ರಫಿ ಯಂತ್ರಕ್ಕೆ ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಟೆಂಡ‌ರ್ ಕರೆದರೂ ಕಂಪನಿಗಳು ಆಸಕ್ತಿ ವಹಿಸಿಲ್ಲ. ಮತ್ತೊಮ್ಮೆ ಟೆಂಡರ್ ಕರೆಯಬೇಕಿದೆ. ಸದ್ಯ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನಿಂಗ್‌ ಯಂತ್ರಗಳಿರುವುದರಿಂದ ಇನ್ನಿತರ ಕ್ಯಾನ್ಸ‌ರ್ ಪತ್ತೆಗೆ ಸಹಕಾರಿಯಾಗಿದೆ. ಆದರೆ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗಳಿಗೆ ಹೋಗಬೇಕು.

ಕ್ಯಾನ್ಸರ್ ತಡೆಗಟ್ಟುವ ದಾರಿಗಳು

  • ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು
  • ಕೊಬ್ಬಿನಾಂಶಯುಕ್ತ ಮತ್ತು ಎಣ್ಣೆ ಪದಾರ್ಥಗಳನ್ನು ನಿಯಂತ್ರಿಸಿ
  • ತಾಜಾ ಪದಾರ್ಥಗಳನ್ನೇ ಬಳಸುವುದು
  • ತಂಬಾಕು ಪದಾರ್ಥ ಸೇವೆಯಿಂದ ದೂರವಿರಿ

ಕ್ಯಾನ್ಸರ್ ತಡೆಯಲು ರೋಟರಿ ಮಡಿಕೇರಿ ಪ್ರಯತ್ನ

ಸ್ತ್ರೀಯರಲ್ಲಿ ಮಾರಕವಾಗಿರುವ ಗರ್ಭಕೊರಳಿನ ಕ್ಯಾನ್ಸ‌ರ್ ತಡೆಯಲು ರೋಟರಿ ಮಡಿಕೇರಿ ಪ್ರಯತ್ನಗಳನ್ನು ಆರಂಭಿಸಿದೆ. ಗರ್ಭಕೊರಳಿನ ಕ್ಯಾನ್ಸರ್ ನಿರೋಧಕ ಎಚ್‌ಪಿವಿ ಲಸಿಕೆ (ಹೂಮನ್ ಪಪಿಲೋಮ ವೈರಸ್) ಲಸಿಕೆಯನ್ನು ಸ್ತ್ರೀರೋಗ ತಜ್ಞರ ಮಾರ್ಗದರ್ಶನದಲ್ಲಿ ಪೋಷಕರ ಒಪ್ಪಿಗೆ ಪಡೆದು ಹಲವು ಬಾಲಕಿಯರಿಗೆ ಕಳೆದ ವರ್ಷ ನೀಡಿದೆ. ಈ ವರ್ಷವೂ ಲಸಿಕೆ ನೀಡಲು ಪ್ರಯತ್ನಗಳು ಮುಂದುವರಿದಿವೆ ಎಂದು ರೋಟರಿ ಮಡಿಕೇರಿ ಅಧ್ಯಕ್ಷೆ ಲಲಿತಾ ರಾಘವನ್ ಹೇಳುತ್ತಾರೆ.

[t4b-ticker]
error: Content is protected !!