ಅಲ್ಪಸಂಖ್ಯಾತರ ಸಾಲಕ್ಕೆ ಬಡ್ಡಿ ಮನ್ನಾ ಮಾಡಿದ ಸರ್ಕಾರ!

Picture of Savistara

Savistara

Bureau Report

ಬೆಂಗಳೂರು (ಫೆ.6): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ 2013-14 ರಿಂದ 2018-19ನೇ ಸಾಲಿನವರೆಗೆ ವಿವಿಧ ಯೋಜನೆಗಳಡಿ ನೀಡಲಾಗಿರುವ ಸಾಲಗಳಿಗೆ ಒಟಿಎಸ್ ಅಡಿ ಬಡ್ಡಿ ಮನ್ನಾ ಮಾಡಲು ಸಂಪುಟ ಸಭೆ ನಿರ್ಧರಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್‌, ನಿಗಮದ ವಿವಿಧ ಯೋಜನೆಗಳ ಅಡಿ ಐದು ವರ್ಷದಲ್ಲಿ 981 ಕೋಟಿ ರು. ಸಾಲವನ್ನು ಫಲಾನುಭವಿಗಳಿಗೆ ನೀಡಲಾಗಿತ್ತು. ಈ ಪೈಕಿ 714 ಕೋಟಿ ರು. ವಸೂಲಾತಿ ಬಾಕಿ ಇದೆ. ಇವರಿಗೆ ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಬಡ್ಡಿ ಇಲ್ಲದೆ ವಸೂಲಾತಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ ಒತ್ತುವರಿಗೆ ಗುರಿಯಾಗಿರುವ 326 ದೇವಾಲಯಗಳ ಜಾಗದ ಒತ್ತುವರಿ ತೆರವುಗೊಳಿಸಿ ಆಸ್ತಿಗಳ ದಾಖಲೆಗಳನ್ನು ಡಿಜಟಲೀಕರಣಗೊಳಿಸಲು 15 ಕೋಟಿ ರು. ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ.

ಅಲ್ಲದೆ ಸಾರಥಿ ಯೋಜನೆಯಡಿ ಜಿಬಿಎ ವ್ಯಾಪ್ತಿಯಲ್ಲಿ ಆಟೋ ಖರೀದಿಗೆ 19.18 ಕೋಟಿ ರು. ವೆಚ್ಚದಲ್ಲಿ ಇ-ವೆಂಡಿಂಗ್ ವಾಹನ ಖರೀದಿಗೆ ಒಪ್ಪಿಗೆ ನೀಡಲಾಗಿದ್ದು, ಸಹಾಯಧನ ಒದಗಿಸಲು ಸರ್ಕಾರ ಒಪ್ಪಿಗೆ ನೀಡಿದೆ.ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ಬಳ್ಳಾರಿ, ರಾಯಚೂರಿನಲ್ಲಿ 100 ಕೋಟಿ ರು. ವೆಚ್ಚದಲ್ಲಿ ಅರಣ್ಯೀಕರಣ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ.

ಮೈಕ್ರೋಫೈನಾನ್ಸ್ ಪರಿಹಾರ ವಿಷಯ ಮುಂದೂಡಿಕೆ

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ಅವಲಂಬಿತರಿಗೆ ಪರಿಹಾರ ನೀಡುವ ವಿಚಾರದ ಬಗ್ಗೆ ಚರ್ಚೆ ಅಪೂರ್ಣವಾದ ಹಿನ್ನೆಲೆಯಲ್ಲಿ ವಿಷಯವನ್ನು ಮುಂದೂಡಲಾಗಿದೆ. ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ಸಾವಿಗೀಡಾದವರ ಕುಟುಂಬಗಳಿಗೆ 5 ಲಕ್ಷ ರು. ಪರಿಹಾರ ನೀಡಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಕೆಲ ಸದಸ್ಯರಿಂದ 10 ಲಕ್ಷ ರು. ಪರಿಹಾರ ನೀಡಬೇಕು. ಜತೆಗೆ 2025ರ ಜೂನ್‌ವರೆಗೆ ಮಾತ್ರ ಅಂಕಿ-ಅಂಶ ಸಂಗ್ರಹಿಸಿದ್ದು ಇತ್ತೀಚೆಗಿನ ಅಂಕಿ-ಅಂಶಗಳ ಆಧಾರದ ಮೇಲೆ ಪರಿಹಾರ ನೀಡಬೇಕು. ಜತೆಗೆ ಕಿರುಕುಳ ತಾಳಲಾರದೆ ಕೆಲ ಸಾಲಗಾರರು ತಿಂಗಳುಗಟ್ಟಲೆ ಊರು ಬಿಟ್ಟು ಹೋಗಿದ್ದು, ಅವರ ಕುಟುಂಬಗಳಿಗೂ ನೆರವಾಗಬೇಕು ಎಂಬ ಬೇಡಿಕೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ವಿಷಯವನ್ನು ಮುಂದೂಡಲಾಯಿತು ಎಂದು ಮೂಲಗಳು ತಿಳಿಸಿವೆ.

[t4b-ticker]
error: Content is protected !!