ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಬಿಸಿಯ ನಡುವೆ ಇಂದು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(PM Modi) ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ಸ್ವಾರಸ್ಯಕರ ಹಾಗೂ ತೀಕ್ಷ್ಣವಾದ ಮಾತಿನ ಚಕಮಕಿ ನಡೆದಿದೆ. ವಿರೋಧ ಪಕ್ಷಗಳ ಭಾರಿ ಗದ್ದಲದ ನಡುವೆಯೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ಅವರ ವಯಸ್ಸನ್ನು ಮುಂದಿಟ್ಟುಕೊಂಡು ವ್ಯಂಗ್ಯವಾಡಿದ್ದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕುಳಿತುಕೊಳ್ಳಿ ಖರ್ಗೆ ಅವರೇ… : ಮೋದಿಯವರ ಟಾಂಗ್
ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಪ್ರಧಾನಿ ಮೋದಿ ಮಾತನಾಡಲು ನಿಂತಾಗ, ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಖರ್ಗೆ ಅವರತ್ತ ತಿರುಗಿದ ಪ್ರಧಾನಿ ಮೋದಿ, ನನ್ನದೊಂದು ವಿನಂತಿ ಇದೆ. ಖರ್ಗೆ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ಅವರು ಕುಳಿತುಕೊಂಡೇ ಘೋಷಣೆಗಳನ್ನು ಕೂಗಲು ಅವಕಾಶ ನೀಡಬೇಕು ಎಂದು ನಾನು ಅಧ್ಯಕ್ಷರಲ್ಲಿ ಮನವಿ ಮಾಡುತ್ತೇನೆ. ಅವರು ನಿಂತು ಕಷ್ಟಪಡುವ ಅಗತ್ಯವಿಲ್ಲ. ಅವರ ಹಿಂದೆ ಸಾಕಷ್ಟು ಮಂದಿ ಯುವಕರಿದ್ದಾರೆ, ಅವರು ಘೋಷಣೆ ಕೂಗಲಿ. ಖರ್ಗೆ ಅವರಿಗೆ ಕುಳಿತುಕೊಳ್ಳಲು ಅನುಮತಿ ನೀಡಿ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿಯವರ ಈ ಮಾತಿನಿಂದ ಆಡಳಿತ ಪಕ್ಷದ ಸಂಸದರು ನಗೆಗಡಲಲ್ಲಿ ತೇಲಿದರೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಗದ್ದಲದ ನಡುವೆಯೇ ಸತತ ಭಾಷಣ
ವಿರೋಧ ಪಕ್ಷಗಳು ವಿಪಕ್ಷ ನಾಯಕರಿಗೆ ಮಾತನಾಡಲು ಬಿಡಿ ಎಂದು ಘೋಷಣೆ ಕೂಗುತ್ತಿದ್ದರೂ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮುಂದುವರಿಸಿದ್ದಾರೆ. ಕಳೆದ ದಶಕದಲ್ಲಿ ಎನ್‌ಡಿಎ ಸರ್ಕಾರ ಮಾಡಿದ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ, ಕಾಂಗ್ರೆಸ್ ಅವಧಿಯ ತಪ್ಪುಗಳನ್ನು ಸರಿಪಡಿಸಲು ಸರ್ಕಾರ ಶ್ರಮಿಸುತ್ತಿದೆ ಎಂದರು. ಕೆಲವರು ಸುಮ್ಮನೆ ಕೂಗಾಡುತ್ತಿದ್ದಾರೆ, ಅವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ ಎಂದು ವಿರೋಧ ಪಕ್ಷದ ಸಭಾತ್ಯಾಗದ ಬಗ್ಗೆಯೂ ಲೇವಡಿ ಮಾಡಿದ್ದಾರೆ.
ಖರ್ಗೆ ಮತ್ತು ರಾಹುಲ್ ಗಾಂಧಿ ಕಿಡಿ
ಸದನದಿಂದ ಹೊರಬಂದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾವು ನಿಯಮಬದ್ಧವಾಗಿಯೇ ಚರ್ಚೆಗೆ ಆಗ್ರಹಿಸುತ್ತಿದ್ದೇವೆ. ಆದರೆ ಪ್ರಧಾನಿ ಮೋದಿ ಅವರು ಉತ್ತರ ನೀಡುವ ಬದಲು ವೈಯಕ್ತಿಕ ಟೀಕೆಗಳಲ್ಲಿ ತೊಡಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ












































